ಒಂದು ಪುಟ್ಟ ಊರಿನಲ್ಲಿ ಒಬ್ಬ ಪುಟ್ಟ ಹುಡುಗನಿದ್ದ. ಅವನಿಗೊಂದು ಕಾಯಿಲೆಯಿತ್ತು. ಅದೇನೆಂದರೆ, ಯಾವಾಗಲೂ ಸುಳ್ಳು ಹೇಳುವುದು. ಅದು ಅವನಿಗೆ ಚಟವಾಗಿ ಬಿಟ್ಟಿತ್ತು. ಎಷ್ಟರಮಟ್ಟಿಗೆ ಎಂದರೆ, ಈಗ ಅವನಿಗೆ ಸುಳ್ಳು ಹೇಳದೇ ಇರಲು ಸಾಧ್ಯವಾಗುತ್ತಿರಲಿಲ್ಲ.
ಪುಟ್ಟ ಊರಾದ್ದರಿಂದ ಅವನ ಸುತ್ತಮುತ್ತ ಪರಿಚಯವಿದ್ದವರೂ ಕಡಿಮೆ ಜನರೇ ಇದ್ದರು. ಅವನು ಪದೇಪದೇ ಸುಳ್ಳು ಹೇಳುವುದನ್ನು ಕೇಳಿ ಕೇಳಿ ಬೇಸತ್ತ ಜನರು, ಕೊನೆಗೆ ಅವನಿಂದ ದೂರ ಸರಿಯಲು ಪ್ರಾರಂಭಿಸಿದರು.
ನಂತರ ಅವನಿಗೆ ಹೊಸ ಜನರ ಪರಿಚಯವಾಯಿತು. ಅವರೂ ಇವನಂತೆಯೇ ಸುಳ್ಳು ಹೇಳುವವರಾಗಿದ್ದರು. ಹೀಗಾಗಿ, ಅವರ ಸುಳ್ಳುಗಳ ನಡುವೆ ಇವನ ಸುಳ್ಳುಗಳೂ ಸರಾಗವಾಗಿ ಬೆರೆತುಹೋದವು.
ಒಂದು ದಿನ ಒಂಟಿಯಾಗಿ ಕುಳಿತಿದ್ದಾಗ ಆ ಹುಡುಗನಿಗೆ ಒಂದು ಆಲೋಚನೆ ಬಂತು.
“ಹಿಂದೆ ನಾನು ಸುಳ್ಳು ಹೇಳುತ್ತಿದ್ದಾಗಲೂ ನನ್ನನ್ನು ಸಹಿಸಿಕೊಂಡು, ನನ್ನೊಂದಿಗೆ ಇದ್ದವರು ಕೆಲವರಿದ್ದರು. ಆಗ ನಾನು ಪ್ರಯತ್ನಿಸಿದ್ದರೆ, ಬಹುಶಃ ಸತ್ಯ ಹೇಳುವುದನ್ನು ಕಲಿಯಬಹುದಿತ್ತು. ಆದರೆ, ಇಂದು ನನ್ನ ಸುತ್ತಲಿರುವವರೆಲ್ಲರೂ ಸುಳ್ಳುಗಾರರೇ. ಅವರೊಂದಿಗೆ ಬೆರೆತು ಬದುಕುವ ಅವಕಾಶವನ್ನೂ ಕಳೆದುಕೊಂಡಿದ್ದೇನೆ. ಸತ್ಯ ನನ್ನಿಂದ ಬಹಳ ದೂರದಲ್ಲಿಯೇ ಉಳಿದುಬಿಟ್ಟಿತು” ಎಂದು ಪಶ್ಚಾತ್ತಾಪಪಟ್ಟ.
ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು.
ವಾಣಿಮಹೇಶ್, ಹಾಸನ
ಫೋನ್: 7975353693
