ಬೆಂಗಳೂರು, ನ.18: ಮಕ್ಕಳ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸತ್ವ ಗ್ರೂಪ್ ಮಕ್ಕಳ ದಿನಾಚರಣೆಯ ಅಂಗವಾಗಿ ‘ಸತ್ವ ಸಿಟಿ: ವರ್ಲ್ಡ್ ಆಫ್ ವಂಡರ್ಸ್’ ಎಂಬ ವಿಶೇಷ ಉಪಕ್ರಮವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಮೂಲಕ ಮಕ್ಕಳ ಕಲಾಕೃತಿಗಳನ್ನು ನಗರದ ಸಾರ್ವಜನಿಕ ಸ್ಥಳಗಳಲ್ಲಿನ ಹೊರಾಂಗಣ ಜಾಹೀರಾತು ಫಲಕಗಳು ಹಾಗೂ ಕಲಾ ಸ್ಥಾಪನೆಗಳಲ್ಲಿ ಪ್ರದರ್ಶಿಸುವ ಮೂಲಕ ಪುಟ್ಟ ಕಲಾವಿದರ ಕನಸುಗಳಿಗೆ ವೇದಿಕೆ ಕಲ್ಪಿಸಲಾಗಿದೆ.
ಉತ್ತರ ಬೆಂಗಳೂರಿನಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಸಮಗ್ರ ವಸತಿ ಯೋಜನೆಯಾದ ‘ಸತ್ವ ಸಿಟಿ’ಯ ಪ್ರಚಾರದ ಭಾಗವಾಗಿ ಈ ವಿನೂತನ ಅಭಿಯಾನ ರೂಪಿಸಲಾಗಿದೆ. ಸ್ವಾವಲಂಬಿ 15 ನಿಮಿಷಗಳ ನಗರ ಪರಿಕಲ್ಪನೆಯಡಿ ಅಭಿವೃದ್ಧಿಗೊಳ್ಳುತ್ತಿರುವ ಈ ಯೋಜನೆಯ ಪ್ರಚಾರ ಕಥಾಹಂದರದಲ್ಲಿದ್ದ ಸೈಕಲ್ ಸವಾರಿ ಮಾಡುವ ಆರ್ಯನ್ ಎಂಬ ಬಾಲಕನ ಪಾತ್ರದಿಂದ ಪ್ರೇರಣೆ ಪಡೆದು, 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ‘ವಿಸ್ಮಯ ಮತ್ತು ಕಲ್ಪನೆ’ ವಿಷಯದಡಿ ಚಿತ್ರಗಳನ್ನು ರಚಿಸಲು ಆಹ್ವಾನಿಸಲಾಗಿತ್ತು.
ಮಕ್ಕಳು ರಚಿಸಿದ ಕಲಾಕೃತಿಗಳನ್ನು ಪೋಷಕರು #SattvaCityWorldOfWonders ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸೃಜನಶೀಲತೆ, ವಿಶಿಷ್ಟ ಕಲ್ಪನೆ ಮತ್ತು ವಿಷಯಕ್ಕೆ ಹೊಂದಾಣಿಕೆಯಾಗುವ ಅಂಶಗಳನ್ನು ಆಧರಿಸಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಪೋಷಕರ ಲಿಖಿತ ಒಪ್ಪಿಗೆ ಪಡೆದು, ಆಯ್ಕೆಯಾದ ಕಲಾಕೃತಿಗಳನ್ನು ಸತ್ವ ಸಿಟಿಯ ವಿನ್ಯಾಸದ ಪರಿಕಲ್ಪನೆಗೆ ಹೊಂದುವಂತೆ ರೂಪಿಸಿ, ಯೋಜನೆಯ ಸುತ್ತಮುತ್ತ ನಿರ್ಮಿಸಲಾದ ಎರಡು ಹೊರಾಂಗಣ ಕಲಾ ಸ್ಥಾಪನೆಗಳಲ್ಲಿ ಪ್ರದರ್ಶಿಸಲಾಯಿತು.
ಈ ಮೂಲಕ ಮಕ್ಕಳ ಕಲಾಕೃತಿಗಳು ಕೇವಲ ಚಿತ್ರಕಲಾ ಪುಸ್ತಕಗಳಿಗೆ ಸೀಮಿತವಾಗದೆ, ಸಾರ್ವಜನಿಕ ಸ್ಥಳಗಳ ಸೌಂದರ್ಯದ ಭಾಗವಾಗುವ ಅವಕಾಶ ದೊರೆಯಿತು.
