ಕೆ.ಆರ್.ಪೇಟೆ: ಕೋಳಿ ಸಾಕಾಣಿಕೆ ರೈತರ ಸಹನೆ ಕಟ್ಟೆ ಒಡೆದಿದೆ. ಸರ್ಕಾರ ನಿಗದಿಪಡಿಸಿರುವ 10 ರೂಪಾಯಿ ನೀಡುವಂತೆ ಪಟ್ಟು ಹಿಡಿದಿರುವ ರೈತರು, ಇದೀಗ ನವೆಂಬರ್ 25ರಂದು ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಕೆ.ಆರ್.ಪೇಟೆ ತಾಲ್ಲೂಕು ಕೋಳಿ ಸಾಕಾಣಿಕೆ ರೈತರು ಕೆ ಆರ್ ಪೇಟೆ ತಾಲ್ಲೂಕಿನ ಕೈಗೊನಹಳ್ಳಿಗೆಟ್ ಬಳಿ ಪತ್ರಿಕೆ ಗೋಷ್ಠಿ ನಡೆಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲೂ ಮಾತನಾಡಿದ ಕೊತ್ತಮಾರನಹಳ್ಳಿ ಹರೀಶ್ ಸರ್ಕಾರ ಕೋಳಿ ಸಾಕಾಣಿಕೆ ರೈತರಿಗೆ 10 ರೂಪಾಯಿ ನೀಡಬೇಕು ಎಂದು ಆದೇಶಿಸಿದೆ ಆದರೆ ಕೋಳಿ ಕಂಪನಿಗಳು ಈ ಆದೇಶವನ್ನು ಪಾಲಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ ಸರ್ಕಾರದ ಆದೇಶವನ್ನೇ ಕಂಪನಿಗಳು ಗಾಳಿಗೆ ತೂರಿದ್ದಾರೆ. ನಾವು ಕೋಳಿ ಸಾಕಿ ಬೆಳೆಸಿ ಕೊಟ್ಟರೂ, ನಮಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ.ಕೋಳಿ ಸಾಕಾಣಿಕೆ ಮಾಡುವ ರೈತರು ಕಂಪನಿಗಳ ಮೇಲೆ ಅವಲಂಬಿತರಾಗಿದ್ದಾರೆ ಕಂಪನಿಗಳು ನೀಡುವ ಮರಿಗಳನ್ನು ಸಾಕಿ, ದೊಡ್ಡದಾದ ಮೇಲೆ ಮತ್ತೆ ಕಂಪನಿಗಳಿಗೇ ನೀಡಬೇಕಾಗುತ್ತದೆ. ಇದಕ್ಕೆ ಕಂಪನಿಗಳು ನೀಡುವ ಹಣವೇ ರೈತರ ಜೀವನಾಧಾರ. ಆದರೆ ಈಗ ಆ ಹಣದಲ್ಲೂ ಮೋಸವಾಗುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಬಳಿಕ ಮಾತನಾಡಿದ ಯುವ ರೈತ ಜಾಗಿನಕೆರೆ ಆದರ್ಶ ಒಂದೆಡೆ ಫೀಡ್ ಬೆಲೆ ಗಗನಕ್ಕೇರಿದೆ ಕೋಳಿಗಳಿಗೆ ಹಾಕುವ ಆಹಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ವಿದ್ಯುತ್, ಔಷಧಿ, ಕಾರ್ಮಿಕರ ಖರ್ಚು ಕೂಡ ಹೆಚ್ಚಾಗಿದೆ. ಆದರೆ ಮತ್ತೊಂದೆಡೆ ಕೋಳಿ ಮತ್ತು ಮೊಟ್ಟೆ ಬೆಲೆ ಕುಸಿತ ಕಂಡಿದೆ. ಇದರಿಂದ ಸಾಕಾಣಿಕೆ ಮಾಡಿದಷ್ಟು ನಷ್ಟ ಅನುಭವಿಸುತ್ತಿದ್ದೇವೆ.ಹಲವರು ಬ್ಯಾಂಕ್ ನಿಂದ, ಖಾಸಗಿ ವ್ಯಕ್ತಿಗಳಿಂದ ಸಾಲ ಮಾಡಿ ಕೋಳಿ ಫಾರಂ ಆರಂಭಿಸಿದ್ದರು. ಈಗ ಸಾಲದ ಕಂತು ಕಟ್ಟಲು ಸಾಧ್ಯವಾಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬಡ್ಡಿ ಏರುತ್ತಿದೆ, ಮನೆಯಲ್ಲಿ ನೆಮ್ಮದಿ ಇಲ್ಲ. ಕೋಳಿ ಫಾರಂ ನಡೆಸಲು ಆಗದೆ, ಬಿಡಲು ಆಗದೆ ಸಂಕಷ್ಟದಲ್ಲಿದ್ದೇವೆ ಎಂದ ಅವರು ಇದೇ ಕಾರಣಕ್ಕೆ ರಾಜ್ಯಾದ್ಯಂತ ಕೋಳಿ ಸಾಕಾಣಿಕೆ ರೈತರು ಒಟ್ಟಾಗಿ ನವೆಂಬರ್ 25ರಂದು ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕಿನಿಂದ ನೂರಾರು ರೈತರು ಬೆಂಗಳೂರಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿ.ಸರ್ಕಾರ ನಿಗದಿಪಡಿಸಿದ 10 ರೂಪಾಯಿ ಕೊಡುವವರೆಗೂ ಹೋರಾಟ ನಿಲ್ಲಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ರೈತರ ಬೆವರಿಗೆ ಬೆಲೆ ಸಿಗಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೈಗೊನಹಳ್ಳಿ ಜಯರಾಮ್,ಜಾಗಿನಕೆರೆ ಅಂಬರೀಷ್,ಅಶೋಕ್,ಆದರ್ಶ, ಸಾರಂಗಿ ಮನು ಕುಮಾರ್, ಸಾರಂಗಿ ರಮೇಶ್, ಗೊರವಿ ಕುಮಾರ್,ಕುಂದನಹಳ್ಳಿ ಜಗದೀಶ್,ಕೊತ್ತಮಾರನಹಳ್ಳಿ ಹರೀಶ್, ಲಕ್ಷ್ಮಿಪುರ ಕೃಷ್ಣೆಗೌಡ, ಪಾಂಡುರಂಗ, ರಂಗನಾಥಪುರ ಆಕಾಶ್, ವೆಂಕಟೇಶ್, ಯಲಾದಹಳ್ಳಿ ರಮೇಶ್,ಬಸವರಾಜು, ಕೈಗೊನಹಳ್ಳಿ ನವೀನ,ಸೇರಿದಂತೆ ಉಪಸ್ಥಿತರಿದ್ದರು.
*ಮನು ಮಾಕವಳ್ಳಿ ಕೆ.ಆರ್.ಪೇಟೆ*
