ಕೆ.ಆರ್.ಪೇಟೆ: ತಾಲ್ಲೂಕಿನ ಚಂದಗೋನಹಳ್ಳಮ್ಮ ದೇವಸ್ಥಾನ ಹಾಗೂ ಬೀರುವಳ್ಳಿ ಮಧ್ಯೆ ಇರುವ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ತಾಲ್ಲೂಕಿನ ಮಂಚಿಬೀಡು-ಹೇಮಗಿರಿ ರಸ್ತೆ ಮಾರ್ಗದ ಚಂದಗೋನಹಳ್ಳಿ ಅಮ್ಮನ ದೇವಸ್ಥಾನದ ಸಮೀಪ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಹಾಗೂ ಮಂಚೀಬೀಡು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಕ್ಷೇತ್ರದ ಜನಪ್ರಿಯ ಶಾಸಕ ಹೆಚ್.ಟಿ. ಮಂಜು ಅವರು ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಗಡಿಯಿಂದ ಕೆ.ಆರ್.ಪೇಟೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ *ಕೆ.ಆರ್.ಪಿ. 198ರ 5.40 ಕಿ.ಮೀ. ವ್ಯಾಪ್ತಿಯಲ್ಲಿ* ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

*ಗುಣಮಟ್ಟದ ಕಾಮಗಾರಿಗೆ ಸೂಚನೆ*
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು, ಈ ಭಾಗದ ರಸ್ತೆ ಮತ್ತು ಸೇತುವೆ ನಿರ್ಮಾಣದಿಂದ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ನೂತನ ಸೇತುವೆ ನಿರ್ಮಾಣದಿಂದಾಗಿ ದಿನನಿತ್ಯ ಸಂಚರಿಸುವ ಶ್ರೀಚಂದಗೋನಹಳ್ಳಮ್ಮ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಾಗೂ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸುಲಭ ಸಂಚಾರಕ್ಕೆ ಹಾದಿ ಸುಗಮವಾಗಲಿದೆ ಎಂದರು.
*2028ಕ್ಕೆ ನಾನೇ ಅಭ್ಯರ್ಥಿ: ಶಾಸಕ ಹೆಚ್.ಟಿ.ಮಂಜು ಸ್ಪಷ್ಟನೆ*
ಇದೇ ವೇಳೆ ರಾಜಕೀಯ ವಿಚಾರ ಪ್ರಸ್ತಾಪಿಸಿದ ಶಾಸಕರು, *ಮುಂದಿನ 2028 ಕ್ಕೆ ನಾನೇ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಆಗುವುದು ಖಚಿತ. ಅದೇ ರೀತಿ ನಾನು ಶಾಸಕ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೆಲವು ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು* ಎಂದು ಸ್ಪಷ್ಟಪಡಿಸಿದರು. ಶಾಸಕರ ಈ ಹೇಳಿಕೆ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ. ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಸರಕಾರವು ನಿರೀಕ್ಷಿತ ಅನುಧಾನ ನೀಡುತ್ತಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ದಿಯು ನನ್ನ ಹಾಗೂ ಕ್ಷೇತ್ರದ ಮತದಾರರ ನಿರೀಕ್ಷೆಗೆ ತಕ್ಕಂತೆ ಆಗುತ್ತಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ನನಗೆ ಇನ್ನೊಂದು ಅವಧಿಗೆ ಅವಕಾಶ ನೀಡಬೇಕಾಗಿದೆ. ನಾನು ನನ್ನ ಶತ್ರುವಿಗೂ ಕೇಡು ಬಯಸುವುದಿಲ್ಲ. ನನ್ನ ವಿರುದ್ದ ಯಾರೇ ಕೆಟ್ಟದಾಗಿ ಮಾತನಾಡಿದರೂ ಅದನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ ಟೀಕಿಸುವವರ ಮನಸ್ಸು ಗೆಲ್ಲುವಂತೆ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಕ್ಕಿಹೆಬ್ಬಾಳು ಹೋಬಳಿ ಜೆಡಿಎಸ್ ಅಧ್ಯಕ್ಷ ಬಸವಲಿಂಗಪ್ಪ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಬೀರುವಳ್ಳಿ ಸೊಸೈಟಿ ಅಧ್ಯಕ್ಷ ಎನ್.ಎನ್.ಜಗದೀಶ್, ನಟೇಶ್, ಈರೇಗೌಡ, ಲಕ್ಷ್ಮಣ್, ಬಿ.ಎನ್.ಕುಮಾರ್, ಪರಶುರಾಮ್, ದೊಡ್ಡಕಾಡನೂರು ಹೇಮಾವತಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್, ಸಹಾಯಕ ಇಂಜಿನಿಯರ್ ರವಿ ಕುಮಾರ್, ಬೀರುವಳ್ಳಿ ಗ್ರಾಮ ಪಂಚಾಯತ್ ಪಿಡಿಓ ನಾಯದಾ ಅಖ್ತರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
