ಬೆಂಗಳೂರು: ಮಿಸ್ ಕಾಸ್ಮೊ 2026ರಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಿಸ್ ದಿವಾ ಕಾಸ್ಮೊ 2025 ಅವನಿ ಕೇಕೆಕೊಚ್ಚಿ ಅವರು ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿನೂತನ ಎಲ್ಪಿಜಿ ನಿರ್ವಹಣಾ ವ್ಯವಸ್ಥೆ ರಿಗ್ಯಾಸ್ ಅನ್ನು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.
ಗೃಹಬಳಕೆದಾರರು, ಶಿಕ್ಷಣ ಹಾಗೂ ವಾಣಿಜ್ಯ ಸಂಸ್ಥೆಗಳು ಮತ್ತು ಸಮುದಾಯಗಳನ್ನು ರಕ್ಷಿಸಲು ಎಲ್ಪಿಜಿ ಸುರಕ್ಷತಾ ಜಾಗೃತಿ ಮೂಡಿಸುವ ಹಾಗೂ ಮುನ್ನೆಚ್ಚರಿಕಾ ಪರಿಹಾರಗಳನ್ನು ಉತ್ತೇಜಿಸುವ ಅವರ ಬದ್ಧತೆಗೆ ಈ ಕಾರ್ಯಕ್ರಮವು ಸಾಕ್ಷಿಯಾಯಿತು.

ಬೆಂಗಳೂರಿನ ಲಘು ಉದ್ಯೋಗ ಭಾರತಿ, ಕರ್ನಾಟಕ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ಅವರು ಗಣ್ಯರು ಹಾಗೂ ಆಹ್ವಾನಿತರ ಸಮ್ಮುಖದಲ್ಲಿ ಈ ವಿನೂತನ ಉತ್ಪನ್ನವನ್ನು ಉದ್ಘಾಟಿಸಿದರು.
ಸುಪ್ರಮ್ ಟೆಕ್ನಾಲಜೀಸ್ ಆಂಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿ ಅವನಿ ಕೇಕೆಕೊಚ್ಚಿ ಅವರ ನಾಯಕತ್ವದಲ್ಲಿ ಅಭಿವೃದ್ಧಿಪಡಿಸಲಾದ ರಿಗ್ಯಾಸ್, ಎಲ್ಪಿಜಿ ಸುರಕ್ಷತೆ ಮತ್ತು ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಪರಿಹಾರವನ್ನು ಒದಗಿಸುತ್ತದೆ. ಎಲ್ಪಿಜಿ ಸೋರಿಕೆಯಂತಹ ಅಪಾಯಗಳ ಮುನ್ಸೂಚನೆ (ಅಲರ್ಟ್) ನೀಡುವುದು, ತುರ್ತು ಸನ್ನದ್ಧತೆಯನ್ನು ಹೆಚ್ಚಿಸುವುದು ಹಾಗೂ ಸಿಲಿಂಡರ್ ಪತ್ತೆಹಚ್ಚುವಿಕೆ (ಟ್ರ್ಯಾಕಿಂಗ್) ಮತ್ತು ಮರುಪೂರಣವನ್ನು (ರೀಫಿಲ್ಲಿಂಗ್) ಸುಲಭಗೊಳಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ದೇಶಾದ್ಯಂತ ಅಡುಗೆ ಅನಿಲವನ್ನೇ ನೆಚ್ಚಿಕೊಂಡಿರುವ ಕೋಟ್ಯಂತರ ಕುಟುಂಬಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆಗೆ ಮುಕ್ತಿ ಹಾಡುವುದು ಈ ಆವಿಷ್ಕಾರದ ಗುರಿಯಾಗಿದೆ. “ಪ್ರತಿಯೊಂದು ಮನೆಗೂ ಸುರಕ್ಷಿತ ನಾಳೆಯನ್ನು ಕಾಣುವ ಹಕ್ಕಿದೆ” ಎಂಬ ಧ್ಯೇಯವಾಕ್ಯದಡಿ ರೂಪುಗೊಂಡಿರುವ ರಿಗ್ಯಾಸ್, ಕೇವಲ ತಾಂತ್ರಿಕ ಪರಿಹಾರಕ್ಕಷ್ಟೇ ಸೀಮಿತವಾಗಿರದೆ, ಎಲ್ಪಿಜಿ-ಸಂಬಂಧಿತ ಅಪಾಯಗಳ ಕುರಿತು ಜನರಲ್ಲಿ ನಿರಂತರ ಜಾಗೃತಿ, ಮುನ್ನೆಚ್ಚರಿಕೆ ಮತ್ತು ಸಮಯೋಚಿತ ಸ್ಪಂದನೆಯ ಸಂಸ್ಕೃತಿಯನ್ನು ಬೆಳೆಸುವ ಬೃಹತ್ ಸಾಮಾಜಿಕ ಆಂದೋಲನಕ್ಕೆ ಭದ್ರ ಬುನಾದಿ ಹಾಕಿದೆ.
