ಕೊರಟಗೆರೆ:- ಸ್ಥಳೀಯ ಸಂಸ್ಥೆಗಳ ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣಿಸಲಾಗುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆ ಕೊರಟಗೆರೆ ತಾಲ್ಲೂಕಿನಲ್ಲಿ ಗರಿಗೆದರತೊಡಗಿದೆ. ಚುನಾವಣೆ ಯಾವಾಗ ನಡೆಯಲಿದೆ ಎಂಬ ಅಧಿಕೃತ ವೇಳಾಪಟ್ಟಿಯ ನಿರೀಕ್ಷೆಯ ನಡುವೆಯೇ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಕ್ಷೇತ್ರವಾರು ಲೆಕ್ಕಾಚಾರ ಆರಂಭಿಸಿದ್ದಾರೆ. ಅದರಲ್ಲೂ ಜಿಲ್ಲೆಯ ರಾಜಕೀಯ ವಲಯದಲ್ಲಿ ವಿಶೇಷ ಕುತೂಹಲ ಮೂಡಿಸಿರುವ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆಗಳು ಬಿರುಸುಗೊಂಡಿದ್ದು, ಚಳಿಗಾಲದಲ್ಲೂ ಟಿಕೆಟ್ ಆಕಾಂಕ್ಷಿಗಳು ಬೆವರು ಹರಿಸುವಂತಹ ರಾಜಕೀಯ ವಾತಾವರಣ ನಿರ್ಮಾಣವಾಗಿದೆ.
ಸಾಮಾನ್ಯ ಕ್ಷೇತ್ರವಾಗಿ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಹಲವು ಮುಖಂಡರು ಸ್ಪರ್ಧೆಗೆ ಆಸಕ್ತಿ ತೋರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ಗಾಗಿ ದೊಡ್ಡ ಮಟ್ಟದ ಪೈಪೋಟಿ ಕಂಡುಬರುತ್ತಿದ್ದರೆ, ಜೆಡಿಎಸ್ಗೆ ಇತ್ತೀಚೆಗೆ ಸೇರ್ಪಡೆಯಾದ ಪ್ರಮುಖ ಮುಖಂಡರಿಂದ ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಹೊಸ ಆಯಾಮ ದೊರೆತಿದೆ. ಇತ್ತ ಬಿಜೆಪಿ ಕೂಡ ತನ್ನ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಪ್ರಯತ್ನದಲ್ಲಿದೆ. ಹೀಗಾಗಿ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.
ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿ ಟಿಕೆಟ್ಗಾಗಿ ಕಾಂಗ್ರೆಸ್ ಕಸರತ್ತು!

ರಾಜ್ಯದ ರಾಜಕೀಯದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಉಪಮುಖ್ಯಮಂತ್ರಿ, ಕಂದಾಯ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ವ್ಯಾಪ್ತಿಯ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಈ ಬಾರಿ ವಿಶೇಷ ರಾಜಕೀಯ ಮಹತ್ವ ಬಂದಿದೆ. ರಾಜ್ಯ ಕಾಂಗ್ರೆಸ್ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಡಾ.ಜಿ.ಪರಮೇಶ್ವರ್ ಅವರ ಕ್ಷೇತ್ರದಲ್ಲಿ ನಡೆಯುವ ಜಿಲ್ಲಾ ಪಂಚಾಯಿತಿ ಚುನಾವಣೆ ಸಹಜವಾಗಿಯೇ ರಾಜಕೀಯ ವಲಯದ ಗಮನ ಸೆಳೆಯುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯಾಗಲು ಹಲವು ಮುಖಂಡರು ಉತ್ಸುಕರಾಗಿದ್ದು, ತಮ್ಮ ರಾಜಕೀಯ ಪ್ರಭಾವ, ಪಕ್ಷ ಸಂಘಟನೆಗೆ ನೀಡಿರುವ ಕೊಡುಗೆ ಹಾಗೂ ಸ್ಥಳೀಯ ಕಾರ್ಯಕರ್ತರ ಸಂಪರ್ಕವನ್ನು ಮುಂದಿಟ್ಟುಕೊಂಡು ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಒಂದು ಬಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಪ್ರೇಮಾ ಮಾಹಲಿಂಗಪ್ಪ ಅವರ ಪತಿ ಮಹಾಲಿಂಗಯ್ಯ ಅವರು ಕಾಂಗ್ರೆಸ್ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ ಆಡಳಿತದ ಅನುಭವ ಹಾಗೂ ಕ್ಷೇತ್ರದ ರಾಜಕೀಯ ಪರಿಚಯವನ್ನು ಮುಂದಿಟ್ಟುಕೊಂಡು ಚುನಾವಣಾ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅಶ್ವತ್ಥನಾರಾಯಣ್ ಅವರೂ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತಮ್ಮದೇ ಆದ ಪಾತ್ರ ವಹಿಸಿರುವ ಅವರು, ಈ ಬಾರಿ ಪಕ್ಷದ ಅವಕಾಶ ತಮ್ಮ ಪಾಲಾಗಬಹುದು ಎಂಬ ನಿರೀಕ್ಷೆಯೊಂದಿಗೆ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.
