ದುಬೈ: ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯು ವಿಶ್ವದ ಅತ್ಯಂತ ಭಾರವಾದ ಮತ್ತು ಅತಿದೊಡ್ಡ ಚಿನ್ನದ ಕಿವಿಯೋಲೆಗಳ ಜೋಡಿಯನ್ನು ನಿರ್ಮಿಸುವ ಮೂಲಕ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.
ಅಕ್ಟೋಬರ್ 24ರಂದು ದುಬೈ ಗೋಲ್ಡ್ ಡಿಸ್ಟ್ರಿಕ್ಟ್ನಲ್ಲಿರುವ ಜೋಯಾಲುಕ್ಕಾಸ್ನ ‘ಜುವೆಲ್ ಆಫ್ ಜೋಯ್’ ಶೋರೂಮ್ನಲ್ಲಿ ದಾಖಲೆ ನಿರ್ಮಿಸಿದ ಚಿನ್ನದ ಜುಮುಕಿಗಳನ್ನು ಅನಾವರಣಗೊಳಿಸಲಾಯಿತು. ಯುಎಇಯ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜೋಯಾಲುಕ್ಕಾಸ್ ಗ್ರೂಪ್ ಅಧ್ಯಕ್ಷ ಡಾ. ಜೋಯ್ ಅಲುಕ್ಕಾಸ್ ಮತ್ತು ಸಂಸ್ಥೆಯ ಸಿಇಒ ಜೋನ್ ಪಾಲ್ ಅಲುಕ್ಕಾಸ್ ಅವರ ಸಮ್ಮುಖದಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಯಿತು.
16.514 ಕೆ.ಜಿ. ಚಿನ್ನದಿಂದ ನಿರ್ಮಾಣ
‘ಮಯೂರ ಸಹಸ್ರ’ ಎಂಬ ಹೆಸರಿನ ಈ ಚಿನ್ನದ ಜುಮುಕಿಗಳು ನವಿಲಿನ ಸೌಂದರ್ಯದಿಂದ ಪ್ರೇರಿತವಾಗಿವೆ. ದಕ್ಷಿಣ ಏಷ್ಯಾದ ವಧುವಿನ ಪರಂಪರೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಗಂಟೆಯಾಕಾರದ ಜುಮುಕಿಗಳ ವಿನ್ಯಾಸಕ್ಕೆ ಆಧುನಿಕ ಕಲಾತ್ಮಕತೆಯನ್ನು ಸೇರಿಸಲಾಗಿದೆ.
22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾದ ಈ ಜೋಡಿ ಕಿವಿಯೋಲೆಗಳ ಒಟ್ಟು ನಿವ್ವಳ ತೂಕ 16.514 ಕೆ.ಜಿ. ಆಗಿದೆ. ಸಂಸ್ಥೆಯ ನುರಿತ ಕುಶಲಕರ್ಮಿಗಳು ಹಲವು ತಿಂಗಳ ಕಾಲ ಕೈಯಿಂದಲೇ ಇವುಗಳನ್ನು ರೂಪಿಸಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಳ ಸಂಸ್ಥೆಯು ಪರಿಶೀಲಿಸಿ, ‘ಅತ್ಯಂತ ಭಾರವಾದ ಚಿನ್ನದ ಕಿವಿಯೋಲೆಗಳ ಜೋಡಿ’ ಹಾಗೂ ‘ಅತಿದೊಡ್ಡ ಕಿವಿಯೋಲೆಗಳ ಜೋಡಿ’ ಎಂಬ ಎರಡು ವಿಭಾಗಗಳಲ್ಲಿ ದಾಖಲೆಗಳನ್ನು ಅಧಿಕೃತಗೊಳಿಸಿದೆ.
ದುಬೈನಲ್ಲಿ ಶಾಶ್ವತ ಪ್ರದರ್ಶನ
ದಾಖಲೆ ನಿರ್ಮಿಸಿರುವ ಜುಮುಕಿಗಳನ್ನು ಮಾರಾಟಕ್ಕೆ ಇಡದೆ, ದುಬೈ ಗೋಲ್ಡ್ ಡಿಸ್ಟ್ರಿಕ್ಟ್ನಲ್ಲಿರುವ ‘ಜುವೆಲ್ ಆಫ್ ಜೋಯ್’ ಶೋರೂಮ್ನಲ್ಲಿ ಶಾಶ್ವತವಾಗಿ ಪ್ರದರ್ಶಿಸಲು ಸಂಸ್ಥೆ ನಿರ್ಧರಿಸಿದೆ. ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ, ವಾರದ ಏಳು ದಿನವೂ ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ದುಬೈಗೆ ಗೌರವ ಸಮರ್ಪಣೆ
ಜೋಯಾಲುಕ್ಕಾಸ್ ಗ್ರೂಪ್ ಅಧ್ಯಕ್ಷ ಡಾ. ಜೋಯ್ ಅಲುಕ್ಕಾಸ್ ಮಾತನಾಡಿ, ದುಬೈ ಜೊತೆಗೆ ಸಂಸ್ಥೆ ಸುಮಾರು ನಾಲ್ಕು ದಶಕಗಳಿಂದ ಬೆಳೆಯುತ್ತ ಬಂದಿದೆ. ಈ ಸಾಧನೆಯು ಸಂಸ್ಥೆಯ ಕುಟುಂಬ, 13 ದೇಶಗಳಲ್ಲಿರುವ ತಂಡ ಹಾಗೂ ಗ್ರಾಹಕರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿಇಒ ಜೋನ್ ಪಾಲ್ ಅಲುಕ್ಕಾಸ್ ಮಾತನಾಡಿ, ‘ಜುವೆಲ್ ಆಫ್ ಜೋಯ್’ ಅನ್ನು ಅಂತರರಾಷ್ಟ್ರೀಯ ಮಟ್ಟದ ಆಭರಣ ತಾಣವಾಗಿ ರೂಪಿಸುವ ಉದ್ದೇಶ ಹೊಂದಲಾಗಿತ್ತು. ಇದೀಗ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಭಾರವಾದ ಚಿನ್ನದ ಕಿವಿಯೋಲೆಗಳ ಜೋಡಿಗೆ ನೆಲೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
13 ದೇಶಗಳಲ್ಲಿ 200ಕ್ಕೂ ಹೆಚ್ಚು ಶೋರೂಮ್ಗಳು
ಜೋಯಾಲುಕ್ಕಾಸ್ ಗ್ರೂಪ್ ಭಾರತ ಸೇರಿದಂತೆ ಯುಎಇ, ಸೌದಿ ಅರೇಬಿಯಾ, ಕುವೈತ್, ಕತಾರ್, ಬಹ್ರೈನ್, ಒಮಾನ್, ಸಿಂಗಾಪುರ, ಮಲೇಷ್ಯಾ, ಯುನೈಟೆಡ್ ಕಿಂಗ್ಡಮ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ 13 ದೇಶಗಳಲ್ಲಿ 200ಕ್ಕೂ ಹೆಚ್ಚು ಶೋರೂಮ್ಗಳನ್ನು ಹೊಂದಿದೆ. ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಹಾಗೂ ಅಮೂಲ್ಯ ರತ್ನಗಳ ಆಭರಣಗಳನ್ನು ಮಾರಾಟ ಮಾಡುವ ಸಂಸ್ಥೆ, ಈ ಹೊಸ ಸಾಧನೆಯ ಮೂಲಕ ಜಾಗತಿಕ ಆಭರಣ ಕ್ಷೇತ್ರದಲ್ಲಿ ಮತ್ತೊಂದು ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದೆ.
