ಶ್ಲೋಕ – 38
ವಿಷಯೇಂದ್ರಿಯ ಸಂಯೋಗಾದ್ ಯತ್ ತದಗ್ರೇSಮೃತೋಪಮಮ್ ।
ಪರಿಣಾಮೇ ವಿಷಮಿವ ತತ್ ಸುಖಂ ರಾಜಸಂ ಸ್ಮೃತಮ್ ॥೩೮॥
ವಿಷಯ ಇಂದ್ರಿಯ ಸಂಯೋಗಾತ್ ಯತ್ ತತ್ ಅಗ್ರೇ ಅಮೃತ ಉಪಮಮ್ ।
ಪರಿಣಾಮೇ ವಿಷಮ್ ಇವ ತತ್ ಸುಖಮ್ ರಾಜಸಮ್ ಸ್ಮೃತಮ್ — ವಿಷಯ ಮತ್ತು ಇಂದ್ರಿಯಗಳ ನಂಟಿನಿಂದ ಉಂಟಾಗುವಂಥದು, ಮೊದಲು ಅಮೃತದಂತೆ ರೋಚಕ, ಕಡೆಗೆ ವಿಷದಂತೆ ಅಪಾಯಕಾರಿ –ಅಂಥ ಸುಖ ರಾಜಸ ಎನಿಸುತ್ತದೆ.
ಯಾವುದು ಮೊದಲು ಅನುಭವಿಸುವಾಗ ಬಹಳ ಸುಖವನ್ನು ಕೊಟ್ಟು ಆ ನಂತರ ಪರಿಣಾಮ ದುಃಖಕರವಾಗಿರುತ್ತದೆ ಅದು ರಾಜಸ ಸುಖ. ಇದು ಬಾಹ್ಯಸುಖ. ಇದು ಹೊರಗಿನ ವಿಷಯಗಳಿಗೂ ನಮ್ಮ ಇಂದ್ರಿಯಗಳಿಗೂ ಸಂಪರ್ಕದಿಂದ ತತ್ಕಾಲಕ್ಕೆ ಸಿಗುವ ಸುಖ. ಇಂದು ನಾವು ಕಾಣುವ ಹೆಚ್ಚಿನ ಅಪರಾಧ ಸುದ್ಧಿಗಳು ಈ ರೀತಿಯ ಕ್ಷಣಿಕ ಸುಖದ ಹಿಂದೆ ಹೋಗಿ ಆಗುವ ಪರಿಣಾಮ. ವಿಷಯ ಸುಖವನ್ನು ಅನುಭವಿಸುವುದು ತಪ್ಪಲ್ಲ, ಆದರೆ ಅನುಭವಿಸಿ ಅದನ್ನು ಮೀರಿನಿಲ್ಲುವುದು ಬಹಳ ಮುಖ್ಯ. ಹಿಂದಿನವರು ಮುಖ್ಯವಾಗಿ ಎರಡನ್ನು ಗೆಲ್ಲು ಎಂದಿದ್ದಾರೆ. ಒಂದು-ಆಹಾರದ ಚಟ ಇನ್ನೊಂದು ಲೈಂಗಿಕ ಚಪಲ. ಒಟ್ಟಿನಲ್ಲಿ ಕ್ಷಣಿಕವಾದ ಇಂದ್ರಿಯ ಸುಖವನ್ನು ಗೆಲ್ಲುವುದು ಬಹಳ ಮುಖ್ಯ.