ದೊಡ್ಡ ಧ್ಯೇಯಕ್ಕೆ ಪ್ರೇರಣೆಯಾದ ವೈಯಕ್ತಿಕ ದುರಂತ
ಅವನಿ ಅವರಿಗೆ ರಿಗ್ಯಾಸ್ ಆವಿಷ್ಕಾರದ ಹಿಂದಿರುವ ಪ್ರೇರಣೆ ಅತ್ಯಂತ ನೋವಿನ ಹಾಗೂ ವೈಯಕ್ತಿಕವಾದುದಾಗಿದೆ. ಕೋವಿಡ್-19 ಸಾಂಕ್ರಾಮಿಕದ ದಿನಗಳಲ್ಲಿ ಸಂಭವಿಸಿದ ಎಲ್ಪಿಜಿ ಸಿಲಿಂಡರ್ ಅವಘಡವೊಂದರಲ್ಲಿ ಅವರು ತಮ್ಮ ಸ್ವಂತ ಚಿಕ್ಕಮ್ಮನನ್ನು ಕಳೆದುಕೊಂಡಿದ್ದರು. ಅಂತಹ ದುರಂತಗಳು ಸಂತ್ರಸ್ತ ಕುಟುಂಬಗಳ ಮೇಲೆ ಬೀರುವ ಭೀಕರ ಭಾವನಾತ್ಮಕ ಆಘಾತ ಮತ್ತು ಆರ್ಥಿಕ ನಷ್ಟಗಳನ್ನು ಅವರು ಕಣ್ಣಾರೆ ಕಂಡಿದ್ದರು. ಈ ಕಹಿ ಘಟನೆಯೇ ಇಂತಹ ಅವಘಡಗಳು ಇನ್ನೆಂದೂ ಮರುಕಳಿಸದಂತೆ ತಡೆಯಬಲ್ಲ ಪರಿಣಾಮಕಾರಿ ಆವಿಷ್ಕಾರವನ್ನು ಅಭಿವೃದ್ಧಿಪಡಿಸುವ ಅವರ ಸಂಕಲ್ಪಕ್ಕೆ ಪ್ರೇರಣೆಯಾಯಿತು.

ಸುರಕ್ಷತೆ ಎಂಬುದು ಪ್ರತಿಯೊಬ್ಬರ ನಿತ್ಯಜೀವನದ ಮೂಲಭೂತ ಅಂಗವಾಗಬೇಕು ಎಂಬ ಆಶಯ ಹೊಂದಿರುವ ಅವನಿ, ಎಲ್ಪಿಜಿ ಸುರಕ್ಷತಾ ಜಾಗೃತಿಯನ್ನು ಪ್ರಥಮ ಚಿಕಿತ್ಸೆಯಷ್ಟೇ ಸಹಜ ಹಾಗೂ ಜನಸಾಮಾನ್ಯರಿಗೆ ಪರಿಚಿತವಾಗಿಸುವ ಧ್ಯೇಯ ಹೊಂದಿದ್ದಾರೆ. ಅಪಾಯಗಳನ್ನು ಮೊದಲೇ ಗ್ರಹಿಸುವ, ಅವಘಡದ ಸಮಯದಲ್ಲಿ ಸೂಕ್ತವಾಗಿ ಸ್ಪಂದಿಸುವ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಗೆ ಮೊದಲ ಆದ್ಯತೆ ನೀಡುವ ಅರಿವನ್ನು ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ಮೂಡಿಸುವುದು ಅವರ ಗುರಿಯಾಗಿದೆ.