ಇನ್ನು ಹೊಳವನಹಳ್ಳಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ದ್ರಾಕ್ಷಾಯಿಣಿ ರಾಜಣ್ಣ ಅವರ ಪತಿ ರಾಜಣ್ಣ (ಎಲ್ಐಸಿ) ಅವರೂ ಮತ್ತೊಮ್ಮೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಇದೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಆನಂದ್ (ರಾಯಲ್ ಫ್ಲವರ್ ಮರ್ಚೆಂಟ್) ಅವರ ಹೆಸರೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಸ್ಥಳೀಯ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಅವರು, ಹಲವು ಮುಖಂಡರ ಮೂಲಕ ಸಚಿವ ಡಾ.ಜಿ.ಪರಮೇಶ್ವರ್ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ, ಜೊತೆಗೆ ಪಣ್ಣೇನಹಳ್ಳಿ ಗಂಗರಾಜು ಅವರೂ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿರುವುದಾಗಿ ಪ್ರತಿಪಾದಿಸುತ್ತಿದ್ದಾರೆ. ಹೀಗೆ ಕಾಂಗ್ರೆಸ್ನಲ್ಲಿಯೇ ಹಲವು ಮುಖಂಡರು ಟಿಕೆಟ್ ನಿರೀಕ್ಷೆಯಲ್ಲಿರುವುದರಿಂದ ಅಂತಿಮವಾಗಿ ಪಕ್ಷ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ನಿಂದ ಜೆಡಿಎಸ್ಗೆ ಇಬ್ಬರು ಮುಖಂಡರ ವಲಸೆ; ರಾಜಕೀಯ ಲೆಕ್ಕಾಚಾರದಲ್ಲಿ ಬದಲಾವಣೆ!

ಹೊಳವನಹಳ್ಳಿ ಕ್ಷೇತ್ರದ ರಾಜಕೀಯ ಚರ್ಚೆಗೆ ಮತ್ತಷ್ಟು ಮಹತ್ವ ತಂದಿರುವ ಬೆಳವಣಿಗೆಯೆಂದರೆ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದ ಮುಖಂಡ ಎಂ.ಎನ್.ಜೆ. ಮಂಜುನಾಥ್ ಅವರು ಜೆಡಿಎಸ್ ಸೇರ್ಪಡೆಯಾಗಿರುವುದು. ಸಚಿವ ಡಾ.ಜಿ.ಪರಮೇಶ್ವರ್ ಅವರ ಚುನಾವಣೆಯಲ್ಲಿ ನಿಷ್ಠೆಯಿಂದ ದುಡಿದಿದ್ದ ಮಂಜುನಾಥ್ ಅವರು ಇದೀಗ ಚುನಾವಣಾ ರಾಜಕೀಯದ ದೃಷ್ಟಿಯಿಂದ ಜೆಡಿಎಸ್ ಸೇರ್ಪಡೆಯಾಗಿರುವುದು ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮಂಜುನಾಥ್ ಅವರ ಪಕ್ಷಾಂತರದಿಂದ ಜೆಡಿಎಸ್ಗೆ ಸ್ಥಳೀಯ ಮಟ್ಟದಲ್ಲಿ ಹೊಸ ರಾಜಕೀಯ ಸಂಪರ್ಕ ಹಾಗೂ ಕಾರ್ಯಕರ್ತರ ಬೆಂಬಲ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಈ ಬೆಳವಣಿಗೆಯು ಹೊಳವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ರಾಜಕೀಯ ಸಮೀಕರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಚರ್ಚೆ ಆರಂಭವಾಗಿದೆ.
