ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಕೊಣನೂರು ಪೊಲೀಸರು ಭೇದಿಸಿದ್ದು, ಸಾಲದ ಹಣದ ವಿಚಾರ ಹಾಗೂ ವೃದ್ಧೆಯ ಮೈಮೇಲಿದ್ದ ಚಿನ್ನಾಭರಣಗಳಿಗಾಗಿ ಕೊ*ಲೆ ಮಾಡಿದ್ದ ಆರೋಪದ ಮೇಲೆ ಅದೇ ಗ್ರಾಮದ ರಮೇಶ (58) ಎಂಬಾತನನ್ನು ಬಂಧಿಸಿದ್ದಾರೆ.
ಅಕ್ಟೋಬರ್ 7ರಂದು ಅರಕಲಗೂಡು ತಾಲ್ಲೂಕಿನ ಬೆಟ್ಟದಹಳ್ಳಿ ಗ್ರಾಮದ ಸಮೀಪದ ಹೇಮಾವತಿ ನಾಲೆಯಲ್ಲಿ ಲಕ್ಷ್ಮಮ್ಮ (67) ಅವರ ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿತ್ತು. ಮೃತದೇಹದ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು, ಅರಕಲಗೂಡು ಸಿಪಿಐ ವಸಂತ್ ಕೆ.ಎಂ. ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.
ಸಾಲದ ಹಣದ ವಿಚಾರವಾಗಿ ದ್ವೇಷ?
ಮೃತ ಲಕ್ಷ್ಮಮ್ಮ ಮತ್ತು ಆರೋಪಿ ರಮೇಶ ಒಂದೇ ಗ್ರಾಮದವರಾಗಿದ್ದು, ಲಕ್ಷ್ಮಮ್ಮ ರಮೇಶನಿಂದ ₹50 ಸಾವಿರ ಸಾಲ ಪಡೆದಿದ್ದರು ಎನ್ನಲಾಗಿದೆ. ಹಣ ವಾಪಸ್ ನೀಡುವಂತೆ ರಮೇಶ ಒತ್ತಾಯಿಸುತ್ತಿದ್ದರೂ ಲಕ್ಷ್ಮಮ್ಮ ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 3ರಂದು ವಿಜಿ ಕೊಪ್ಪಲಿಗೆ ಹೋಗಿ ಬರುವುದಾಗಿ ಪತಿಗೆ ತಿಳಿಸಿ ಲಕ್ಷ್ಮಮ್ಮ ಮನೆಯಿಂದ ಹೊರಟಿದ್ದರು. ಈ ವೇಳೆ ಮೊದಲೇ ಕೊಲೆಗೆ ಸಂಚು ರೂಪಿಸಿದ್ದ ರಮೇಶ, ಡ್ರಾಪ್ ನೀಡುವುದಾಗಿ ಹೇಳಿ ಅವರನ್ನು ಬೈಕ್ನಲ್ಲಿ ಕೂರಿಸಿಕೊಂಡು ಬೆಟ್ಟದಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಅಲ್ಲಿ ಹಣಕಾಸಿನ ವಿಚಾರವಾಗಿ ಜಗಳ ತೆಗೆದು ಲಕ್ಷ್ಮಮ್ಮ ಅವರ ಕಪಾಳಕ್ಕೆ ಹೊಡೆದು, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮೊದಲೇ ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ತುಂಬಿ ನಾಲೆಗೆ ಎಸೆದಿದ್ದಾನೆ ಎನ್ನಲಾಗಿದೆ.
120 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪಿ
ಕೊಲೆಗೂ ಮುನ್ನ ಲಕ್ಷ್ಮಮ್ಮ ಅವರ ಮೈಮೇಲಿದ್ದ ಚಿನ್ನದ ತಾಳಿ, ಕಾಸಿನ ಸರ, ವಾಲೆ, ಮಾಟಿ ಹಾಗೂ ಮೂರು ಉಂಗುರಗಳು ಸೇರಿದಂತೆ ಸುಮಾರು 120 ಗ್ರಾಂ ಚಿನ್ನಾಭರಣಗಳನ್ನು ಕಸಿದುಕೊಂಡಿದ್ದ ಎಂದು ಆರೋಪಿಸಲಾಗಿದೆ.
ಕದ್ದ ಚಿನ್ನಾಭರಣಗಳ ಪೈಕಿ ಒಂದು ಉಂಗುರವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ. ಉಳಿದ ಆಭರಣಗಳನ್ನು ಶುಂಠಿ ಬೆಳೆದಿದ್ದ ಜಮೀನಿನ ಸಮೀಪದ ಹಳೆಯ ಕೋಣೆಯೊಂದರಲ್ಲಿ ಪ್ಲಾಸ್ಟಿಕ್ ಪೈಪ್ಗಳ ಮಧ್ಯೆ ಬಚ್ಚಿಟ್ಟಿದ್ದ ಎನ್ನಲಾಗಿದೆ.
ತನಿಖೆ ಕೈಗೊಂಡ ಪೊಲೀಸರು ಆರೋಪಿ ರಮೇಶನನ್ನು ಬಂಧಿಸಿ, ಆತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸದಾ ಮೈಮೇಲೆ ಚಿನ್ನಾಭರಣಗಳನ್ನು ಧರಿಸುತ್ತಿದ್ದ ಲಕ್ಷ್ಮಮ್ಮ ಅಕ್ಟೋಬರ್ 3ರಿಂದ ನಾಪತ್ತೆಯಾಗಿದ್ದರು. ನಾಲ್ಕು ದಿನಗಳ ಬಳಿಕ ಅಕ್ಟೋಬರ್ 7ರಂದು ಅವರ ಮೃತದೇಹ ನಾಲೆಯಲ್ಲಿ ಪತ್ತೆಯಾಗಿತ್ತು. ಇದೀಗ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