ತಮ್ಮ ಬೆಂಬಲಿತ ಅಗ್ನಿ ಸುರಕ್ಷತಾ ಜಾಗೃತಿ ಅಭಿಯಾನವಾದ ಪ್ರಾಜೆಕ್ಟ್ ಸುರಕ್ಷಾ ಮೂಲಕ ಅವನಿ ಅವರು ಈ ಸಂದೇಶವನ್ನು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಡದೆ ಜನಸಾಮಾನ್ಯರ ಮನೆಬಾಗಿಲಿಗೆ ಕೊಂಡೊಯ್ಯುತ್ತಿದ್ದಾರೆ. ಮನೆಗಳ ಸುರಕ್ಷತೆ, ತುರ್ತು ಸನ್ನದ್ಧತೆ ಮತ್ತು ಜವಾಬ್ದಾರಿಯುತ ಅಡುಗೆ ಅನಿಲ ಬಳಕೆಯ ಕುರಿತು ಸಾರ್ವಜನಿಕ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಹಯೋಗದೊಂದಿಗೆ ಕೈಜೋಡಿಸಿರುವ ಪ್ರಾಜೆಕ್ಟ್ ಸುರಕ್ಷಾ, ದೇಶಾದ್ಯಂತ ಇರುವ ಕುಟುಂಬಗಳಿಗೆ ರಿಗ್ಯಾಸ್ ಹಾಗೂ ಎಲ್ಪಿಜಿ ಸುರಕ್ಷತಾ ಜಾಗೃತಿಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಹೊಂದಿದೆ. ವಿಶೇಷವಾಗಿ ಇಂತಹ ಮುನ್ನೆಚ್ಚರಿಕಾ ತಂತ್ರಜ್ಞಾನ ಮತ್ತು ಸುರಕ್ಷತಾ ಶಿಕ್ಷಣದ ತೀವ್ರ ಅಗತ್ಯವಿರುವ ಸಮುದಾಯಗಳಿಗೆ ಇದನ್ನು ಅತ್ಯಂತ ಸುಲಭವಾಗಿ ತಲುಪಿಸುವುದು ಈ ಯೋಜನೆಯ ಮೂಲ ಉದ್ದೇಶ.
ಭಾರತದ ರಾಷ್ಟ್ರೀಯ ಎಲ್ಪಿಜಿ ತುರ್ತು ಸಹಾಯವಾಣಿ ಸಂಖ್ಯೆ 1906 ಅನ್ನು 100ರಷ್ಟೇ ಪ್ರತಿಯೊಬ್ಬ ನಾಗರಿಕನಿಗೂ ತಕ್ಷಣ ನೆನಪಾಗುವಂತೆ ಮಾಡುವುದು ಅವನಿ ಅವರ ಜಾಗೃತಿ ಅಭಿಯಾನದ ಪ್ರಮುಖ ಸ್ತಂಭವಾಗಿದೆ. ಇದರಿಂದ ಎಲ್ಪಿಜಿ ಸಂಬಂಧಿತ ಯಾವುದೇ ತುರ್ತು ಸಂದರ್ಭ ಎದುರಾದರೂ ಜನಸಾಮಾನ್ಯರು ಎಲ್ಲಿಗೆ ಕರೆ ಮಾಡಿ ನೆರವು ಪಡೆಯಬೇಕೆಂಬ ಗೊಂದಲವಿಲ್ಲದೆ ಸ್ಪಷ್ಟತೆ ಹೊಂದಲು ಸಾಧ್ಯವಾಗುತ್ತದೆ.
ಸಾರ್ವಜನಿಕ ಜಾಗೃತಿ, ಸಮುದಾಯಗಳ ಸಕ್ರಿಯ ಭಾಗಿತ್ವ ಮತ್ತು ಶಿಕ್ಷಣದ ಮೂಲಕ ತುರ್ತು ಸನ್ನದ್ಧತೆಯನ್ನು ದೈನಂದಿನ ಜೀವನದ ಸಹಜ ಪ್ರವೃತ್ತಿಯನ್ನಾಗಿ ಪರಿವರ್ತಿಸುವುದು ಅವರ ಆಶಯವಾಗಿದೆ.
