ತುಮಕೂರು: ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಚಾಕು ಕಳಿಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಕಾಂಗ್ರೆಸ್ ಮತ್ತೆ ಹಳೆ ಚಾಳಿಗೆ ಇಳಿದು ಬಿಟ್ಟಿದೆ.ಸರ್ಕಾರದ ಆಡಳಿತ ಲೋಪದ ಬಗ್ಗೆ ವಿರೋಧ ಪಕ್ಷದ ನಾಯಕರು ಪ್ರಶ್ನೆ ಕೇಳಿದರೆ ಅವರ ಮೇಲೆ ದಾಳಿ ಮಾಡುವುದು, ಬಡಿಯುವುದು, ಘೇರಾವ್ ಮಾಡಿಸುವುದು, ಮನೆಗೆ ಚಾಕು-ಚೂರಿ ಕಳುಹಿಸುವುದು ಅವರ ಸಂಸ್ಕೃತಿ ಎಂದು ಅವರು ಆರೋಪಿಸಿದರು.
ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡುವ ರಾಹುಲ್ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದಾರೆ.ಅರಾಜಕತೆ ಸೃಷ್ಟಿಸುವುದರಿಂದ ಅಧಿಕಾರ ಹಿಡಿಯಬಹುದು ಎಂದುಕೊಂಡಿದ್ದಾರೆ.ಜನ ಅವರನ್ನು ತಿರಸ್ಕರಿಸುತ್ತಿರುವುದರಿಂದ ಸುಪ್ರೀಂಕೋರ್ಟ್, ಚುನಾವಣಾ ಆಯೋಗ, ಮುಖ್ಯ ನ್ಯಾಯಮೂರ್ತಿಗಳ ಮೇಲೆ ದಾಳಿ ಮಾಡಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದರು.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಮಾತನಾಡುವ ಹಕ್ಕಿದೆ.ಛಲವಾದಿ ನಾರಾಯಣ ಸ್ವಾಮಿ ಅವರು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಅದನ್ನು ಹತ್ತಿಕ್ಕುವ ಗೂಂಡಾ ಪ್ರವೃತ್ತಿಯ ಕಾಂಗ್ರೆಸ್ ಅನ್ನು ಧಿಕ್ಕರಿಸಬೇಕು. ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಗೌರವ ಇದ್ದರೆ ಜನರಿಂದ ಮತ ಹಾಕಿಸಿಕೊಂಡು ಗೆದ್ದು ಬರಬೇಕು. ವಿರೋಧ ಪಕ್ಷ ಮಾತನಾಡಿದರೆ ಮಾತನಾಡಲು ಅವಕಾಶ ಕೊಡಬೇಕು ಆಗ್ರಹಿಸಿದ ಅವರು, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಧೂಳಿಪಟ ಆಗುವುದು ಸತ್ಯ. ಬಿಜೆಪಿ, ಜೆಡಿಎಸ್ನ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ.ಗೂಂಡಾ ಪ್ರವೃತ್ತಿಯ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನ ಕಿತ್ತೊಗೆಯುತ್ತಾರೆ ಎಂದು ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ವೈ.ಹೆಚ್. ಹುಚ್ಚಯ್ಯ, ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾಅಧ್ಯಕ್ಷ ವೈ.ಹೆಚ್. ರವಿಚಂದ್ರ ಮಾತನಾಡಿದರು.
ಸತ್ಯಮಂಗಲ ಜಗದೀಶ್, ಗಣೇಶ್ಪ್ರಸಾದ್, ಅಂಜನಮೂರ್ತಿ, ಅಶೋಕ್, ಧನುಷ್, ವಿರೂಪಾಕ್ಷಪ್ಪ, ಮುಖಂಡರಾದ ನವಚೇತನ್, ಪ್ರತಾಪ್, ಸಿದ್ಧಗಂಗಯ್ಯ, ಬಂಬೂ ಮೋಹನ್ ಮೊದಲಾದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
