ಶ್ಲೋಕ – 36, 37
ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ ।
ಅಭ್ಯಾಸಾದ್ ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥೩೬॥
ಯತ್ ತದಗ್ರೇ ವಿಷಮಿವ ಪರಿಣಾಮೇSಮೃತೋಪಮಮ್ ।
ತತ್ ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ॥೩೭॥
ಸುಖಮ್ ತು ಇದಾನೀಮ್ ತ್ರಿವಿಧಮ್ ಶೃಣು ಮೇ ಭರತರ್ಷಭ ।
ಅಭ್ಯಾಸಾತ್ ರಮತೇ ಯತ್ರ ದುಃಖಾಂತಮ್ ಚ ನಿಗಚ್ಛತಿ ||
ಯತ್ ತತ್ ಅಗ್ರೇ ವಿಷಮ್ ಇವ ಪರಿಣಾಮೇ ಅಮೃತ ಉಪಮಮ್ ।
ತತ್ ಸುಖಮ್ ಸಾತ್ವಿಕಮ್ ಪ್ರೋಕ್ತಮ್ ಆತ್ಮ ಬುದ್ಧಿ ಪ್ರಸಾದಜಮ್ –– ಭರತರ್ಷಭ, ಈಗ ಮೂರುತೆರನಾದ ಸುಖವನ್ನು ನನ್ನಿಂದಾಲಿಸು: ಬಳಕೆಯಿಂದ ಖುಷಿಕೊಡುವಂಥದು, ದುಃಖವನ್ನು ನೀಗಿಸುವಂಥದು, ಮೊದಲು ವಿಷದಂತೆ ಅಪ್ರೀಯವಾಗಿ ಕೊನೆಗೆ ಅಮೃತದಂತೆ ಹಿತ ನೀಡುವಂಥದು –ಇಂಥ ಸುಖ-ಸಾತ್ವಿಕ. ಇದು ತನ್ನ ಬಗೆ ತಿಳಿಯಾದಾಗ, ಭಗವಂತನ ಕರುಣೆಯಿಂದ ಬರುವಂಥದು.
ಮನುಷ್ಯ ಒಟ್ಟಾಗಿ ಜೀವನದಲ್ಲಿ ಬಯಸುವುದು ಸುಖವನ್ನು. ಆತನ ಜೀವನದ ಕೊನೆಯ ಗುರಿ ಸುಖ. ಆದರೆ ಯಾವುದು ನಿಜವಾದ ಸುಖ? ಸುಖದಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. “ತ್ರೈವಿದ್ಯೆಯ ವಿವರಣೆಯ ಕೊನೆಯಲ್ಲಿ ಸುಖದ ಮೂರು ವಿಧದ ವಿವರಣೆಯನ್ನು ಕೇಳು” ಎನ್ನುತ್ತಾನೆ ಕೃಷ್ಣ. ಇಲ್ಲಿ ಬಳಸಿರುವ ‘ಭರತರ್ಷಭ’ ಎನ್ನುವ ವಿಶೇಷಣದ ಹಿಂದೆ ವ್ಯಾಸರು ನಮಗೆ ಅನೇಕ ಸಂದೇಶವನ್ನು ಕೊಟ್ಟಿರುವುದನ್ನು ನಾವು ಗಮನಿಸಬೇಕು. ಭಗವಂತನ ಭಕ್ತಿಯಲ್ಲಿ-ರತ(ಶ್ರೇಷ್ಠ)ರಾದಾಗ; ಭರತನಂತೆ ಲೌಕಿಕ ಸುಖದ ಆಸೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಶ್ರೀರಾಮಚಂದ್ರನನ್ನು ಪ್ರೀತಿಸಿದಾಗ; ಭಗವಂತನ ಭಕ್ತಿಯಲ್ಲಿ ನಿರತರಾದವರಲ್ಲಿ ಶ್ರೇಷ್ಠರಾದ ವಾಯು(ಹನುಮಂತ)ದೇವರಲ್ಲಿ ಗುರುಭಕ್ತಿಯನ್ನಿಟ್ಟು, ಭಗವದರ್ಪಣಾಭಾವದಿಂದ ನಮ್ಮ ಕರ್ಮ ನಿರ್ವಹಿಸಿದಾಗ- ನಾವು ಭರತರ್ಷಭರಾಗಬಹುದು. ಭರತರ್ಷಭನಾದವನಿಗೆ ನಿಜವಾದ ಸುಖ ಎಂದರೇನು ಎಂದು ತಿಳಿದು ಅದನ್ನು ಅನುಭವಿಸಲು ಸಾಧ್ಯ.
