ಶುಕ್ರವಾರ ಪ್ರಬಲ 7.2 ತೀವ್ರತೆಯ ಭೂಕಂಪ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ಅನ್ನು ಅಲುಗಾಡಿಸಿದೆ. ಮ್ಯಾನ್ಮಾರ್ನಲ್ಲೂ ಭೂಕಂಪ ಆಗಿದೆ. ಇದಲ್ಲದೇ ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಮೇಘಾಲಯದಲ್ಲಿ ಸೌಮ್ಯ ಕಂಪನಗಳು ಅನುಭವಕ್ಕೆ ಬಂದವು.
ಭಾರತದ ಈಶಾನ್ಯ ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಮ್ಯಾನ್ಮಾರ್ ದೇಶದಲ್ಲಿ ಶುಕ್ರವಾರ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ಈವರೆಗೂ ಯಾವುದೇ ಪ್ರಾಣ ಹಾನಿಯಾದ ವರದಿಯಿಲ್ಲ. ಆದರೆ ಕಟ್ಟಡಗಳು ಕುಸಿತ ಕಂಡು ಅವಶೇಷಗಳಡಿ ಹಲವರು ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಮ್ಯಾನ್ಮಾರ್ನಲ್ಲಿ ಬೆಳಿಗ್ಗೆಯಿಂದಲೂ ತ್ವರಿತಗತಿಯಲ್ಲಿ ಸಾಗಿದೆ. ಶುಕ್ರವಾರ ಮ್ಯಾನ್ಮಾರ್ ಜತೆಗೆ ಥೈಲ್ಯಾಂಡ್ನಲ್ಲಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಅದರ ಪರಿಣಾಮ ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಮೇಘಾಲಯದಲ್ಲಿಯೂ ಅನುಭವಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD), ಮಣಿಪುರ ಕೇಂದ್ರ, ಭೂ ವಿಜ್ಞಾನ ಸಚಿವಾಲಯದ ಪ್ರಾಥಮಿಕ ಸ್ಥಳ ವರದಿಯ ಪ್ರಕಾರ, ಮೊದಲ 7.2 ತೀವ್ರತೆಯ ಭೂಕಂಪ ಬೆಳಿಗ್ಗೆ 11:50 ರ ಸುಮಾರಿಗೆ ಸಂಭವಿಸಿದರೆ, ಎರಡನೇ 7 ತೀವ್ರತೆಯ ಭೂಕಂಪ ಮಧ್ಯಾಹ್ನ 12:02 ರ ಸುಮಾರಿಗೆ ಸಂಭವಿಸಿದೆ.
ಆದಾಗ್ಯೂ, ಮ್ಯಾನ್ಮಾರ್ನೊಂದಿಗೆ 390 ಕಿ.ಮೀ ಗಿಂತಲೂ ಹೆಚ್ಚು ಉದ್ದದ ಅಂತರರಾಷ್ಟ್ರೀಯ ಗಡಿ ಹಂಚಿಕೊಳ್ಳುವ ಮಣಿಪುರದಲ್ಲಿ ವರದಿಯನ್ನು ಸಲ್ಲಿಸುವವರೆಗೂ ಯಾವುದೇ ಹಾನಿಯ ವರದಿ ಆಗಿಲ್ಲ. ಮೊದಲ ಭೂಕಂಪ ರಾಜಧಾನಿಯನ್ನು ಅಲುಗಾಡಿಸಿದಾಗ ಇಂಫಾಲ್ನ ರೂಪಮಹಲ್ ಕೆರೆಯಲ್ಲಿನ ಸ್ಥಳೀಯರು ತಮ್ಮ ಮನೆಗಳಿಂದ ಹೊರಬಂದರು.
ನಾವು ಮೊದಲ ಭೂಕಂಪವನ್ನು ಅನುಭವಿಸಿದೆವು ನಮ್ಮ ಕೆರೆಯಲ್ಲಿನ ನೀರು ಅಲುಗಾಡುತ್ತಿತ್ತು ಎಂದು ಇಂಫಾಲ್ ಪಟ್ಟಣದ ಕಾಂಗ್ಜಾಬಿ ಲೇರಾಕ್ ನಗಮಪಾಲ್ನ ನಿವಾಸಿ ಹೇಳಿದರು.

