1.ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಮಲತಾಯಿ ಧೋರಣೆ: ಡಿಕೆ ಶಿವಕುಮಾರ್ ಆರೋಪ
ನವದೆಹಲಿ: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸಂಸದರು ರಾಜ್ಯದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಆರಂಭಿಸಬೇಕು ಎಂದು ಪ್ರಸ್ತಾಪ ಮಾಡಲಾಗಿತ್ತು. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಯಚೂರಿನಲ್ಲಿ ಜಾಗ ನೀಡುವುದು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಒಪ್ಪಿತ್ತು. ಆದರೆ, ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲಎಂದರು.

***************************************************************************************************
2.ಮೂಲಸೌಕರ್ಯ ಕೊರತೆಯಿರುವ ಪ್ಯಾರಾ ಮೆಡಿಕಲ್ ಕಾಲೇಜುಗಳ ಬಂದ್‘ಗೆ ಸರ್ಕಾರ ಆದೇಶ..!
ಬೆಂಗಳೂರು: ಮೂಲಸೌಕರ್ಯ ಮತ್ತು ಬೋಧನಾ ಮಾನದಂಡಗಳನ್ನು ಪೂರೈಸಲು ವಿಫಲವಾದ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜುಗಳ ಬಂದ್ ಮಾಡುವಂತೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಸೂಚನೆ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ನಡೆದ ರಾಜ್ಯ ಪ್ಯಾರಾ-ಮೆಡಿಕಲ್ ಮಂಡಳಿಯ ಪರಿಶೀಲನಾ ಸಭೆಯಲ್ಲಿ ಸಚಿವರು, ಹಲವಾರು ಖಾಸಗಿ ಕಾಲೇಜುಗಳಲ್ಲಿನ ನ್ಯೂನತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್ ಮತ್ತು ಪ್ಯಾರಾ-ಮೆಡಿಕಲ್ ಮಂಡಳಿಯ ವಿಶೇಷ ಅಧಿಕಾರಿ ಡಾ. ವಿಜಯ್ ಕುಮಾರ್ ಸೇರಿದಂತೆ ಅಧಿಕಾರಿಗಳು ಹಲವಾರು ಕಾಲೇಜುಗಳಲ್ಲಿರುವ ಲೋಪಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

**********************************************************************************************************************
3.ಏ.10ರೊಳಗೆ ಯತ್ನಾಳ್ ಉಚ್ಚಾಟನೆ ಆದೇಶ ಹಿಂಪಡೆಯಿರಿ, ಇಲ್ಲವೇ ಪ್ರತಿಭಟನೆ ಎದುರಿಸಿ: BJPಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಬೆಳಗಾವಿ: ಏ.10ರೊಳಗೆ ಬಸನಗೌಡ ಪಾಟೀಲd ಯತ್ನಾಳ್ ಅವರ ಉಚ್ಚಾಟನೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಏ.13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಶಿಸ್ತುಪಾಲನಾ ಸಮಿತಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಕ್ರಮ ಖಂಡಿಸಿ ಬೆಳಗಾವಿಯ ಗಾಂಧಿ ಭವನದಲ್ಲಿ ಇಂದು ಪಂಚಮಸಾಲಿ ಮುಖಂಡರು ಗುರುವಾರ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ “ಹಿಂದುತ್ವ ಪರ” ಮತ್ತು “ಅಭಿವೃದ್ಧಿ ಪರ” ನಾಯಕರನ್ನು ನಿಗ್ರಹಿಸುವ ಪಿತೂರಿ ಇದಾಗಿದೆ ಎಂದು ಕಿಡಿಕಾರಿದರು,