ಎಂ ಎನ್ ಜೆ ಮಂಜುನಾಥ್ ರಾಜಕೀಯ ಪ್ರವೇಶಕ್ಕೆ ಮುನ್ನವೇ ಕೊರಟಗೆರೆ ಪಟ್ಟಣದಲ್ಲಿ ರಂಗೋಲೆ ಸ್ಪರ್ಧೆ ದೊಡ್ಡ ಮಟ್ಟದಲ್ಲಿ ಆ ಯೋಜನೆ ಮಾಡಿ ದೊಡ್ಡಮಟ್ಟದ ಸುದ್ದಿ ಮಾಡಿದ್ರು, ಯಾವುದೇ ಕಾರ್ಯಕ್ರಮವಾಗಲಿ ಅತಿ ವೈಭವದಿಂದ ಜನಮನದಲ್ಲಿ ಸೇರಬಹುದು ಎಂಬುದನ್ನು ಮಂಜುನಾಥ್ ಕೊರಟಗೆರೆ ಜನತೆಗೆ ಸಾರಿ ಸಾರಿ ಹೇಳುವುದಲ್ಲದೆ ಜನ ಮುನ್ನಣೆಗೆ ಪತ್ರರಾದರು, ಇದಾದ ನಂತರ ಕೋವಿಡ್ ಸಂದರ್ಭದಲ್ಲಿ ಸತತವಾಗಿ ಆಸ್ಪತ್ರೆ ರೋಗಿಗಳು ಸೇರಿದಂತೆ ನೂರಾರು ಜನ ನಿರ್ಘತಕರಿಗೆ ಪ್ರತಿದಿನ ದಾಸೋಹದ ವ್ಯವಸ್ಥೆ ನೀಡಿ ಜನ ಮನದಲ್ಲಿ ಮನೆ ಮಾಡಿದ್ದು ಇವರ ವರ್ಚಸ್ ಇನ್ನಷ್ಟು ಹೆಚ್ಚಿಸಲು ಕಾರಣವಾಗಿದೆ ಎನ್ನಬಹುದು, ಕೊರಟಗೆರೆ ಕ್ಷೇತ್ರದಲ್ಲಿ ಸಮಾಜ ಸೇವಕರಾಗಿ ಹಲವು ಸಮಾಜಮುಖಿ ಕಾರ್ಯದ ಜೊತೆಗೆ ದೊಡ್ಡ ಮಟ್ಟದ ಯುವ ಪಡೆಯನ್ನ ಸೃಷ್ಟಿಸಿ ಹಿರಿಯರ ಮಾರ್ಗದರ್ಶನದಲ್ಲಿ ಹಲವು ಅಭಿವೃದ್ಧಿಪರ ಕಾರ್ಯಗಳಲ್ಲಿ ತೊಡಗುತ್ತಿರುವುದು ಎಂ ಎನ್ ಜೆ ಅವರ ರಾಜಕೀಯ ವಲಯದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎನ್ನಬಹುದಾಗಿದೆ, ಇದನ್ನು ಹರಿತ ಜೆಡಿಎಸ್ ಮುಖಂಡರುಗಳು ಗೆಲುವಿನ ನಾಗಾ ಲೋಟದಲ್ಲಿರುವ ಎಂ ಎನ್ ಜೆ ಮಂಜುನಾಥ್ ಅವರನ್ನು ಕೆಲವು ಮುಖಂಡರುಗಳು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹೆಚ್ಚು ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಜೆಡಿಎಸ್ಗೆ ಮತ್ತೊಂದು ಪ್ರಮುಖ ರಾಜಕೀಯ ಸೇರ್ಪಡೆಯಾಗಿರುವುದು ಪಿ.ಎನ್. ಕೃಷ್ಣಮೂರ್ತಿ ಅವರ ಪ್ರವೇಶ.
ಆರ್.ಆರ್. ನಗರ, ದಾಸರಹಳ್ಳಿ ರಾಜಕೀಯ ಅನುಭವ; ಈಗ ಕೊರಟಗೆರೆಯಲ್ಲಿ ಕೃಷ್ಣಮೂರ್ತಿ ಸಕ್ರಿಯ!

