ಶ್ಲೋಕ – 12
ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತ್ಯತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ ॥೧೨॥
ಕರ್ಮದ ಫಲ ಮೂರು ತೆರ: ಬೇಕಾದ್ದು, ಬೇಡವಾದದ್ದು, ಮತ್ತು ಎರಡರ ಬೆರಕೆ.
ಫಲತ್ಯಾಗ ಮಾಡದವರಿಗೆ ಇದು ಸತ್ತಮೇಲೆ ಸಲ್ಲುತ್ತದೆ. ಫಲದ ನಂಟು ತೊರೆದವರಿಗೆ ಇದು ಎಂದೂ ಸೋಕುವುದಿಲ್ಲ.
ಕರ್ಮ ಮಾಡುವುದರಿಂದ ಸುಖವಾಗಬಹುದು; ದುಃಖವಾಗಬಹುದು; ಅಥವಾ ಸುಖ-ದುಃಖದ ಬೆರಕೆಯ ಫಲ ಸಿಗಬಹುದು.
ಕರ್ಮಫಲ ತ್ಯಾಗ ಮಾಡದೆ ಕರ್ಮ ಮಾಡುವವರಿಗೆ ಇದು ಸತ್ತ ಮೇಲೆ ಸಲ್ಲುತ್ತದೆ. ಇವರು ಕರ್ಮ ಮತ್ತು ಕರ್ಮ ಫಲದ ಸುಳಿಯಲ್ಲಿ ಸಿಲುಕಿ ಮತ್ತೆ ಸಂಸಾರ ಬಂಧದಲ್ಲಿ ಸಿಲುಕುತ್ತಾರೆ.
ಆದರೆ ಕರ್ಮ ಫಲದ ಅಪೇಕ್ಷೆ ಇಲ್ಲದವರಿಗೆ ಇದು ಎಂದೂ ಸೋಕುವುದಿಲ್ಲ. ಅವರಿಗೆ ಏನು ಬಂದರೂ ಅದು ಭಗವಂತನ ಪ್ರಸಾದ. ಅದರಲ್ಲಿ ಬೇಕಾದ್ದು, ಬೇಡವಾದದ್ದು ಎನ್ನುವ ಭೇದವಿಲ್ಲ.
ಇದು ಮೋಕ್ಷ ಮಾರ್ಗ. ಉದಾಹರಣೆಗೆ ರಾಜ್ಯದ, ಅಧಿಕಾರದ ಆಸೆಯಿಂದ, ಭಗವಂತನನ್ನು ಮರೆತು ಯುದ್ಧವನ್ನು ಮಾಡುವವ- ಯುದ್ಧದಲ್ಲಿ ನಡೆಯುವ ಪ್ರಾಣಹಾನಿಗೆ ಕಾರಣನಾಗುತ್ತಾನೆ.
ಆತ ಈ ಪಾಪದ ಹೊರೆಯನ್ನು ಸತ್ತ ನಂತರ ಪಡೆಯಬೇಕಾಗುತ್ತದೆ.
ಆದರೆ ಕರ್ತವ್ಯ ಕಾರಣಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ಎಲ್ಲವನ್ನು ಭಗವಂತನಿಗೆ ಅರ್ಪಿಸಿ ಯುದ್ಧ ಮಾಡುವವನಿಗೆ ಯಾವ ಪಾಪದ ಲೇಪವೂ ಅಂಟುವುದಿಲ್ಲ.