ಶುಕ್ರವಾರ 7.7 ತೀವ್ರತೆಯ ಭೂಕಂಪ ಥೈಲ್ಯಾಂಡ್ ಮತ್ತು ನೆರೆಯ ಮ್ಯಾನ್ಮಾರ್ ಅನ್ನು ಅಲುಗಾಡಿಸಿದ ನಂತರ ಬ್ಯಾಂಕಾಕ್ನಲ್ಲಿ ನಿರ್ಮಾಣ ಹಂತದಲ್ಲಿರುವ ಎತ್ತರದ ಕಟ್ಟಡ ಕುಸಿಯಿತು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಕುರಿತ ವೀಡಿಯೊದಲ್ಲಿ, ಮೇಲ್ಭಾಗದಲ್ಲಿ ಕ್ರೇನ್ ಇರುವ ಬಹುಮಹಡಿ ಕಟ್ಟಡ ಕುಸಿದು ಬೀಳುತ್ತಿರುವುದು, ಜನರು ಕೂಗಾಡುತ್ತಾ ಓಡುತ್ತಿರುವುದು. ಕೆಲವರನ್ನು ಕಟ್ಟಡದ ಅವಶೇಷಗಳ ಅಡಿಯಿಂದ ರಕ್ಷಿಸಿಕೊಂಡು ಬರಲಾಗಿದ್ದು, ಕೂಡಲೇ ತಮ್ಮವರನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುವ ಭಾವನಾತ್ಮಕ ಸನ್ನಿವೇಶಗಳೂ ಅಲ್ಲಲ್ಲಿ ಕಂಡುಬಂದಿದೆ.
ಬ್ಯಾಂಕಾಕ್ನ ಜನಪ್ರಿಯ ಚಾಟುಚಾಕ್ ಮಾರುಕಟ್ಟೆಯ ಬಳಿ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಕಾರ್ಯಕರ್ತರು ಧಾವಿಸಿದರು. ಕುಸಿತದ ಸಮಯದಲ್ಲಿ ಸಮಯದಲ್ಲಿ ಎಷ್ಟು ಕಾರ್ಮಿಕರು ಸ್ಥಳದಲ್ಲಿದ್ದರು ಎಂಬುದರ ಕುರಿತು ತಕ್ಷಣದ ಮಾಹಿತಿಯಿಲ್ಲ ಎಂದು ಪೊಲೀಸರು ದಿ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ.

ಯುಎಸ್ ಜಿಯೋಲಾಜಿಕಲ್ ಸರ್ವೆ ಮತ್ತು ಜರ್ಮನಿಯ ಭೂವಿಜ್ಞಾನ ಕೇಂದ್ರವು ಪ್ರಾಥಮಿಕ ವರದಿಗಳ ಪ್ರಕಾರ, ಭೂಕಂಪವು 10 ಕಿ.ಮೀ (6.2 ಮೈಲಿ) ಆಳದಲ್ಲಿದ್ದು, ಮ್ಯಾನ್ಮಾರ್ನಲ್ಲಿ ಅದರ ಕೇಂದ್ರಬಿಂದು ಇದೆ ಎಂದು ಸುದ್ದಿ ಸಂಸ್ಥೆ ಎಸಿ ವರದಿ ಮಾಡಿದೆ.
ಭೂಕಂಪದಿಂದ ಬ್ಯಾಂಕಾಕ್ನಲ್ಲಿ ಕೆಲವು ಮೆಟ್ರೋ ಮತ್ತು ಲೈಟ್ ರೈಲು ಸೇವೆಗಳು ಸ್ಥಗಿತಗೊಂಡವು, ಅಲ್ಲಿ ಥಾಯ್ ಪ್ರಧಾನಿ ಪೇಟಾಂಗ್ಟಾರ್ನ್ ಶಿನವಾತ್ರಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಆದರೆ ಎಲ್ಲಿಯೂ ಸುನಾಮಿ ಮುನ್ನೆಚ್ಚರಿಕೆ ಘೋಷಣೆಯನ್ನು ಮಾಡಿಲ್ಲ.
ಮ್ಯಾನ್ಮಾರ್ನಲ್ಲಿ ಭೂಕಂಪಗಳು ಸಾಮಾನ್ಯ ಎನ್ನುವ ವಾತಾವರಣವಿದೆ. ಶತಮಾನದಿಂದಲೂ ಇಲ್ಲಿ ಪ್ರಬಲ ಭೂಕಂಪಗಳೇ ಸಂಭವಿಸಿವೆ. ಲಘು ಭೂಕಂಪಗಳು ಆಗಾಗ ದಾಖಲಾಗುತ್ತಲೇ ಇರುತ್ತವೆ. 1930 ಮತ್ತು 1956 ರ ನಡುವೆ ದೇಶದ ಮಧ್ಯಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಚಲಿಸುವ ಸಾಗೈಂಗ್ ತಪ್ಪಲಿನ ಬಳಿ 7.0 ತೀವ್ರತೆ ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಆರು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ಯುಎಸ್ಜಿಎಸ್ ತಿಳಿಸಿದೆ.
