ಕೆ.ಆರ್.ಪೇಟೆ: ಭಾರತದ ಸಂವಿಧಾನವು ನಮ್ಮ ದೇಶದ ಆಡಳಿತ ವ್ಯವಸ್ಥೆಯ ಮೂಲ ಆಧಾರ ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ, ಸಮಾನತೆ, ಘನತೆ ಮತ್ತು ಹಕ್ಕುಗಳನ್ನು ರಕ್ಷಿಸುವ ಪವಿತ್ರ ಕಾನೂನು ಆಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಹಾಗು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಅವರು ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಮತ್ತು ಸಂವಿದಾನ ದಿನದ ಕುರಿತು ಕಾನೂನು ಜಾಗೃತಿ ಅರಿವು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ನಮ್ಮ ಸಂವಿಧಾನವನ್ನು ಅಂಗೀಕರಿಸಿತು. 1950ರ ಜನವರಿ 26ರಂದು ಅದು ಜಾರಿಗೆ ಬಂದಿತು. ಈ ಐತಿಹಾಸಿಕ ಕಾರ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಸ್ಮರಣೀಯವಾದುದು.

ಸಂವಿಧಾನದ ಪ್ರಸ್ತಾವನೆಯು ಭಾರತದ ಆತ್ಮವಾಗಿದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ಹಾಗೂ ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಸಾರುವ ಸಹೋದರತ್ವ ನಮ್ಮ ಸಂವಿಧಾನದ ಪ್ರಮುಖ ಆಶಯಗಳಾಗಿವೆ.
ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಪ್ರಮುಖ ಸ್ತಂಭವಾಗಿದೆ. ಸಂವಿಧಾನದ ವಿಧಿ 14ರ ಅಡಿಯಲ್ಲಿ ಕಾನೂನಿನ ಮುಂದೆ ಸಮಾನತೆಯ ಭರವಸೆ ನೀಡಲಾಗಿದೆ. ವಿಧಿ 21ರ ಅಡಿಯಲ್ಲಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲಾಗಿದೆ. ವಿಧಿ 32ರ ಮೂಲಕ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ಗೆ ಮೊರೆ ಹೋಗುವ ಅವಕಾಶ ಕಲ್ಪಿಸಲಾಗಿದೆ.

ನ್ಯಾಯಾಧೀಶರಾಗಿ ನಮ್ಮ ಜವಾಬ್ದಾರಿ ಕೇವಲ ಪ್ರಕರಣಗಳನ್ನು ವಿಚಾರಣೆ ನಡೆಸಿ ತೀರ್ಪು ನೀಡುವುದಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ದೊರೆಯುವಂತೆ ಮಾಡುವುದು, ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವುದು ಮತ್ತು ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಕಾಪಾಡುವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ.
ನ್ಯಾಯವು ವಿಳಂಬವಾಗಬಾರದು. ಆರ್ಥಿಕವಾಗಿ ದುರ್ಬಲರು, ಮಹಿಳೆಯರು, ಮಕ್ಕಳು ಹಾಗೂ ಸಮಾಜದ ಅಂಚಿನಲ್ಲಿರುವ ಜನರಿಗೂ ನ್ಯಾಯ ಸುಲಭವಾಗಿ ತಲುಪಬೇಕು. ಉಚಿತ ಕಾನೂನು ನೆರವು, ಲೋಕ ಅದಾಲತ್ ಮತ್ತು ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ವಕೀಲರು ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ನ್ಯಾಯಾಧೀಶರು ಮತ್ತು ವಕೀಲರು ಪರಸ್ಪರ ಗೌರವ, ವೃತ್ತಿಪರ ನೈತಿಕತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳೊಂದಿಗೆ ಕಾರ್ಯನಿರ್ವಹಿಸಿದಾಗ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗುತ್ತದೆ.
ಇಂದಿನ ಯುವಜನತೆ ಸಂವಿಧಾನವನ್ನು ಕೇವಲ ಪರೀಕ್ಷೆಗಾಗಿ ಓದದೆ, ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಕ್ಕುಗಳ ಬಗ್ಗೆ ಜಾಗೃತರಾಗುವುದರ ಜೊತೆಗೆ ಕರ್ತವ್ಯಗಳನ್ನೂ ಪ್ರಾಮಾಣಿಕವಾಗಿ ಪಾಲಿಸಬೇಕು.
ನಾವು ನೆನಪಿಡಬೇಕಾದ ಪ್ರಮುಖ ಅಂಶವೆಂದರೆ, ಸಂವಿಧಾನವು ಸರ್ಕಾರಕ್ಕೆ ಅಧಿಕಾರ ನೀಡುವ ದಾಖಲೆಯಷ್ಟೇ ಅಲ್ಲ; ಆ ಅಧಿಕಾರಕ್ಕೆ ಮಿತಿಯನ್ನು ವಿಧಿಸಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮಹತ್ವದ ವ್ಯವಸ್ಥೆಯೂ ಆಗಿದೆ.
