ಹಾಸನ: ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೋರಾಟದ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ವೈಯಕ್ತಿಕ ವಿಚಾರಗಳನ್ನು ನಂಬಿಕೊಂಡು ರಾಜಕಾರಣ ಮಾಡುವಂತಹ ಪಕ್ಷ ಬಿಜೆಪಿ ಅಲ್ಲ. ತತ್ವ, ಸಿದ್ಧಾಂತ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಹೋರಾಟ ನಡೆಸುವ ಮೂಲಕ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಳ್ಳಾರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಪಾದಯಾತ್ರೆ ನಡೆಸಿ, ಬರಗಾಲ ಹಾಗೂ ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡಲಾಗಿದೆ. ವಿರೋಧ ಪಕ್ಷವಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಧ್ವನಿ ಎತ್ತಲಾಗಿದೆ ಎಂದು ತಿಳಿಸಿದರು.
ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ವಿಚಾರಗಳು ಹಲವು ತಿರುವುಗಳನ್ನು ಪಡೆದುಕೊಂಡಿವೆ. ಈ ಬಗ್ಗೆ ಯಾರಿಗೆ ಯಾವ ಮಾಹಿತಿ ತಿಳಿದಿದೆಯೋ, ಅವರೇ ಸ್ಪಷ್ಟನೆ ನೀಡುವುದು ಸೂಕ್ತ. ಈ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಎಂಬುದು ರಾಜ್ಯದ ಜನರ ಅಪೇಕ್ಷೆಯಾಗಿದ್ದು, ಸರ್ಕಾರವೂ ತನಿಖೆಗೆ ಆದೇಶಿಸಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ. ತಪ್ಪು ಮಾಡಿದವರು ಕಾನೂನಿನ ಪ್ರಕಾರ ಹೊಣೆಗಾರಿಕೆ ಎದುರಿಸಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎನ್ಡಿಎ ಮೈತ್ರಿಕೂಟದ ಪ್ರಮುಖ ನಾಯಕರಾಗಿದ್ದಾರೆ. ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ಅವರ ಸೇವೆಯನ್ನು ಬಿಜೆಪಿ ಸಕ್ರಿಯವಾಗಿ ಬಳಸಿಕೊಳ್ಳಲಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ವಿಜಯೇಂದ್ರ ಅವರ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದುವರಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಟಿಂಗ್ ಆಪರೇಷನ್ ಪ್ರಕರಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವಂತಹ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟ ಪ್ರೀತಂಗೌಡ, ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಬೆರೆಸದೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಬೇಕು. ಮಾಜಿ ಮುಖ್ಯಮಂತ್ರಿಗಳಿಗೆ ಅಗೌರವ ತರುವಂತಹ ಘಟನೆ ನಡೆದಿದ್ದರೆ, ಅದರ ಹಿಂದಿರುವವರನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
