ಬೆಂಗಳೂರು : ಭಾರತದ ಪ್ರಮುಖ ಬಹು-ವಿಶೇಷ ಆಸ್ಪತ್ರೆಗಳ ಜಾಲಗಳಲ್ಲಿ ಒಂದಾಗಿರುವ ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಲಿಮಿಟೆಡ್ (ಮಣಿಪಾಲ್ ಹಾಸ್ಪಿಟಲ್ಸ್), 2026ರ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ 2026-27ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ.
ರೋಗಿಗಳ ಸಂಖ್ಯೆಯಲ್ಲಿನ ನಿರಂತರ ಹೆಚ್ಚಳ, ವಿಶೇಷ ಚಿಕಿತ್ಸಾ ವಿಭಾಗಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಆಸ್ಪತ್ರೆಗಳ ಸಾಮರ್ಥ್ಯದ ಸಮರ್ಪಕ ಬಳಕೆಯಿಂದ ಕಂಪನಿಯು ಉತ್ತಮ ಕಾರ್ಯಕ್ಷಮತೆ ದಾಖಲಿಸಿದೆ.
ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯವು ₹3,399 ಕೋಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.37.3ರಷ್ಟು ಬೆಳವಣಿಗೆ ದಾಖಲಿಸಿದೆ. EBITDA ಶೇ.29.8ರಷ್ಟು ಹೆಚ್ಚಳದೊಂದಿಗೆ ₹882 ಕೋಟಿಯಾಗಿದೆ. EBITDA ಮಾರ್ಜಿನ್ ಶೇ.26ರಷ್ಟಿದೆ. 2026-27ರ ಮೊದಲ ಆರು ತಿಂಗಳಲ್ಲಿ ಆದಾಯವು ₹6,490 ಕೋಟಿಗೆ ಮತ್ತು EBITDA ₹1,631 ಕೋಟಿಗೆ ಏರಿಕೆಯಾಗಿದೆ.
ಈ ಅವಧಿಯಲ್ಲಿ ಒಳರೋಗಿಗಳ ಸಂಖ್ಯೆ ಶೇ.35ರಷ್ಟು ಹೆಚ್ಚಳದೊಂದಿಗೆ ಸುಮಾರು 1.69 ಲಕ್ಷಕ್ಕೆ ತಲುಪಿದೆ. ಹೊರರೋಗಿಗಳ ಸಂಖ್ಯೆ ಶೇ.27.2ರಷ್ಟು ಏರಿಕೆಯಾಗಿ 17.4 ಲಕ್ಷವಾಗಿದೆ. ಹಾಸಿಗೆ ಬಳಕೆಯ ಪ್ರಮಾಣ ಶೇ.70.1ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ 300 ಹಾಸಿಗೆಗಳ ಸಾಮರ್ಥ್ಯದ ಹೊಸ ಆಸ್ಪತ್ರೆ ಕಾರ್ಯಾರಂಭ ಮಾಡಿದ್ದು, ಇದರಿಂದ ಮಣಿಪಾಲ್ ಹಾಸ್ಪಿಟಲ್ಸ್ನ ಒಟ್ಟು ಪರವಾನಗಿ ಹೊಂದಿರುವ ಹಾಸಿಗೆಗಳ ಸಂಖ್ಯೆ 13,440ಕ್ಕೆ ತಲುಪಿದೆ.
ಅಸಾಧಾರಣ ವೆಚ್ಚಗಳನ್ನು ಹೊರತುಪಡಿಸಿದರೆ ಕಂಪನಿಯ ತೆರಿಗೆ ನಂತರದ ಲಾಭ (PAT) ₹380 ಕೋಟಿಯಾಗಿದ್ದು, ಶೇ.21.6ರಷ್ಟು ಬೆಳವಣಿಗೆ ದಾಖಲಿಸಿದೆ. ಸಹ್ಯಾದ್ರಿ ಆಸ್ಪತ್ರೆಗಳ ಸ್ವಾಧೀನಕ್ಕಾಗಿ ಪಡೆದ ಸಾಲದ ಮೇಲಿನ ಬಡ್ಡಿ ವೆಚ್ಚವನ್ನೂ ಹೊರತುಪಡಿಸಿದರೆ PAT ₹455 ಕೋಟಿಯಾಗಿದ್ದು, ಶೇ.45.6ರಷ್ಟು ಏರಿಕೆಯಾಗಿದೆ.
ಸಹ್ಯಾದ್ರಿ ಆಸ್ಪತ್ರೆಗಳು ಎರಡನೇ ತ್ರೈಮಾಸಿಕದಲ್ಲಿ ₹375 ಕೋಟಿ ಆದಾಯ ಮತ್ತು ₹73 ಕೋಟಿ EBITDA ಕೊಡುಗೆ ನೀಡಿವೆ. ಆಸ್ಪತ್ರೆಗಳ ಏಕೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ವೈದ್ಯಕೀಯ ಸೌಲಭ್ಯಗಳ ವಿಸ್ತರಣೆ, ಕೇಂದ್ರೀಕೃತ ಖರೀದಿ ವ್ಯವಸ್ಥೆ ಮತ್ತು ಡಿಜಿಟಲ್ ಸೇವೆಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಕಾರ್ಡಿಯಾಕ್ ಸೈನ್ಸಸ್, ಆಂಕಾಲಜಿ, ನ್ಯೂರೋಸೈನ್ಸಸ್, ಗ್ಯಾಸ್ಟ್ರೋಎಂಟರಾಲಜಿ, ಆರ್ಥೋಪೆಡಿಕ್ಸ್ ಮತ್ತು ರೀನಲ್ ಸೈನ್ಸಸ್ ವಿಭಾಗಗಳು ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿವೆ. ಮೊದಲ ಆರು ತಿಂಗಳಲ್ಲಿ ಆಂಕಾಲಜಿ ವಿಭಾಗ ಶೇ.51, ನ್ಯೂರೋಸೈನ್ಸಸ್ ಶೇ.47 ಮತ್ತು ಆರ್ಥೋಪೆಡಿಕ್ಸ್ ಶೇ.44ರಷ್ಟು ಬೆಳವಣಿಗೆ ದಾಖಲಿಸಿವೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳಲ್ಲಿಯೂ ಕಂಪನಿ ಹೂಡಿಕೆ ಮಾಡಿದೆ.
ಈ ಸಾಧನೆಯ ಕುರಿತು ಮಾತನಾಡಿದ *ಮಣಿಪಾಲ್ ಹಾಸ್ಪಿಟಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಪ್ ಜೋಸ್,* ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗಳ ಸೇವೆಗಳನ್ನು ಪಡೆಯುತ್ತಿರುವುದು ಈ ತ್ರೈಮಾಸಿಕದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.
ರೋಗಿಗಳ ಸಂಖ್ಯೆಯ ಆಧಾರಿತ ಬೆಳವಣಿಗೆಯೇ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸುಸ್ಥಿರ ಪ್ರಗತಿಗೆ ಉತ್ತಮ ಮಾರ್ಗವಾಗಿದೆ. ವೈದ್ಯಕೀಯ ಸಾಮರ್ಥ್ಯಗಳನ್ನು ಬಲಪಡಿಸುವುದು, ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವುದು ಮತ್ತು ಸಮಗ್ರ ಆರೋಗ್ಯ ಸೇವಾ ವ್ಯವಸ್ಥೆಯನ್ನು ರೂಪಿಸುವತ್ತ ಕಂಪನಿ ಗಮನಹರಿಸುತ್ತಿದೆ ಎಂದು ತಿಳಿಸಿದರು.
