ಕೆ.ಆರ್.ಪೇಟೆ, ಅ. 13: ಪ್ರೀತಿಯ ವಿಚಾರಕ್ಕೆ ಬುದ್ಧಿವಾದ ಹೇಳಿದ್ದ ಅಜ್ಜಿಯನ್ನೇ ಮೊಮ್ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಆರೋಪ ಕೇಳಿಬಂದಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದ ಮೊಮ್ಮಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆರೋಪಿಯಾಗಿರುವ ಆಕೆಯ ಪ್ರಿಯಕರ ಆಕಾಶ್ ನಾಪತ್ತೆಯಾಗಿದ್ದಾನೆ.
ಬುದ್ಧಿವಾದ ಹೇಳಿದ್ದೇ ದ್ವೇಷಕ್ಕೆ ಕಾರಣವಾಯಿತೇ?
ಬೂಕನಕೆರೆ ಗ್ರಾಮದ ಮಹದೇವಮ್ಮ (52) ಕೊಲೆಯಾದವರು. ಅವರ ಮೊಮ್ಮಗಳು (16) ಹಾಗೂ ಬೆಳತೂರು ಗ್ರಾಮದ ಆಕಾಶ್ (23) ಪ್ರಕರಣದ ಆರೋಪಿಗಳೆಂದು ಪೊಲೀಸರು ಶಂಕಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಮೊಮ್ಮಗಳು ಆಕಾಶ್ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದಿದ್ದ ಅಜ್ಜಿ, ಮೊಮ್ಮಗಳಿಗೆ ಬುದ್ಧಿವಾದ ಹೇಳಿ ಓದಿನ ಕಡೆ ಗಮನಹರಿಸುವಂತೆ ಸೂಚಿಸಿದ್ದರು. ಯುವಕನಿಗೆ ಗ್ರಾಮಸ್ಥರೂ ತಿಳಿವಳಿಕೆ ಹೇಳಿ, ಬಾಲಕಿ ಅಪ್ರಾಪ್ತೆಯಾಗಿರುವುದರಿಂದ ಆಕೆಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಇದರಿಂದ ಅಸಮಾಧಾನಗೊಂಡಿದ್ದ ಮೊಮ್ಮಗಳು ಪ್ರಿಯಕರನೊಂದಿಗೆ ಸೇರಿ ಅಜ್ಜಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.

ಮಂಚದ ಮೇಲೆಯೇ ಕೊಲೆ ಮಾಡಿರುವ ಶಂಕೆ
ಅಮಾವಾಸ್ಯೆ ಹಬ್ಬದ ದಿನದಂದು ಮನೆಯಲ್ಲಿ ಮಲಗಿದ್ದ ಮಹದೇವಮ್ಮ ಅವರ ಬಾಯಿಗೆ ಬಟ್ಟೆ ತುರುಕಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಮೃತರ ಸಂಬಂಧಿ ರವಿಕುಮಾರ್ ಮನೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.

ಪ್ರಿಯಕರನಿಗಾಗಿ ಪೊಲೀಸರ ಶೋಧ
ಮೃತ ಮಹದೇವಮ್ಮ ಅವರ ಸಂಬಂಧಿ ರವಿಕುಮಾರ್ ನೀಡಿದ ದೂರಿನ ಮೇರೆಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್ಪೆಕ್ಟರ್ ಮಹೇಶ್ ಹಾಗೂ ಸಬ್ಇನ್ಸ್ಪೆಕ್ಟರ್ ಸಿದ್ದಲಿಂಗಬಾನ್ಸಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮೊಮ್ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನಾಪತ್ತೆಯಾಗಿರುವ ಆಕಾಶ್ನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಚೆಲುವರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದ ಬೂಕನಕೆರೆ ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ. ಪ್ರಕರಣದ ನೈಜಾಂಶ ತನಿಖೆಯಿಂದ ಹೊರಬರಬೇಕಿದ್ದು, ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.
– ಶ್ರೀನಿವಾಸ್ ಆರ್.
