ಶ್ಲೋಕ – 13
ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ ॥೧೩॥
ಪಂಚ ಏತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತ ಅಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ ಕರ್ಮಣಾಮ್ –ಎಲ್ಲ ಕಾರ್ಯಗಳು ಕೈಗೂಡಲು ಇವು ಐದು ಕಾರಣಗಳು. ಹೇ ಮಹಾಬಾಹೋ, ವೈದಿಕ ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಅವುಗಳನ್ನು ನನ್ನಿಂದ ತಿಳಿದುಕೋ :
ನಮ್ಮಲ್ಲಿ ಅನೇಕರಿಗೆ ಒಂದು ಪ್ರಶ್ನೆ ಇದೆ. ನಾವು ಮಾಡಿದ ಕೆಲಸವನ್ನು ‘ನಾನು ಮಾಡಿದೆ’ ಅನ್ನುವುದರಲ್ಲಿ ತಪ್ಪೇನು’ ಎಂದು. ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾದರೆ, ಒಂದು ಕ್ರಿಯೆ ನಡೆಯಬೇಕಾದರೆ ಆ ಕ್ರಿಯೆಯ ಹಿಂದೆ ಇರುವ ಐದು ಕಾರಣಗಳನ್ನು ತಿಳಿದುಕೊಳ್ಳಬೇಕು. ವೈದಿಕ ಸಾಂಖ್ಯ ಶಾಸ್ತ್ರದಲ್ಲಿ, ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಈ ಐದು ಕಾರಣಗಳನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ.
ಇಲ್ಲಿ ಕೃಷ್ಣ ಅರ್ಜುನನನ್ನು ಮಹಾಬಾಹೋ ಎಂದು ಸಂಬೋಧಿಸಿದ್ದಾನೆ. ‘ಮಹಾ-ಬ’ ಅಂದರೆ ಮಹತ್ತಾದ ಬಯಕೆಗಳು. ಅದನ್ನು ತ್ಯಾಗ ಮಾಡಿದವ-ಮಹಾಬಾಹು. ನಾವೆಲ್ಲರೂ ನಮ್ಮ ಜೀವನದಲ್ಲಿ ಕರ್ಮಫಲತ್ಯಾಗ ಮಾಡಿ, ಕೇವಲ ಭಗವದರ್ಪಣಾ ಭಾವದಿಂದ ಕರ್ಮ ಮಾಡುವುದನ್ನು ಕಲಿತುಕೊಂಡು-ಮಹಾಬಾಹುಗಳಾಗಬೇಕು ಎನ್ನುವುದು ಈ ಸಂಬೋಧನೆ ಹಿಂದಿರುವ ಧ್ವನಿ.
