ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಘದ ಆವರಣದಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಯ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ತನ್ನದಾಗಿಸಿಕೊಂಡಿತು.
ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಹಾಗೂ ನವೋದಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ರಾಜ್ಯದ 33 ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯದಲ್ಲಿ ವಿಜಯಪುರ ಹಾಗೂ ಬೆಂಗಳೂರು ದಕ್ಷಿಣ ತಂಡಗಳು ಮುಖಾಮುಖಿಯಾಗಿದ್ದು, ವಿಜಯಪುರ ತಂಡ 40-05 ಅಂಕಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಬೆಳಗಾವಿ ತಂಡ ತೃತೀಯ ಹಾಗೂ ರಾಯಚೂರು ತಂಡ ಚತುರ್ಥ ಸ್ಥಾನ ಗಳಿಸಿದವು.

ವೈಯಕ್ತಿಕ ಪ್ರಶಸ್ತಿಗಳಲ್ಲಿ ಬೆಳಗಾವಿ ತಂಡದ ಉಮೇಶ್ ಕಣಕಟ್ರಿ ಉತ್ತಮ ರೈಡರ್, ವಿಜಯಪುರ ತಂಡದ ವಿವೇಕ್ ಉತ್ತಮ ಟ್ಯಾಕಲ್ ಹಾಗೂ ಸಂದೀಪ್ ಚೌಹಾಣ್ ಉತ್ತಮ ಆಲ್ರೌಂಡರ್ ಪ್ರಶಸ್ತಿ ಪಡೆದರು.
ಬಹುಮಾನ ವಿತರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಕೆ.ಎನ್. ಶಿವಮಾದಯ್ಯ ಮಾತನಾಡಿ, ಈ ಪಂದ್ಯಾವಳಿಯಲ್ಲಿ ಆಯ್ಕೆಯಾದ ಆಟಗಾರರು ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಆಯ್ಕೆಯಾದ ಆಟಗಾರರಿಗೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಒಂದು ವಾರ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಣ ನಿರ್ದೇಶಕ ಸಿ. ದೇವರಸೇಗೌಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ. ಆನಂದಕುಮಾರ್, ಕಾಂಗ್ರೆಸ್ ಮುಖಂಡ ಕೆ.ಬಿ. ಉದಯಕುಮಾರ್, ನವೋದಯ ವಿದ್ಯಾ ಸಂಘದ ಅಧ್ಯಕ್ಷ ಸಿ.ಜಿ. ಮಂಜುನಾಥ್, ಉದ್ಯಮಿ ಆನಂದಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ತೋಟಿ ನಾಗರಾಜು, ನವೋದಯ ವಿದ್ಯಾ ಸಂಘದ ಗೌರವಾಧ್ಯಕ್ಷ ಡಾ.ಸಿ.ಎಸ್. ಶೇಷಶಯನ, ಉಪಾಧ್ಯಕ್ಷ ಡಾ.ಎಸ್. ಪ್ರಮೋದ್, ಕಾರ್ಯದರ್ಶಿ ಜಲೇಂದ್ರಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಉಪನ್ಯಾಸಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
