ಶ್ಲೋಕ – 33
ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ ।
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥೩೩॥
ಧೃತ್ಯಾ ಯಯಾ ಧಾರಯತೇ ಮನಃ ಪ್ರಾಣ ಇಂದ್ರಿಯ ಕ್ರಿಯಾಃ ।
ಯೋಗೇನ ಅವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ – ಪಾರ್ಥ, ಭಕ್ತಿಯೋಗದಿಂದ ಬಗೆಗೊಂಡು ಯಾವ ಗಟ್ಟಿತನದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ವ್ಯಾಪಾರಗಳನ್ನು ದಾರಿಗೆಡದಂತೆ ಧರಿಸಬಲ್ಲುದೋ ಅದು ಸಾತ್ವಿಕ ಧೈರ್ಯ.
ಯಾವ ಧೃತಿಯಿಂದ ಮನಸ್ಸು, ದೇಹ, ಇಂದ್ರಿಯಗಳು ದಾರಿತಪ್ಪದೆ ಒಂದಕ್ಕೊಂದು ಪೂರಕವಾಗಿ ಭಕ್ತಿಯೋಗದಲ್ಲಿ ಕೆಲಸ ಮಾಡುತ್ತವೆ-ಅಂಥಹ ಧೃತಿ ಸಾತ್ವಿಕ ಧೃತಿ. ಮನಸ್ಸು ಯಥಾವತ್ತಾದದ್ದನ್ನು ಗ್ರಹಿಸುತ್ತದೆ, ಇಂದ್ರಿಯಗಳು ಮತ್ತು ದೇಹ ಅದಕ್ಕೆ ಪೂರಕವಾಗಿ, ಭಕ್ತಿಯಿಂದ ಕೆಲಸ ಮಾಡುತ್ತವೆ. ಇಲ್ಲಿ ಯೋಗ ಎಂದರೆ ಭಗವದ್ ಭಕ್ತಿಗೆ ಪೂರಕವಾಗಿ ವಾಸ್ತವವನ್ನು ಗ್ರಹಿಸುವ ಉಪಾಯ- ಅದೇ ನಮ್ಮ ಆತ್ಮವಿಶ್ವಾಸ. ಇದರಲ್ಲಿ ಅನೇಕ ಮುಖಗಳಿವೆ. ಉದಾಹರಣೆಗೆ ‘ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ’. ಸಾಮಾನ್ಯವಾಗಿ ತಪ್ಪನ್ನು ತಪ್ಪು ಎಂದು ಹೇಳಲು ಅನೇಕ ತೊಂದರೆಗಳಿರುತ್ತವೆ. ಇದಕ್ಕೆ ಮೊದಲ ಅಡ್ಡಿ-ದಾಕ್ಷಿಣ್ಯ. ಭಗವದ್ ಭಕ್ತಿಗೆ ಪೂರಕವಾದುದನ್ನು ನಾವು ನಿರ್ದಯವಾಗಿ ಹೇಳಿಬಿಡಬೇಕು. ದೈರ್ಯವಾಗಿ ತಪ್ಪನ್ನು ಪ್ರತಿಭಟಿಸಬೇಕು. ತಪ್ಪು ಗ್ರಹಿಕೆ ಮಾಡದೆ, ತಪ್ಪು ದಾರಿಯಲ್ಲಿ ಸಾಗದೆ, ಭಗವದ್ ಭಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದೆ, ಸತ್ಯವನ್ನು ನಿಷ್ಠುರವಾಗಿ ಹೇಳುವುದು ಸಾತ್ವಿಕ ಧೃತಿ. ಮನಸ್ಸು ಕೆಟ್ಟದ್ದನ್ನು ಯೋಚಿಸದೆ ಇರುವುದು, ದೇಹ ಕೆಟ್ಟದ್ದರ ಕಡೆ ಚಲಿಸದೇ ಇರುವುದು, ಇಂದ್ರಿಯಗಳು ಕೆಟ್ಟದ್ದನ್ನು ಗ್ರಹಿಸದೇ ಇರುವುದು- ಹೀಗೆ ಭಗವದ್ ಭಕ್ತಿಗೆ ಪೂರಕವಾಗಿರುವ ಎಲ್ಲವೂ ಸಾತ್ವಿಕ ಧೃತಿ.
ಸಾಮಾನ್ಯವಾಗಿ ನಾವು ನಮ್ಮ ದೇಹ ಇಂದ್ರಿಯಗಳನ್ನು ನಿಯಂತ್ರಿಸಬಹುದು, ಆದರೆ ಮನಸ್ಸು ಕೆಟ್ಟದ್ದನ್ನು ಯೋಚಿಸದಂತೆ ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ. ಇದನ್ನು ಸಾಧಿಸಲು ಧೀರ್ಘಕಾಲದ ಸಾಧನೆ ಅಗತ್ಯ. ಈ ಎಲ್ಲ ವಿಷಯಗಳು ತಿಳಿದಾಗ ನಾವು ಸಾತ್ವಿಕ ಧೃತಿಯಿಂದ ಎಷ್ಟು ದೂರದಲ್ಲಿದ್ದೇವೆ ಎನ್ನುವುದು ತಿಳಿಯುತ್ತದೆ ಮತ್ತು ನಮ್ಮನ್ನು ನಾವು ತಿದ್ದಿಕೊಂಡು ಸಾತ್ವಿಕ ಧೃತಿಯತ್ತ ಸಾಗಲು ಸಹಾಯಕವಾಗುತ್ತದೆ.