ಕರ್ನಾಟಕದಿಂದ ದೇಶದ ಮೂಲೆ ಮೂಲೆಗೆ
ಕರ್ನಾಟಕದಲ್ಲೇ ಉಗಮವಾಗಿರುವ ಈ ಮಹತ್ವದ ಯೋಜನೆ, ದೇಶಿಯ ನಾವೀನ್ಯತೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉದ್ಯಮಶೀಲತೆಗೆ ನಮ್ಮ ರಾಜ್ಯ ನೀಡುತ್ತಿರುವ ಗಣನೀಯ ಕೊಡುಗೆಯನ್ನು ಜಗತ್ತಿಗೆ ಸಾರುತ್ತಿದೆ.
ರಿಗ್ಯಾಸ್ ಯೋಜನೆಯು ಈಗಾಗಲೇ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಎಲಿವೇಟ್ ಪ್ರಶಸ್ತಿ ಹಾಗೂ ₹11 ಲಕ್ಷ ಅನುದಾನವನ್ನು ಪಡೆದುಕೊಂಡಿದ್ದು, ಯೋಜನೆಯ ಕ್ಷಿಪ್ರ ಬೆಳವಣಿಗೆ ಹಾಗೂ ಸಾರ್ವಜನಿಕ ಪ್ರಸಾರಕ್ಕೆ ಹೊಸ ಬಲ ತಂದುಕೊಟ್ಟಿದೆ.
ತನ್ನ ಉದ್ದೇಶಿತ ಸಾಮಾಜಿಕ ಪರಿಣಾಮಗಳ ನೀಲನಕ್ಷೆಯ ಭಾಗವಾಗಿ ಈ ಯೋಜನೆಯು ನೀತಿ ನಿರೂಪಕರು, ಜನಪ್ರತಿನಿಧಿಗಳು, ಸುರಕ್ಷತಾ ತಜ್ಞರು, ಎಲ್ಪಿಜಿ ವಿತರಕರು, ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಪಾಲುದಾರರು ಹಾಗೂ ಸಮುದಾಯ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಗುರಿ ಹೊಂದಿದೆ. ಪ್ರಾಜೆಕ್ಟ್ ಸುರಕ್ಷಾ ಅಡಿಯಲ್ಲಿ ಬಿಪಿಸಿಎಲ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಪಾಲುದಾರಿಕೆಯು ಸಾರ್ವಜನಿಕ ಸಂಪರ್ಕವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದು, ಮನೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಎಲ್ಪಿಜಿ ಸುರಕ್ಷತಾ ನಿಯಮಗಳ ಪಾಲನೆಯನ್ನು ಚಾಚೂತಪ್ಪದೆ ಅಳವಡಿಸಿಕೊಳ್ಳಲು ಪೂರಕ ವಾತಾವರಣ ಕಲ್ಪಿಸಲಿದೆ.
ಶಾಲೆಗಳು, ಅಪಾರ್ಟ್ಮೆಂಟ್ಗಳು ಹಾಗೂ ಮಹಿಳಾ ಸಂಘಟನೆಗಳಲ್ಲಿ ಎಲ್ಪಿಜಿ ಸುರಕ್ಷತಾ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು, ಪ್ರಾದೇಶಿಕ ಭಾಷೆಗಳಲ್ಲಿ ಜಾಗೃತಿ ಸಾಹಿತ್ಯ ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಸಿದ್ಧಪಡಿಸುವುದು, ಸುರಕ್ಷತಾ ಸಾಧನಗಳು, ನುರಿತ ತಜ್ಞರ ಮಾರ್ಗದರ್ಶನ ಮತ್ತು ಮುನ್ನೆಚ್ಚರಿಕಾ ನೆರವನ್ನು ಸುಲಭವಾಗಿ ಸಾರ್ವಜನಿಕರಿಗೆ ಒದಗಿಸಲು ವಿವಿಧ ಸಂಸ್ಥೆಗಳೊಂದಿಗೆ ಕೈಜೋಡಿಸುವುದು ಇದರ ಪ್ರಚಾರ ತಂತ್ರಗಾರಿಕೆಯ ಭಾಗವಾಗಿದೆ.
