ಕೊರಟಗೆರೆ: ಅಡಿಕೆ ಬೆಳೆಯೊಂದಿಗೆ ಕಾಫಿ, ಕೋಕೋ, ಕಾಳುಮೆಣಸು ಹಾಗೂ ಏಲಕ್ಕಿಯಂತಹ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಕೃಷಿಯಲ್ಲಿ ವೈವಿಧ್ಯತೆ ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹದಲ್ಲಿ ಸಲಹೆ ನೀಡಲಾಯಿತು.
ತಾಲ್ಲೂಕಿನ ಕಾದಲಾಪುರ ಗ್ರಾಮದ ರೈತ ವೆಂಕಟರಾಮು ಕೆ.ವಿ. ಅವರ ತೋಟದಲ್ಲಿ ಕ್ಯಾಂಪ್ಕೋ ವತಿಯಿಂದ ಆಯೋಜಿಸಿದ್ದ ರೈತ ಸಂಪರ್ಕ ಸಪ್ತಾಹ ಕಾರ್ಯಕ್ರಮದಲ್ಲಿ ರೈತರಿಗೆ ಮಿಶ್ರ ಬೆಳೆ ಪದ್ಧತಿಯ ಕುರಿತು ಮಾಹಿತಿ ನೀಡಲಾಯಿತು.

ಅಡಿಕೆ ತೋಟಗಳಲ್ಲಿ ಉಪಬೆಳೆಗಳಾಗಿ ಕಾಫಿ, ಕೋಕೋ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಳನ್ನು ಬೆಳೆಯುವುದರಿಂದ ಕೃಷಿಯಲ್ಲಿ ವೈವಿಧ್ಯತೆ ಸಾಧಿಸುವುದರ ಜೊತೆಗೆ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕೃಷಿ ತಜ್ಞರು ವಿವರಿಸಿದರು.
ಈ ಸಂದರ್ಭದಲ್ಲಿ ಕಾದಲಾಪುರದ ರೈತ ಗಿರೀಶ್ ಮಾತನಾಡಿ, ಅಡಿಕೆ ಬೆಳೆಯನ್ನೇ ಅವಲಂಬಿಸದೆ ಕೋಕೋ ಮತ್ತು ಕಾಫಿಯಂತಹ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ದೇವರಾಯಪಟ್ಟಣದ ರೈತ ಹೇಮಂತ್ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡು, ಅಡಿಕೆ ತೋಟದಲ್ಲಿ ಮಿಶ್ರ ಬೆಳೆ ಪದ್ಧತಿ ಅನುಸರಿಸುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಲಿಮಿಟೆಡ್ ನಿರ್ದೇಶಕ ರಾಘವೇಂದ್ರ ಎಚ್.ಎಂ., ಪ್ರಾದೇಶಿಕ ವ್ಯವಸ್ಥಾಪಕ ಹರೀಶ್ ಭಟ್, ತುಮಕೂರು ವಿಭಾಗದ ವ್ಯವಸ್ಥಾಪಕ ನಿತಿನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ ಸಂವಾದ ನಡೆಸಿ, ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸುವಂತೆ ಪ್ರೇರೇಪಿಸಲಾಯಿತು.
ವರದಿ: ನರಸಿಂಹಯ್ಯ ಹೊಸಕೋಟೆ