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಗೂ ನಂತರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಕೆಪಿಸಿಸಿ ಸದಸ್ಯ ಮತ್ತು ಕೋಳಾಲ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಅವರು ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ಉದ್ದೇಶದಿಂದ ಅವರು ಜೆಡಿಎಸ್ ಸೇರಿದ್ದಾರೆ ಎಂಬ ಚರ್ಚೆ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಜೆಡಿಎಸ್ ವರಿಷ್ಠ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೃಷ್ಣಮೂರ್ತಿ ಅವರ ಮನೆಗೆ ಭೇಟಿ ನೀಡಿ, ಕೊರಟಗೆರೆ ಕ್ಷೇತ್ರದಲ್ಲಿ ಮಾಜಿ ಶಾಸಕ ಸುಧಾಕರ್ ಲಾಲ್ ಅವರೊಂದಿಗೆ ಸಮನ್ವಯ ಸಾಧಿಸಿ ಪಕ್ಷವನ್ನು ಬಲಪಡಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ಬಳಿಕ ಕೃಷ್ಣಮೂರ್ತಿ ಅವರು ಕೊರಟಗೆರೆ ಕ್ಷೇತ್ರದಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಕೊರಟಗೆರೆ ರಾಜಕೀಯದಲ್ಲಿ ತಮ್ಮದೇ ಆದ ಸಂಪರ್ಕ ಹೊಂದಿರುವ ಪಿ.ಎನ್. ಕೃಷ್ಣಮೂರ್ತಿ ಅವರೊಂದಿಗೆ ಎಂ.ಎನ್.ಜೆ. ಮಂಜುನಾಥ್ ಅವರು ಜೆಡಿಎಸ್ಗೆ ಸೇರ್ಪಡೆಯಾಗಿರುವುದು ಪಕ್ಷದ ಸ್ಥಳೀಯ ಸಂಘಟನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇಬ್ಬರೂ ಮುಖಂಡರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮುಂದಿನ ಚುನಾವಣಾ ರಾಜಕೀಯದಲ್ಲಿ ಯಾವ ರೀತಿಯ ಸಂಘಟನಾತ್ಮಕ ಪರಿಣಾಮ ಉಂಟಾಗಬಹುದು ಎಂಬ ಕುತೂಹಲ ಜೆಡಿಎಸ್ ಕಾರ್ಯಕರ್ತರಲ್ಲಿ ಮೂಡಿದೆ. ಈ ಇಬ್ಬರ ಜೋಡಿ ಪಕ್ಷದ ಸಂಘಟನೆಯಲ್ಲಿ ಯಾವ ರೀತಿಯ ಪಾತ್ರ ವಹಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಬಿಜೆಪಿಯಿಂದ ದರ್ಶನ್ ಅಖಾಡಕ್ಕೆ; ಸ್ವಾಮಿ ಕೂಡ ಟಿಕೆಟ್ ಆಕಾಂಕ್ಷಿ!

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವ ಬೆನ್ನಲ್ಲೇ ಬಿಜೆಪಿ ಕೂಡ ಹೊಳವನಹಳ್ಳಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ.
ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ , ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭದ ಯುವ ಘಟಕ ಜಿಲ್ಲಾಧ್ಯಕ್ಷ ದರ್ಶನ್ ಅವರು ಈ ಬಾರಿ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಮುಂಚೂಣಿಗೆ ಬಂದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಚುನಾವಣಾ ಸಿದ್ಧತೆ ನಡೆಸುತ್ತಿರುವ ಅವರು, ಗೆಲ್ಲುವ ವಿಶ್ವಾಸದೊಂದಿಗೆ ಟಿಕೆಟ್ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಕರಕಲಘಟ್ಟದ ಯುವ ಮುಖಂಡ ಸ್ವಾಮಿ ಅವರೂ ಬಿಜೆಪಿ ಟಿಕೆಟ್ಗಾಗಿ ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇವರು ಬಿಜೆಪಿ ಜಿಲ್ಲಾ ಹಾಗೂ ರಾಜ್ಯ ನಾಯಕರುಗಳನ್ನ ಟಿಕೆಟ್ ಗಾಗಿ ಭೇಟಿ ಮಾಡುತ್ತಿದ್ದಾರೆ ಏನಾಗಿದೆ.
ಇವೆಲ್ಲವುದರ ನಡುವೆ ಬಿಜೆಪಿಯಲ್ಲಿ ದರ್ಶನ್ ಗೆ ಗೆಲುವಿನ ಹಾದಿಯಲ್ಲಿ ಇರುವುದರಿಂದ ಪಕ್ಷ ಹೆಚ್ಚು ಒಲವು ತೋರಿಸಿದ್ದು, ಬಿಜೆಪಿಯಲ್ಲಿ ದರ್ಶನ್ ನನ್ನ ಅಭ್ಯರ್ಥಿಯಾಗಿ ಪ್ರತಿಬಿಂಬಿಸಲು ಬಹಳಷ್ಟು ಜನ ತೆರೆ ಮರೆ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ ಜೊತೆಗೆ ಬಿಜೆಪಿ ಮುಖಂಡ ಬಿಎಚ್ ಅನಿಲ್ ಕುಮಾರ್ ಸಹ ದರ್ಶನ್ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ; ಒಮ್ಮತದ ಅಭ್ಯರ್ಥಿ ಆಯ್ಕೆಗೆ ಚರ್ಚೆ!

