ಹಾಸನ: ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಶೋಕನಿಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಿ ಹಾಸನದ ಜಿಲ್ಲಾ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯ ನಾಯಕರಹಟ್ಟಿಯ ಹೊನ್ನೂರಪ್ಪ ಅವರ ಪುತ್ರ ಅಶೋಕ ವಿರುದ್ಧ ಐಪಿಸಿ ಕಲಂ 363, 366(ಎ), 417, 376 ಹಾಗೂ ಪೋಕ್ಸೋ ಕಾಯ್ದೆಯ ಕಲಂ 6ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
ಹಾಸನದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪೋಕ್ಸೋ ನ್ಯಾಯಾಲಯ (ಎಫ್ಟಿಎಸ್ಸಿ-01)ದಲ್ಲಿ ಎಸ್ಪಿಎಲ್ ನಂ. 337/2018ರ ಅಡಿಯಲ್ಲಿ ವಿಚಾರಣೆ ನಡೆಯಿತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 13ರಂದು ನ್ಯಾಯಾಧೀಶರಾದ ಎಚ್.ಎನ್. ನಾಗೇಶ್ ಅವರು ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.
ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶ್ರೀನಿವಾಸಗೌಡ ಅವರು ವಾದ ಮಂಡಿಸಿದ್ದರು.
– ಮಂಜುನಾಥ್ ಐ.ಕೆ.
