ಕೆ.ಆರ್.ಪೇಟೆ, ಅ.12: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್)ದಲ್ಲಿ ನಡೆದಿದೆ ಎನ್ನಲಾದ ಹಾಲಿನ ಪುಡಿ ಕಲಬೆರಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ತಾಲ್ಲೂಕಿನಲ್ಲಿ ಜೆಡಿಎಸ್ ಬೆಂಬಲಿತ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಧಿಕಾರಿಗಳು ಮತ್ತು ಮನ್ಮುಲ್ ನಿರ್ದೇಶಕರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವನ್ನು ಖಂಡಿಸಿ, ಜೆಡಿಎಸ್ ಕಾರ್ಯಕರ್ತರು ಸೋಮವಾರ ಕೆ.ಆರ್.ಪೇಟೆ ಪಟ್ಟಣದ ಮನ್ಮುಲ್ ಹಾಲು ಶಿಥಲೀಕರಣ ಘಟಕದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಶಾಸಕ ಎಚ್.ಟಿ. ಮಂಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಹಾಗೂ ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಹಾಲು ಉತ್ಪಾದಕರು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿ, ಮನ್ಮುಲ್ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಿಬಿಐ ತನಿಖೆಗೆ ಶಾಸಕ ಎಚ್.ಟಿ. ಮಂಜು ಆಗ್ರಹ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಎಚ್.ಟಿ. ಮಂಜು, ಮನ್ಮುಲ್ನಲ್ಲಿ ನಡೆದಿದೆ ಎನ್ನಲಾದ ಹಾಲಿನ ಪುಡಿ ಕಲಬೆರಕೆ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮನ್ಮುಲ್ನಲ್ಲಿ ಹಾಲಿನ ಪುಡಿ ಹಗರಣದ ಆರೋಪಗಳು ಆತಂಕ ಮೂಡಿಸಿವೆ. ಪ್ರಕರಣದಲ್ಲಿ ಅಧಿಕಾರಿಗಳ ಜತೆಗೆ ಪ್ರಭಾವಿ ನಿರ್ದೇಶಕರ ಪಾತ್ರವೂ ಇದೆ ಎಂಬ ಆರೋಪಗಳಿದ್ದು, ಸಮಗ್ರ ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತರು, ಹಾಲು ಉತ್ಪಾದಕರು ಹಾಗೂ ರೈತ ಮಹಿಳೆಯರ ಹಿತದೃಷ್ಟಿಯಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆ ಅಗತ್ಯವಾಗಿದೆ. ಮನ್ಮುಲ್ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪೊಲೀಸರ ಭದ್ರತೆ; ಅರ್ಧ ಗಂಟೆ ಸಂಚಾರ ಅಸ್ತವ್ಯಸ್ತ
ಪ್ರತಿಭಟನಾಕಾರರು ಮನ್ಮುಲ್ ಶಿಥಲೀಕರಣ ಘಟಕದ ಒಳಗೆ ಪ್ರವೇಶಿಸದಂತೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಮತ್ತು ಹಾಲು ಉತ್ಪಾದಕರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರಿಂದ ಮುಖ್ಯ ರಸ್ತೆಯಲ್ಲಿ ಬಸ್ಸುಗಳು ಮತ್ತು ಲಾರಿಗಳು ಸಾಲುಗಟ್ಟಿ ನಿಂತು ಸುಮಾರು ಅರ್ಧ ಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಪೊಲೀಸರು ಪ್ರತಿಭಟನಾಕಾರರಿಗೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿದರು. ಇದರಿಂದ ಸಂಚಾರ ಸುಗಮವಾಯಿತು.

ಮನವಿ ಸ್ವೀಕರಿಸಿದ ಅಧಿಕಾರಿಗಳು
ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನ್ಮುಲ್ ಅಧಿಕಾರಿಗಳು ಹಾಗೂ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಜೆಡಿಎಸ್ ಬೆಂಬಲಿತ ಸಂಘಗಳು ಸೇರಿದಂತೆ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಮಾನವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು. ಯಾವುದೇ ಸಂಘಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು. ಬಳಿಕ ಪ್ರತಿಭಟನಾಕಾರರು ಸಂಜೆ 4.30ರ ಸುಮಾರಿಗೆ ಪ್ರತಿಭಟನೆಯನ್ನು ಹಿಂಪಡೆದರು.
ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ಕುಮಾರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಸಮಿತಿ ಸದಸ್ಯರಾದ ಅಕ್ಕಿಹೆಬ್ಬಾಳು ರಘು, ರಾಜೇನಹಳ್ಳಿ ಕುಮಾರಸ್ವಾಮಿ, ತಾಲ್ಲೂಕು ಕಾರ್ಯಾಧ್ಯಕ್ಷ ಮೆಣಸ ಮಹದೇವೇಗೌಡ, ಉಪಾಧ್ಯಕ್ಷ ನಂಜೇಗೌಡ, ಯುವ ಘಟಕದ ಅಧ್ಯಕ್ಷ ಮೀಸೆ ಮಹದೇವೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
