ಕೊರಟಗೆರೆ: ತಾಲ್ಲೂಕಿನ ಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ (ರಿ) ಮಹಿಳಾ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮೀಜಿಗಳು ವಹಿಸಿದ್ದರು. ಜ್ಯೋತಿ ಬೆಳಗಿಸುವ ಮೂಲಕ ಮಹಿಳಾ ಘಟಕವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ವೀರಶೈವ ಲಿಂಗಾಯತ ಧರ್ಮದ ಮೂಲ ಆಶಯವಾದ ಮಾನವ ಧರ್ಮದ ಸಂದೇಶವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲ ವರ್ಗ, ಜಾತಿ ಹಾಗೂ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ವೀರಶೈವ ಧರ್ಮದ ಸಂಸ್ಕಾರ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಧರ್ಮದ ಜ್ಯೋತಿ ಬೆಳಗಿಸುವ ಮೂಲಕ ಅಜ್ಞಾನ ಮತ್ತು ಅಸತ್ಯವನ್ನು ದೂರ ಮಾಡಿ ಜ್ಞಾನ ಹಾಗೂ ಮಾನವೀಯತೆಯ ಬೆಳಕನ್ನು ಹರಡಬೇಕು ಎಂದು ತಿಳಿಸಿದರು.

ನೂತನ ಮಹಿಳಾ ಘಟಕದ ಅಧ್ಯಕ್ಷೆ ಕಾತ್ಯಾಯಿನಿ ಮಾತನಾಡಿ, ವೀರಶೈವ ಧರ್ಮವು ಸಕಲ ಜೀವಿಗಳ ಒಳಿತನ್ನು ಬಯಸುವ ಧರ್ಮವಾಗಿದೆ. ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಜನರಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯಕ್ಕೆ ಮಹಿಳಾ ಘಟಕ ಆದ್ಯತೆ ನೀಡಲಿದೆ. ಸೌಹಾರ್ದತೆ ಮತ್ತು ಸಹಬಾಳ್ವೆಗೆ ಒತ್ತು ನೀಡಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಮಹಿಳಾ ಸಂಘಟನೆಯನ್ನು ಬಲಪಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ವಿ. ಪಾಳ್ಯ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷರಾದ ಕೊಡ್ಲಹಳ್ಳಿ ಶಿವಶಂಕರ್, ವಡ್ಡಗೆರೆ ಲಿಂಗರಾಜು, ಖಜಾಂಚಿ ಚನ್ನಂನಜಯ, ಪ್ರಚಾರ ಸಮಿತಿಯ ಮೆಡಿಕಲ್ ಕುಮಾರ್, ಕಾರ್ಯದರ್ಶಿಗಳಾದ ಬಸವರಾಜು, ಮಣವಿನ ಕುರಿಕೆ ಶಿವಕುಮಾರ್, ಭಾನು ಸೇರಿದಂತೆ ಟ್ರಸ್ಟ್ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ನೂತನ ಮಹಿಳಾ ಘಟಕದ ಅಧ್ಯಕ್ಷೆ ಕಾತ್ಯಾಯಿನಿ, ಉಪಾಧ್ಯಕ್ಷರಾದ ತೋವಿನಕೆರೆ ಎ. ಗೀತಾ, ರೂಪ ಹಾಗೂ ಮಹಿಳಾ ಘಟಕದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ನರಸಿಂಹಯ್ಯ, ಹೊಸಕೋಟೆ
