ಹಾಸನ: ನಗರದ ರವೀಂದ್ರನಗರದಲ್ಲಿರುವ ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾ ವಿದ್ಯಾರ್ಥಿನಿಲಯದಲ್ಲಿ 18 ವರ್ಷದ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಅರಕಲಗೂಡು ತಾಲ್ಲೂಕಿನ ಹೊಡೆನೂರು ಗ್ರಾಮದ ಕೌಸಲ್ಯ ಮತ್ತು ಜಯಣ್ಣ ದಂಪತಿಯ ಪುತ್ರಿ ದಿವ್ಯಾ ಲಕ್ಷ್ಮೀ ಎಂದು ಗುರುತಿಸಲಾಗಿದೆ. ಅವರು ಹಾಸನದಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು.
ಇಂದು ವಿದ್ಯಾರ್ಥಿನಿಲಯದಲ್ಲಿ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹಾಸನದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಡೆತ್ನೋಟ್ ಪತ್ತೆ
ಸಾವಿಗೂ ಮುನ್ನ ಬರೆದಿದ್ದ ಎನ್ನಲಾದ ಡೆತ್ನೋಟ್ ಪತ್ತೆಯಾಗಿದೆ.
ಡೆತ್ನೋಟ್ನಲ್ಲಿ ಅಮ್ಮ, ಅಪ್ಪ ಹಾಗೂ ತಮ್ಮನನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಬರೆದಿರುವ ವಿದ್ಯಾರ್ಥಿನಿ, ತನ್ನ ಸಾವಿಗೆ ತಾನೇ ಕಾರಣ ಎಂದು ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.
ಜೀವನದಲ್ಲಿ ಸಾಕಷ್ಟು ಪ್ರಯತ್ನಿಸಿದರೂ ಬದುಕಲು ಸಾಧ್ಯವಾಗುತ್ತಿಲ್ಲ. ಅಪ್ಪ-ಅಮ್ಮನಿಗೆ ನೋವುಂಟು ಮಾಡುತ್ತಿರುವುದಕ್ಕೆ ಕ್ಷಮೆ ಕೇಳುತ್ತೇನೆ. ತಮ್ಮ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬರೆದಿದ್ದಾಳೆ ಎನ್ನಲಾಗಿದೆ.
ಅಲ್ಲದೆ, ತನ್ನ ಸಾವಿಗೆ ಯಾರನ್ನೂ ಹೊಣೆ ಮಾಡಬಾರದು ಎಂದೂ ಡೆತ್ನೋಟ್ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ವಿದ್ಯಾರ್ಥಿನಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗಮನಿಸಿ: ಡೆತ್ನೋಟ್ನಲ್ಲಿರುವ ಅಂಶಗಳು ಪೊಲೀಸರ ಅಧಿಕೃತ ದೃಢೀಕರಣಕ್ಕೆ ಒಳಪಟ್ಟಿವೆ.