ಕೊನೆಯದಾಗಿ, ಸಂವಿಧಾನದ ಆಶಯಗಳನ್ನು ನಮ್ಮ ವೃತ್ತಿಯಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳೋಣ. ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಮೌಲ್ಯಗಳ ಆಧಾರದ ಮೇಲೆ ಬಲಿಷ್ಠ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡಲು ಪ್ರಟಿಯೊಬ್ಬರು ಕೈ ಜೋಡಿಸಬೇಕು ಎಂದು ನ್ಯಾ. ಸುಧೀರ್ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ 1ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಸುಷ್ಮಾ ಮಾತನಾಡಿ. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಹಕ್ಕನ್ನು ನೀಡಿದೆ. ಸಂವಿಧಾನದ ಪೀಠಿಕೆಯಲ್ಲಿಯೇ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಪ್ರತಿಯೊಬ್ಬರಿಗೂ ಒದಗಿಸುವ ಮಹತ್ತರ ಆಶಯವನ್ನು ಹೊಂದಿದ್ದು, ಪ್ರತಿ ವರ್ಷ ನವೆಂಬರ್ 9ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ. 1995ರ ನವೆಂಬರ್ 9ರಂದು ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ, 1987 ಜಾರಿಗೆ ಬಂದ ಹಿನ್ನೆಲೆಯಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ.
ಈ ದಿನದ ಮುಖ್ಯ ಉದ್ದೇಶ ಸಮಾಜದ ಬಡವರು, ದುರ್ಬಲ ವರ್ಗದವರು, ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು ಒದಗಿಸುವುದಾಗಿದೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳು ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ.
ನ್ಯಾಯ ಎನ್ನುವುದು ಕೇವಲ ನ್ಯಾಯಾಲಯದ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯದ ಅರಿವು ಮತ್ತು ನ್ಯಾಯದ ನೆರವು ತಲುಪಿದಾಗ ಮಾತ್ರ ನಮ್ಮ ನ್ಯಾಯಾಂಗ ವ್ಯವಸ್ಥೆಯ ಉದ್ದೇಶ ಸಾರ್ಥಕವಾಗುತ್ತದೆ.
ಒಬ್ಬ ಬಡ ವ್ಯಕ್ತಿ ಹಣದ ಕೊರತೆಯಿಂದ ನ್ಯಾಯದಿಂದ ವಂಚಿತನಾಗಬಾರದು. ಒಬ್ಬ ಮಹಿಳೆ ತನ್ನ ಹಕ್ಕುಗಳ ಅರಿವಿಲ್ಲದೆ ಅನ್ಯಾಯಕ್ಕೆ ಒಳಗಾಗಬಾರದು. ಒಬ್ಬ ಮಗು ತನ್ನ ಹಕ್ಕುಗಳಿಂದ ವಂಚಿತವಾಗಬಾರದು.
ನ್ಯಾಯಾಲಯಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ನ್ಯಾಯದ ನಿರೀಕ್ಷೆಯೊಂದಿಗೆ ಬರುತ್ತಾನೆ. ಅವರಲ್ಲಿ ನ್ಯಾಯದ ಮೇಲಿನ ವಿಶ್ವಾಸವನ್ನು ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ವಿಶೇಷವಾಗಿ ವಕೀಲರು, ಕಾನೂನು ಸೇವಾ ಸ್ವಯಂಸೇವಕರು, ನ್ಯಾಯಾಂಗ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯವರು ಕಾನೂನು ಸೇವೆಗಳ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ನ್ಯಾಯಾಧೀಶರಾದ ಸುಷ್ಮಾ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವಿ.ವಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾನೂನಿನ ಅರಿವು ಮತ್ತು ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲರಾದ ಅರುಣ್ ಕುಮಾರ್, ಡಿ.ಜೇ.ಗಣೇಶ್, ಎಸ್.ಎನ್.ಧನಂಜಯ, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎ.ಎನ್., ರಾಜೇಶ್ವರಿ, ಐ.ಕ್ಯೂ. ಏ.ಸಿ. ಸಂಯೋಜಕ ಬಿ.ಎಂ.ಉಮೇಶ್, ಪ್ರಾದ್ಯಾಪಕ ಜಯಕೀರ್ತಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ದೀಪ, ದಿವ್ಯಶ್ರೀ, ಕಲ್ಪನಾ, ಅಭಿಷೇಕ್, ಮೂರ್ತಿ, ರಾಮಚಂದ್ರು, ಚೇತನ್, ಪ್ರದೀಪ, ಕುಮಾರ್, ರಘುಪತಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಜರಿದ್ದರು.
– ಶ್ರೀನಿವಾಸ್ ಆರ್.