ಯಾವುದೇ ಒಂದು ವಿಷಯ ಪ್ರಾರಂಭದಿಂದಲೇ ಸುಖವಾಗಿ ಕಾಣಿಸಿದರೆ ಅದು ಸಾತ್ವಿಕ ಸುಖವಲ್ಲ. ಕಷ್ಟಪಡದೆ ಅನಾಯಾಸವಾಗಿ ಪಡೆಯುವುದು ಮೋಹದ ಸುಖ. ಸಾತ್ವಿಕ ಸುಖ ಮೊದಲು ಕಷ್ಟ ರೂಪದಲ್ಲಿರುತ್ತದೆ. ಇದಕ್ಕೆ ಉತ್ತಮ ದೃಷ್ಟಾಂತ ಸಮುದ್ರಮಥನ. ಅಲ್ಲಿ ಮೊದಲು ಬಂದಿರುವುದು ಅಮೃತವಲ್ಲ ಬದಲಿಗೆ ವಿಷ. ನಿಜವಾದ ಅಮೃತ ಸಿಕ್ಕಿರುವುದು ಕೊನೆಯಲ್ಲಿ. ಕೈಕೆಸರಾದರೆ ಬಾಯಿ ಮೊಸರು-ಕಷ್ಟಪಟ್ಟರೆ ಸುಖ. ನಾವು ಕುಡಿಯುವ ಔಷಧ ವಿಷದಂತೆ ಕಹಿ, ಆದರೆ ಅದರಿಂದ ಬರುವ ಆರೋಗ್ಯ ಅಮೃತದಂತೆ ಸಿಹಿ.
ಕೃಷ್ಣ ಇಲ್ಲಿ “ಆತ್ಮ ಬುದ್ಧಿ ಪ್ರಸಾದಜಮ್” ಎನ್ನುವ ಒಂದು ಅಪೂರ್ವ ವಿಶೇಷಣವನ್ನು ಬಳಸಿದ್ದಾನೆ. ಆತ್ಮಪ್ರಸಾದ ಅಂದರೆ ದೇವರ ಅನುಗ್ರಹ. ಸಾತ್ವಿಕ ಸುಖ ನಾವು ಬೇಕು ಎಂದು ಬಯಸಿದಾಗ ಸಿಗುವುದಿಲ್ಲ. ಅದು ಭಗವಂತನ ಅನುಗ್ರಹದಿಂದ ಸಿಗುವಂಥದ್ದು. ಅದನ್ನು ಪಡೆಯಲು ನಮಗೆ ಪಾರದರ್ಶಕವಾದ ಶುದ್ಧ ಮನಸ್ಸಿರಬೇಕು. ಅದು ಹೊರಗಿನಿಂದ ಬರುವುದಲ್ಲ ಬದಲಿಗೆ ಒಳಗಿನಿಂದ ಚಿಮ್ಮುವುದು. ಹೀಗೆ ಭಗವಂತನ ಅನುಗ್ರಹ ಮತ್ತು ಮನಸ್ಸಿನ ಪ್ರಸನ್ನತೆಯಿದ್ದಾಗ ಒಳಗಿನ ಸ್ವರೂಪಾನಂದದ ಸುಖವನ್ನು ಅನುಭವಿಸಲು ಸಾಧ್ಯ.