ಈ ಯೋಜನೆಯು ತನ್ನ ಮೊದಲ ವರ್ಷದಲ್ಲೇ 10,000 ನಾಗರಿಕರನ್ನು ತಲುಪುವ ಹಾಗೂ 1,000 ಮನೆಗಳು ಅಥವಾ ಸಂಸ್ಥೆಗಳನ್ನು ಎಲ್ಪಿಜಿ ಅವಘಡಗಳಿಂದ ಮುಕ್ತವಾಗಿಸಿ ಸುರಕ್ಷಿತಗೊಳಿಸುವ ಪ್ರಾಥಮಿಕ ಗುರಿ ಹಾಕಿಕೊಂಡಿದೆ. ಮುಂಬರುವ ಮೂರರಿಂದ ಐದು ವರ್ಷಗಳಲ್ಲಿ ವಿವಿಧ ಪಾಲುದಾರಿಕೆಗಳು, ನಿರಂತರ ಜಾಗೃತಿ ಕಾರ್ಯಕ್ರಮಗಳು ಮತ್ತು ತಾಂತ್ರಿಕ ಪರಿಹಾರಗಳ ಮೂಲಕ ಒಟ್ಟು 10 ಲಕ್ಷ ವ್ಯಕ್ತಿಗಳನ್ನು ಹಾಗೂ 1,00,000 ಮನೆಗಳು ಅಥವಾ ಸಂಸ್ಥೆಗಳನ್ನು ತಲುಪುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಇದು ರೂಪಿಸಿದೆ.
ಭಾರತೀಯ ಆವಿಷ್ಕಾರ ಮತ್ತು ಧ್ಯೇಯವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಸಂಕಲ್ಪ
ಕರ್ನಾಟಕದ ರಾಜಧಾನಿ ಬೆಂಗಳೂರಿನವರಾದ ಏರೋಸ್ಪೇಸ್ ಎಂಜಿನಿಯರ್, ಯುವ ಉದ್ಯಮಿ ಹಾಗೂ ನಿಪುಣ ಭರತನಾಟ್ಯ ಕಲಾವಿದೆಯಾಗಿರುವ ಅವನಿ ಕೇಕೆಕೊಚ್ಚಿ, ತಂತ್ರಜ್ಞಾನ, ಉದ್ಯಮ, ಕಲೆ ಮತ್ತು ಸಮಾಜಮುಖಿ ಹೊಣೆಗಾರಿಕೆಗಳ ಅಪೂರ್ವ ಸಮ್ಮಿಲನದ ಮೂಲಕ ಯುವ ನಾಯಕತ್ವಕ್ಕೆ ಹೊಸ ಮುಖ ನೀಡುತ್ತಿರುವ ಬಹುಮುಖ ಪ್ರತಿಭೆಯ ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುತ್ತಿದ್ದಾರೆ.
ತಮ್ಮ ತಂದೆಯೊಂದಿಗೆ ಸುಪ್ರಮ್ ಇಂಡಸ್ಟ್ರೀಸ್ ನಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಅವರು, ದೇಶೀಯ ಆವಿಷ್ಕಾರ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಕನಸಿಗೆ ಬಲ ತುಂಬುತ್ತಿದ್ದಾರೆ.
