ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ, ಕಾರೆಕೆರೆ, ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ (RAWE) ಕಾರ್ಯಕ್ರಮದ ಅಂಗವಾಗಿ ಬೆಳೆ ಸಂಗ್ರಹಾಲಯ ಉದ್ಘಾಟನೆ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ನಿವೃತ್ತ ಡೀನ್ ಎಂ.ಎ. ಶಂಕರ್ ಅವರು ಬೆಳೆ ಸಂಗ್ರಹಾಲಯವನ್ನು ಉದ್ಘಾಟಿಸಿದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಬಿ.ಎಸ್. ಬಸವರಾಜು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಕೃಷಿ ನಿರ್ದೇಶಕ ಮೋಹನ್ ಹಾಗೂ ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಸುನಿಲ್ ಭಾಗವಹಿಸಿದ್ದರು.
RAWE ಸಂಯೋಜಕಿ ಡಾ. ಶಶಿಕಲಾ ಎಸ್.ಜಿ., ಬರಗೂರು ಗ್ರಾಮದ ಸಹ ಸಂಯೋಜಕಿ ಸಂಧ್ಯಾ ಜಿ.ಸಿ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಿವಬಸಪ್ಪ, ಡಾ. ಶಶಿಕಿರಣ್, ಡಾ. ಗುರುಮೂರ್ತಿ ಎಚ್., ಡಾ. ಪ್ರದೀಪ್ ಹಾಗೂ ಡಾ. ಗಣೇಶ್ ಪ್ರಸಾದ್ ಟಿ.ಎಸ್. ಉಪಸ್ಥಿತರಿದ್ದರು.

ಕೃಷಿ ತಂತ್ರಜ್ಞಾನಗಳ ಪರಿಚಯ
ಕೃಷಿ ವಸ್ತು ಪ್ರದರ್ಶನದಲ್ಲಿ ವಿವಿಧ ಕೃಷಿ ವಿಭಾಗಗಳಿಗೆ ಸಂಬಂಧಿಸಿದ ಮಾದರಿಗಳು, ಕೃಷಿ ಉಪಕರಣಗಳು ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಪ್ರತಿಯೊಂದು ಮಾದರಿಯ ಉಪಯೋಗ ಮತ್ತು ಕಾರ್ಯವಿಧಾನವನ್ನು ರೈತರಿಗೆ ವಿವರಿಸಿದರು.
ಬೆಳೆ ಸಂಗ್ರಹಾಲಯದಲ್ಲಿ ವಿವಿಧ ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿರುವ ವಿವಿಧ ಬೆಳೆಗಳ ತಳಿಗಳನ್ನು ಪ್ರದರ್ಶಿಸಲಾಯಿತು. ತಳಿಗಳ ವಿಶೇಷ ಗುಣಲಕ್ಷಣಗಳು, ಬಿತ್ತನೆ ಬೀಜದ ಪ್ರಮಾಣ, ಬೆಳೆ ಅವಧಿ ಹಾಗೂ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ವಿದ್ಯಾರ್ಥಿಗಳು ರೈತರಿಗೆ ಸಮಗ್ರ ಮಾಹಿತಿ ನೀಡಿದರು.
ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆಗೆ ಉತ್ತೇಜನ
ಸುಧಾರಿತ ಬೆಳೆ ತಳಿಗಳ ಪರಿಚಯ, ಉತ್ತಮ ತಳಿಗಳ ಆಯ್ಕೆ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಬಳಕೆಯ ಕುರಿತು ರೈತರಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಯಿತು.
ಗ್ರಾಮದ ರೈತರು ಹಾಗೂ ಸಾರ್ವಜನಿಕರು ಆಸಕ್ತಿಯಿಂದ ಭಾಗವಹಿಸಿ ಕೃಷಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.
– ಮಂಜುನಾಥ್ ಐ.ಕೆ.
