ಶ್ಲೋಕ – 17
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ ।
ಹತ್ವಾSಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ ॥೧೭॥
ಯಸ್ಯ ನ ಅಹಂಕೃತಃ ಭಾವಃ ಬುದ್ಧಿಃ ಯಸ್ಯ ನ ಲಿಪ್ಯತೇ ।
ಹತ್ವಾ ಅಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ – ನಾನು ಮಾಡಿದೆ ಎಂಬ ಹಮ್ಮಿರದವನು, ಬಗೆಯಲ್ಲಿ ಫಲದ ನಂಟಿರದವನು, ಈ ಮಂದಿಯನ್ನೆಲ್ಲ ಕೊಂದರೂ ಯಾರನ್ನೂ ಕೊಲ್ಲುವುದಿಲ್ಲ. ಕರ್ಮದ ಸೆರೆ ಅವನನ್ನು ಸೋಕದು.
ಕರ್ಮಫಲದ ತ್ಯಾಗ ಮಾಡಿದವ ಯಾವ ಕರ್ಮ ಮಾಡಿದರೂ ಅದು ಅವನಿಗೆ ಬಾಧಕವಾಗುವುದಿಲ್ಲ. ನಾವು ‘ನನ್ನಿಂದಾಯಿತು’ ಎಂದು ಅಂಟಿಸಿಕೊಳ್ಳದೆ, ಯಾವುದೇ ಫಲಾಪೇಕ್ಷೆ ಇಲ್ಲದೆ, ಕರ್ಮ ಮಾಡಿದಾಗ-ಆ ಕರ್ಮದ ಫಲ ಎಂದೂ ನಮ್ಮನ್ನು ಬಾಧಿಸುವುದಿಲ್ಲ. ನಾವು ಮಹಾಭಾರತ ಯುದ್ಧದ ಸನ್ನಿವೇಶವನ್ನು ನೋಡಿದರೆ-ಪಾಂಡವರಿಗೆ ಯುದ್ಧ ಅನಿವಾರ್ಯವಾಗಿ ಒದಗಿಬಂದಿರುವುದು. ಅವರು ಎಂದೂ ಯುದ್ಧವಾಗಬೇಕು ಎಂದು ಬಯಸಿಲ್ಲ; ಯುದ್ಧದಲ್ಲಿ ಗೆದ್ದು ಅಧಿಕಾರ ಪಡೆಯಬೇಕು ಎಂತಲೂ ಯೋಚಿಸಿಲ್ಲ. ಆದರೆ ಅವರಿಗೆ ಅನಿವಾರ್ಯವಾಗಿ ಯುದ್ಧಮಾಡುವ ಸನ್ನಿವೇಶ ಎದುರಿಗೆ ಬಂದು ನಿಂತಿತು. ಅವರು ಅದನ್ನು ‘ಇದು ದೈವೇಚ್ಛೆ’ ಎಂದು ಯುದ್ಧದ ಪರಿಣಾಮದ ಬಗ್ಗೆ ಯೋಚಿಸದೆ ಭಗವದರ್ಪಣಾ ಭಾವದಿಂದ ಮಾಡಿದರು. ಈ ರೀತಿ ಒದಗಿ ಬಂದ ಯುದ್ಧದಲ್ಲಿ ಅವರು ಅನೇಕಾನೇಕ ಯೋಧರನ್ನು ಕೊಲ್ಲಬೇಕಾಯಿತು. ಆದರೆ ಅವರು ತಮ್ಮ ಕರ್ತವ್ಯ ಕರ್ಮವನ್ನು ಫಲಾಪೇಕ್ಷೆ, ಅಹಂಕಾರವಿಲ್ಲದೆ ಮಾಡಿದರು. ಈ ರೀತಿ “ನಿರ್ಲಿಪ್ತ ಮನಸ್ಸಿನಿಂದ ಯುದ್ಧ ಭೂಮಿಯಲ್ಲಿ ಅನೇಕ ಜನರನ್ನು ಕೊಲ್ಲುವ ಪ್ರಸಂಗ ಬಂದರೂ ಕೂಡ-ಆ ಕೊಂದ ಪಾಪ ಕೊಂದವನನ್ನು ಸೋಕುವುದಿಲ್ಲ” ಎನ್ನುತ್ತಾನೆ ಕೃಷ್ಣ. ಆದರೆ ಇಲ್ಲಿ ಬಹಳ ಮುಖ್ಯ ವಿಚಾರ ಎಂದರ-ಮಾನಸಿಕವಾಗಿ ಒಂದು ಕ್ಷಣವೂ ನಮಗೆ ಭಗವಂತನ ಮೇಲೆ ಅಪನಂಬಿಕೆ ಬರಕೂಡದು; ಸಂಪೂರ್ಣ ಅರ್ಪಣಾ ಭಾವದಲ್ಲಿ, ನಿಶ್ಚಿತಾಭಿಪ್ರಾಯದಲ್ಲಿ(Conviction) ನಮ್ಮ ಪಾಲಿಗೆ ಒದಗಿ ಬಂದಿರುವ ಕರ್ಮವನ್ನು ಫಲಾಪೇಕ್ಷೆ ಇಲ್ಲದೆ ಮಾಡಬೇಕು. ಭಗವಂತನ ಕೈಯಲ್ಲಿ ನಾನು ಒಂದು ಸಾಧನ(Instrument)ಎನ್ನುವ ಎಚ್ಚರದಿಂದ ಎಲ್ಲವನ್ನು ಭಗವಂತನ ಚರಣಗಳಿಗೆ ಅರ್ಪಿಸಿ ಕರ್ಮವನ್ನು ಮಾಡಿದಾಗ ಕರ್ಮದ ಸೆರೆ ನಮ್ಮನ್ನು ಸೋಕುವುದಿಲ್ಲ. ಜೀವನಿಗೆ ಕರ್ಮದ ಫಲ ತಟ್ಟುವುದೇ ಅವನು ‘ನಾನು ಮಾಡಿದೆ’ ಎಂದು ತಿಳಿದುಕೊಳ್ಳುವುದರಿಂದ.
ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಜೀವನಿಗೆ ಸ್ವತಂತ್ರ ಕರ್ತೃತ್ವ ಇಲ್ಲ, ಕರ್ಮ ಭಗವದಿಚ್ಛೆಯಂತೆ ನಡೆಯುತ್ತದೆ. ಹೀಗಿರುವಾಗ ಜೀವನಿಗೆ ವಿಧಿನಿಷೇಧ ಏಕೆ? ಶಾಸ್ತ್ರ ಏಕೆ ಅದನ್ನು ಮಾಡು, ಇದನ್ನು ಮಾಡಬೇಡ ಎಂದು ಹೇಳುತ್ತದೆ? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.