**********************************************************************************************************************
4. ಸಚಿವ ರಾಜಣ್ಣ ಅವರ ಮೇಲೆ ‘ಹನಿಟ್ರ್ಯಾಪ್‘ ಯತ್ನದ ಬಗ್ಗೆ ಸಿಐಡಿ ತನಿಖೆ ಆರಂಭ: MLC Rajendra
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ತನಿಖಾ ವಿಭಾಗದ (ಸಿಐಡಿ) ಅಧಿಕಾರಿಗಳು ತಮ್ಮ ತಂದೆಯನ್ನು ‘ಹನಿಟ್ರ್ಯಾಪ್’ ಮಾಡಲು ಯತ್ನಿಸಿದ ಆರೋಪದ ಬಗ್ಗೆ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ಸಚಿವ ಕೆ ಎನ್ ರಾಜಣ್ಣ ಅವರ ಪುತ್ರ ಮತ್ತು ಕಾಂಗ್ರೆಸ್ ಎಂಎಲ್ಸಿ ಕೆ ಎನ್ ರಾಜೇಂದ್ರ ಹೇಳಿದರು.
ತಮ್ಮ ಮೇಲೆ ನಡೆದಿರುವ “ಕೊಲೆ” ಯತ್ನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಕರ್ನಾಟಕ ಡಿಜಿಪಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರನ್ನು ಇಂದು ಭೇಟಿಯಾಗಿದ್ದಾಗಿ ರಾಜೇಂದ್ರ ತಿಳಿಸಿದರು.
‘ಹನಿಟ್ರ್ಯಾಪ್’ ಪ್ರಯತ್ನಗಳ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ನಾನು ನಂಬುತ್ತೇನೆ. ಸಿಐಡಿ ಇಲ್ಲಿನ ಜಯಮಹಲ್ ರಸ್ತೆಯಲ್ಲಿರುವ (ರಾಜಣ್ಣ ಅವರಿಗೆ ಹಂಚಿಕೆಯಾಗಿರುವ) ಸರ್ಕಾರಿ ಮನೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ಪ್ರಶ್ನಿಸಿತು. ಅವರು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ-ಇದು ನನ್ನ ಬಳಿ ಇರುವ ಮಾಹಿತಿ” ಎಂದು ರಾಜೇಂದ್ರ ತಿಳಿಸಿದ್ದಾರೆ.

***************************************************************************************************************
5. ಗದಗ-ಕುಸ್ಟಗಿ ರೈಲು ಮಾರ್ಗ ಏಪ್ರಿಲ್ನಲ್ಲಿ ಉದ್ಘಾಟಿಸಲು ರೈಲ್ವೆ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು: ಬಹುನಿರೀಕ್ಷಿತ ಗದಗ-ತಲ್ಕಲ್ ಜಂಕ್ಷನ್- ಕುಸ್ಟಗಿ ರೈಲು ಮಾರ್ಗದ ಉದ್ಘಾಟನೆಯನ್ನು ಏಪ್ರಿಲ್ನಲ್ಲಿ ನಿಗದಿಪಡಿಸುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಕೋರಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಅಭಿವೃದ್ಧಿಗೆ ನೀಡಿರುವ ದೀರ್ಘಕಾಲೀನ ಕೊಡುಗೆಗಳನ್ನು ಉಲ್ಲೇಖಿಸಿ, ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸುವಂತೆ ಅವರು ರೈಲ್ವೆ ಸಚಿವರನ್ನು ಇದೇ ವೇಳೆ ಒತ್ತಾಯಿಸಿದ್ದಾರೆ.
ರೈಲ್ವೆ ಸಚಿವರಿಗೆ ಬರೆದ ಪತ್ರದಲ್ಲಿ, ಆರ್ಥಿಕ ಬೆಳವಣಿಗೆ, ಪ್ರಾದೇಶಿಕ ಸಂಪರ್ಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ರೈಲ್ವೆ ಮೂಲಸೌಕರ್ಯವನ್ನು ವಿಸ್ತರಿಸುವುದು ನಿರ್ಣಾಯಕವಾಗಿದೆ. ಈ ದೃಷ್ಟಿಕೋನದೊಂದಿಗೆ. ಮುಂಬೈ-ಕರ್ನಾಟಕ ಮತ್ತು ಕಲ್ಯಾಣ-ಕರ್ನಾಟಕ ಪ್ರದೇಶಗಳ ನಡುವೆ ಪ್ರಮುಖ ಸಂಪರ್ಕವನ್ನು ಸ್ಥಾಪಿಸಲು ಗದಗ-ವಾಡಿ ರೈಲು ಮಾರ್ಗ ಯೋಜನೆಯನ್ನು 2013-14ರ ರೈಲ್ವೆ ಬಜೆಟ್ನಲ್ಲಿ ಅನುಮೋದಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.