ಅಭಿಯಾನದ ಸಮಾರೋಪದ ಅಂಗವಾಗಿ ಎಂಟು ವರ್ಷದ ವಿಜೇತೆ ರೇಯಾ ವಿನೋದ್ ಅವರು ನವೆಂಬರ್ 15ರಂದು ತಮ್ಮ ಕುಟುಂಬದೊಂದಿಗೆ ತಾವು ರಚಿಸಿದ ಕಲಾಕೃತಿಯನ್ನು ಒಳಗೊಂಡ ಕಲಾ ಸ್ಥಾಪನೆಗೆ ಭೇಟಿ ನೀಡಿದರು. ಕಾಗದದ ಮೇಲೆ ಮೂಡಿದ್ದ ತಮ್ಮ ಕಲ್ಪನೆ ಸಾರ್ವಜನಿಕ ಸ್ಥಳದಲ್ಲಿ ಕಲಾಕೃತಿಯಾಗಿ ರೂಪುಗೊಂಡಿರುವುದನ್ನು ಕಂಡು ಪುಟ್ಟ ಕಲಾವಿದೆ ಸಂತಸ ವ್ಯಕ್ತಪಡಿಸಿದರು. ಕುಟುಂಬದ ಸದಸ್ಯರೊಂದಿಗೆ ತಮ್ಮ ಕಲಾಕೃತಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಅವರಿಗೆ ಸ್ಮರಣೀಯ ಕ್ಷಣವಾಯಿತು.
ಈ ಕುರಿತು ಮಾತನಾಡಿದ ಸತ್ವ ಗ್ರೂಪ್ನ ಕಾರ್ಯತಂತ್ರ ವಿಭಾಗದ ಉಪಾಧ್ಯಕ್ಷ ಶಿವಂ ಅಗರ್ವಾಲ್, “ನಾವು ನಿರ್ಮಿಸುವ ಸ್ಥಳಗಳು ಅಲ್ಲಿ ವಾಸಿಸುವ ಜನರ ಬದುಕು ಮತ್ತು ಭಾವನೆಗಳೊಂದಿಗೆ ಬೆಸೆದುಕೊಂಡಿರಬೇಕು ಎಂಬುದು ನಮ್ಮ ನಂಬಿಕೆ. ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ‘ಸತ್ವ ಸಿಟಿ: ವರ್ಲ್ಡ್ ಆಫ್ ವಂಡರ್ಸ್’ ಅಭಿಯಾನದ ಮೂಲಕ ಮಕ್ಕಳ ಕಲ್ಪನೆ ಮತ್ತು ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ಅವರ ಕಲಾಕೃತಿಗಳು ನೈಜ ರೂಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೂಡಿಬರುವ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ. ಸಾಂಪ್ರದಾಯಿಕ ಯೋಜನಾ ಪ್ರಚಾರದ ಪರಿಕಲ್ಪನೆಯನ್ನು ಮೀರಿ ಕುಟುಂಬಗಳನ್ನು ಒಂದೆಡೆ ಸೇರಿಸಿ, ಮಕ್ಕಳ ಪ್ರತಿಭೆಯನ್ನು ಸಂಭ್ರಮಿಸುವುದು ಸಂತಸದ ಸಂಗತಿ. ಈ ಪ್ರಯತ್ನವು ಮಕ್ಕಳಲ್ಲಿ ಹೊಸ ಕನಸುಗಳನ್ನು ಕಾಣುವ ಉತ್ಸಾಹ ಮೂಡಿಸುವುದರೊಂದಿಗೆ ಸತ್ವ ಸಿಟಿಯ ಸುತ್ತಮುತ್ತಲಿನ ಸಮುದಾಯದ ಬಾಂಧವ್ಯವನ್ನು ಬಲಪಡಿಸಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
‘ವರ್ಲ್ಡ್ ಆಫ್ ವಂಡರ್ಸ್’ ಅಭಿಯಾನದ ಮೂಲಕ ಸತ್ವ ಗ್ರೂಪ್ ಮಕ್ಕಳ ಸೃಜನಶೀಲತೆಯನ್ನು ಗುರುತಿಸುವುದರ ಜೊತೆಗೆ ಕುಟುಂಬಗಳು ಮತ್ತು ಬೆಂಗಳೂರಿನ ವಿಶಾಲ ಸಮುದಾಯದೊಂದಿಗೆ ಅರ್ಥಪೂರ್ಣ ಸಂಬಂಧ ಬೆಳೆಸಲು ಪ್ರಯತ್ನಿಸಿದೆ. ಮಕ್ಕಳ ಕಲಾಕೃತಿಗಳಿಗೆ ನಗರದ ಸೌಂದರ್ಯದಲ್ಲಿ ಸ್ಥಾನ ಕಲ್ಪಿಸುವ ಈ ವಿನೂತನ ಪ್ರಯತ್ನವು ಕಲ್ಪನಾಶಕ್ತಿ, ಕುಟುಂಬದ ಒಗ್ಗಟ್ಟು ಮತ್ತು ಸಮುದಾಯದ ಸಹಭಾಗಿತ್ವವನ್ನು ಒಟ್ಟುಗೂಡಿಸಿದೆ.
ಮಕ್ಕಳ ಸಣ್ಣ ಸಣ್ಣ ಕಲ್ಪನೆಗಳು ದೊಡ್ಡ ಬದಲಾವಣೆಗೆ ಪ್ರೇರಣೆಯಾಗಬಲ್ಲವು ಎಂಬ ಸಂದೇಶವನ್ನು ಸಾರಿರುವ ‘ವರ್ಲ್ಡ್ ಆಫ್ ವಂಡರ್ಸ್’ ಅಭಿಯಾನವು ಮಕ್ಕಳ ಕನಸು ಮತ್ತು ಸೃಜನಶೀಲತೆಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಯತ್ನವಾಗಿ ಗಮನ ಸೆಳೆದಿದೆ.
