ಹಾಸನ: ಹಾಸನ ತಾಲೂಕು ತಹಶೀಲ್ದಾರ್ ಗೀತಾ ಸಿ.ಜಿ. ಅವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡಿಸಿ ಅವಮಾನಿಸಿದ ಪೊಲೀಸ್ ಇಲಾಖೆಯ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘ ಆಗ್ರಹಿಸಿದೆ.
ನವೆಂಬರ್ 8ರಂದು ಹಾಸನಾಂಬೆ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಾಲಯದ ಮುಂಭಾಗದಲ್ಲಿ ಪ್ರೋಟೋಕಾಲ್ ವಾಹನ ತೆರವುಗೊಳಿಸುವ ವಿಚಾರವಾಗಿ ಪೊಲೀಸ್ ಉಪಾಧೀಕ್ಷಕ ಮಾಲತೇಶ್ ಅವರು ತಹಶೀಲ್ದಾರ್ ಗೀತಾ ಸಿ.ಜಿ. ಅವರೊಂದಿಗೆ ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಸಂಘ ಆರೋಪಿಸಿದೆ.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಗೌರವ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆದರೆ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯನ್ನು ಸಾರ್ವಜನಿಕವಾಗಿ ಅಗೌರವದಿಂದ ನಡೆಸಿಕೊಂಡಿರುವುದು ಖಂಡನೀಯ ಎಂದು ಸಂಘ ಪತ್ರದಲ್ಲಿ ತಿಳಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಉಪಾಧೀಕ್ಷಕ ಮಾಲತೇಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ತಹಶೀಲ್ದಾರ್ ಅವರಿಗೆ ಸೂಕ್ತ ಗೌರವ ಮತ್ತು ನ್ಯಾಯ ಒದಗಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