ಉದ್ಯಮ ಕ್ಷೇತ್ರದ ಜೊತೆಜೊತೆಗೆ ತ್ರಯೀ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಅವರು, 4 ವರ್ಷದ ಪುಟ್ಟ ಮಕ್ಕಳಿಂದ ಹಿಡಿದು 55 ವರ್ಷದ ಹಿರಿಯರವರೆಗಿನ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತಾ ಭಾರತೀಯ ಶಾಸ್ತ್ರೀಯ ಕಲಾ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರತಿಷ್ಠಿತ ವಿದ್ಯಾರ್ಥಿವೇತನಕ್ಕೆ ಭಾಜನರಾಗಿರುವ ಅವನಿ, ಜಿ20 ಶೃಂಗಸಭೆ, ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್ಎಂಎಸಿಸಿ) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೇರಿದಂತೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಭರತನಾಟ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಇದೇ ವರ್ಷದ ಡಿಸೆಂಬರ್ನಲ್ಲಿ ವಿಯೆಟ್ನಾಂನಲ್ಲಿ ಆಯೋಜಿಸಲಾಗಿರುವ ಮಿಸ್ ಕಾಸ್ಮೊ 2026 ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಲಿರುವ ಅವನಿ, ತಮ್ಮ ಈ ಎಲ್ಪಿಜಿ ಸುರಕ್ಷತಾ ಅಭಿಯಾನವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯಲಿದ್ದಾರೆ. ತಡೆಗಟ್ಟುವ ತಂತ್ರಜ್ಞಾನ, ಸಮುದಾಯ ಮಟ್ಟದ ಜಾಗೃತಿ ಮತ್ತು ಅಮೂಲ್ಯ ಜೀವಗಳ ಸಂರಕ್ಷಣೆಯ ಮಹತ್ವದ ಕುರಿತು ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಲಿದ್ದಾರೆ. ಅರ್ಥಪೂರ್ಣ ಸಾಮಾಜಿಕ ಸಂದೇಶ, ಸಾಂಸ್ಕೃತಿಕ ಪ್ರಾತಿನಿಧ್ಯ ಮತ್ತು ಸಮಾಜದಲ್ಲಿ ನೈಜ ಬದಲಾವಣೆ ತರುವ ಪ್ರಬಲ ಮಾಧ್ಯಮವಾಗಿ ಜಾಗತಿಕ ಸೌಂದರ್ಯ ಸ್ಪರ್ಧೆಗಳು ಮೌಲ್ಯ ಪಡೆಯುತ್ತಿರುವುದಕ್ಕೆ ಅವರ ಈ ಭಾಗವಹಿಸುವಿಕೆಯೇ ಸ್ಪಷ್ಟ ನಿದರ್ಶನವಾಗಿದೆ. ರಿಗ್ಯಾಸ್ ಮತ್ತು ತಮ್ಮ ಬೃಹತ್ ಅಗ್ನಿ ಸುರಕ್ಷತಾ ಅಭಿಯಾನದ ಮೂಲಕ, ಕರ್ನಾಟಕದ ನೆಲದಲ್ಲಿ ವೈಯಕ್ತಿಕ ಅನುಭವದಿಂದ ಹುಟ್ಟಿಕೊಂಡ ಆವಿಷ್ಕಾರವೊಂದು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಸುರಕ್ಷಿತ ಮನೆಗಳು ಮತ್ತು ಸಬಲ ಸಮುದಾಯಗಳನ್ನು ನಿರ್ಮಿಸಲು ಹೇಗೆ ದೊಡ್ಡ ಜನಚಳವಳಿಗೆ ಪ್ರೇರಣೆಯಾಗಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಲು ಅವನಿ ಸಜ್ಜಾಗಿದ್ದಾರೆ.
ಬೆಂಗಳೂರಿನಲ್ಲಿ ರಿಗ್ಯಾಸ್ ಲೋಕಾರ್ಪಣೆಗೊಳಿಸುವ ಮೂಲಕ ಅವನಿ ಕೇಕೆಕೊಚ್ಚಿ ಸಮಾಜಕ್ಕೆ ಒಂದು ಗಟ್ಟಿ ಸಂದೇಶವನ್ನು ರವಾನಿಸಿದ್ದಾರೆ, ಅದೇನೆಂದರೆ: “ಅರ್ಥಪೂರ್ಣ ಆವಿಷ್ಕಾರವೆಂದರೆ ಕೇವಲ ಯಾಂತ್ರಿಕವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಷ್ಟೇ ಅಲ್ಲ, ಬದಲಿಗೆ ಅಮೂಲ್ಯ ಜೀವಗಳನ್ನು ಉಳಿಸಲು, ಬಡ-ಮಧ್ಯಮ ವರ್ಗಗಳ ಜೀವನೋಪಾಯವನ್ನು ರಕ್ಷಿಸಲು ಮತ್ತು ಎಲ್ಲರಿಗೂ ಸುರಕ್ಷಿತವಾದ ನಾಳೆಯನ್ನು ಖಾತ್ರಿಪಡಿಸಲು ಆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿದೆ.”
