ಆಲೂರು: ರಾತ್ರಿ ಕುಟುಂಬದವರೊಂದಿಗೆ ಪಿತೃಪಕ್ಷದ ಹಬ್ಬ ಆಚರಿಸಿ, ಬಂಧು-ಬಳಗದೊಂದಿಗೆ ಊಟ ಮಾಡಿ ಮಲಗಿದ್ದ ವ್ಯಕ್ತಿಯೊಬ್ಬರು ಬೆಳಗಾಗುವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಮರಸು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುಮಾರು 48 ವರ್ಷದ ಕುಮಾರ್ ಮೃತಪಟ್ಟವರು. ಶುಕ್ರವಾರ ಸಂಜೆ ಮನೆಗೆ ಆಗಮಿಸಿದ್ದ ಅವರು ಬಂಧು-ಬಳಗದವರನ್ನು ಕರೆದು ಹಬ್ಬ ಆಚರಿಸಿ, ರಾತ್ರಿ ಎಲ್ಲರೊಂದಿಗೆ ಊಟ ಮಾಡಿ ಮಲಗಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ಆಘಾತ ಉಂಟಾಗಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಕುಟುಂಬದೊಂದಿಗೆ ಸಂತೋಷದಿಂದ ಹಬ್ಬ ಆಚರಿಸಿದ್ದ ವ್ಯಕ್ತಿ ದಿಢೀರ್ ಮೃತಪಟ್ಟಿರುವುದು ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.
ಈ ದುಃಖದ ಸಂದರ್ಭದಲ್ಲಿ ವಿಜಯಲಲಿತ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಮಂಜುನಾಥ್ ಎಂ.ಸಿ. ಅವರು ಸಂತಾಪ ಸೂಚಿಸಿದ್ದಾರೆ.
ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಆತಂಕ
ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚುತ್ತಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಅಗತ್ಯವಿದ್ದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ತಜ್ಞ ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆದುಕೊಳ್ಳುವುದರ ಜತೆಗೆ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.
ಹೃದಯಾಘಾತದ ಅಪಾಯದ ಅಂಶಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