ರಿಗ್ಯಾಸ್ ಕುರಿತು ಮಾಹಿತಿ
ರಿಗ್ಯಾಸ್ ಎಂಬುದು ಅವನಿ ಕೇಕೆಕೊಚ್ಚಿ ಅವರ ಮುಂದಾಳತ್ವದಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ, ತಂತ್ರಜ್ಞಾನ ಆಧಾರಿತ ಎಲ್ಪಿಜಿ ನಿರ್ವಹಣೆ ಮತ್ತು ಸುರಕ್ಷತಾ ಸಾಧನವಾಗಿದೆ. ಎಲ್ಪಿಜಿ ಸೋರಿಕೆಯ ಅಪಾಯದ ಬಗ್ಗೆ ಮುನ್ಸೂಚನೆ ನೀಡುವುದು, ತುರ್ತು ಸನ್ನದ್ಧತೆಯನ್ನು ಹೆಚ್ಚಿಸುವುದು, ಸಿಲಿಂಡರ್ ಬಳಕೆ ಟ್ರ್ಯಾಕ್ ಮಾಡುವುದು ಮತ್ತು ಸಕಾಲಿಕ ಮರುಪೂರಣವನ್ನು (ರೀಫಿಲ್) ಸುಲಭಗೊಳಿಸಲು ಈ ಪರಿಹಾರವನ್ನು ಸಿದ್ಧಪಡಿಸಲಾಗಿದೆ. “ಪ್ರತಿಯೊಂದು ಮನೆಗೂ ಸುರಕ್ಷಿತ ನಾಳೆಯನ್ನು ಕಾಣುವ ಹಕ್ಕಿದೆ” ಎಂಬ ಜೀವಪರ ತತ್ತ್ವದೊಂದಿಗೆ, ಎಲ್ಪಿಜಿ ಸುರಕ್ಷತಾ ಅರಿವು, ಸಮುದಾಯ ಶಿಕ್ಷಣ ಮತ್ತು ಅಪಾಯ ತಡೆಗಟ್ಟುವ ಕ್ರಮಗಳ ಮಹತ್ವವನ್ನು ಸಾರುವ ಬೃಹತ್ ಸಾಮಾಜಿಕ ಯೋಜನೆಯ ಭಾಗವಾಗಿ ಇದು ರೂಪುಗೊಂಡಿದೆ.
ಅವನಿ ಕೇಕೆಕೊಚ್ಚಿ ಅವರ ಪರಿಚಯ
ಅವನಿ ಕೇಕೆಕೊಚ್ಚಿ ಅವರು ಪ್ರತಿಷ್ಠಿತ ಮಿಸ್ ದಿವಾ ಕಾಸ್ಮೊ 2025 ಕಿರೀಟ ಮುಡಿಗೇರಿಸಿಕೊಂಡಿದ್ದು, ವಿಯೆಟ್ನಾಂನಲ್ಲಿ ಜರುಗಲಿರುವ ಮಿಸ್ ಕಾಸ್ಮೊ 2026ರಲ್ಲಿ ಭಾರತದ ಅಧಿಕೃತ ಪ್ರತಿನಿಧಿಯಾಗಿದ್ದಾರೆ.
ಬೆಂಗಳೂರಿನವರಾದ ಇವರು ಏರೋಸ್ಪೇಸ್ ಎಂಜಿನಿಯರ್, ಉದ್ಯಮಿ ಮತ್ತು ಖ್ಯಾತ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಪ್ರಸ್ತುತ ಸುಪ್ರಮ್ ಟೆಕ್ನಾಲಜೀಸ್ ಆಂಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ರಿಗ್ಯಾಸ್ ಹಾಗೂ ತ್ರಯೀ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಸಂಸ್ಥೆಗಳ ಸಂಸ್ಥಾಪಕಿಯೂ ಆಗಿದ್ದಾರೆ.
ತಮ್ಮ ಉದ್ಯಮಶೀಲತೆಯ ಪ್ರಯತ್ನಗಳು ಮತ್ತು ಸಮಾಜಮುಖಿ ಹೋರಾಟದ ಮೂಲಕ ಅವರು ದೇಶಿಯ ಆವಿಷ್ಕಾರ, ಎಲ್ಪಿಜಿ ಸುರಕ್ಷತಾ ಜಾಗೃತಿ, ಭಾರತೀಯ ಸಂಸ್ಕೃತಿ-ಕಲೆಗಳ ಸಂರಕ್ಷಣೆ ಮತ್ತು ಜವಾಬ್ದಾರಿಯುತ ನಾಯಕತ್ವಕ್ಕೆ ಸದಾ ಬದ್ಧರಾಗಿದ್ದಾರೆ