ರಾಜ್ಯಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಇರುವ ಎನ್ಡಿಎ ಮೈತ್ರಿಯ ಹಿನ್ನೆಲೆಯಲ್ಲಿ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿಯೂ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ. ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪ್ರತ್ಯೇಕವಾಗಿ ಟಿಕೆಟ್ ಆಕಾಂಕ್ಷಿಗಳನ್ನು ಹೊಂದಿದ್ದರೂ, ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಅಂತಿಮವಾಗಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಅವರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಒಮ್ಮತದ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಯಾರೇ ಆಗಿದ್ದರೂ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಜೆಡಿಎಸ್ನಲ್ಲಿ ಪಿ.ಎನ್. ಕೃಷ್ಣಮೂರ್ತಿ ಮತ್ತು ಎಂ.ಎನ್.ಜೆ. ಮಂಜುನಾಥ್ ಅವರ ರಾಜಕೀಯ ಚಟುವಟಿಕೆಗಳು, ಬಿಜೆಪಿಯಲ್ಲಿ ದರ್ಶನ್ ಹಾಗೂ ಸ್ವಾಮಿ ಅವರ ಟಿಕೆಟ್ ಆಕಾಂಕ್ಷೆ, ಮೈತ್ರಿ ಪಕ್ಷಗಳ ನಡುವಿನ ಸಮನ್ವಯ ಎಲ್ಲವೂ ಹೊಳವನಹಳ್ಳಿ ಕ್ಷೇತ್ರದ ಚುನಾವಣಾ ಲೆಕ್ಕಾಚಾರದಲ್ಲಿ ಪ್ರಮುಖ ಅಂಶಗಳಾಗಿವೆ.
ಯಾರಿಗೆ ಒಲಿಯಲಿದೆ ಪಕ್ಷದ ಟಿಕೆಟ್? ಕ್ಷೇತ್ರದಾದ್ಯಂತ ಕುತೂಹಲ
ಒಟ್ಟಾರೆ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಈ ಬಾರಿ ರಾಜಕೀಯ ಚಟುವಟಿಕೆಗಳು ಹಲವು ಆಯಾಮಗಳನ್ನು ಪಡೆದುಕೊಂಡಿವೆ. ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಒಂದೆಡೆಯಾದರೆ, ಜೆಡಿಎಸ್ಗೆ ಪ್ರಮುಖ ಮುಖಂಡರ ಸೇರ್ಪಡೆ ಹಾಗೂ ಬಿಜೆಪಿಯ ಅಭ್ಯರ್ಥಿ ಆಕಾಂಕ್ಷಿಗಳ ಪ್ರವೇಶ ಮತ್ತೊಂದೆಡೆ ರಾಜಕೀಯ ಚರ್ಚೆಯನ್ನು ತೀವ್ರಗೊಳಿಸಿದೆ.
ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಸಂಘಟನಾ ಬಲವನ್ನು ಆಧರಿಸಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಮುಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮೂಲಕ ಅಭ್ಯರ್ಥಿ ಆಯ್ಕೆ ಹಾಗೂ ಸಂಘಟನಾ ಸಮನ್ವಯಕ್ಕೆ ಆದ್ಯತೆ ನೀಡುವ ಸಾಧ್ಯತೆಯಿದೆ.
ಮಹಾಲಿಂಗಯ್ಯ, ಅಶ್ವತ್ಥನಾರಾಯಣ್, ರಾಜಣ್ಣ (ಎಲ್ಐಸಿ), ಆನಂದ್ ( ಓಬಿಸಿ ಅಧ್ಯಕ್ಷ), ಪಣ್ಣೇನಹಳ್ಳಿ ಗಂಗರಾಜು ಸೇರಿದಂತೆ ಕಾಂಗ್ರೆಸ್ ಆಕಾಂಕ್ಷಿಗಳ ನಡುವೆ ಯಾರಿಗೆ ಅವಕಾಶ ಸಿಗಲಿದೆ? ಜೆಡಿಎಸ್ಗೆ ಸೇರ್ಪಡೆಯಾದ ಎಂ.ಎನ್.ಜೆ. ಮಂಜುನಾಥ್ ಹಾಗೂ ಪಿ.ಎನ್. ಕೃಷ್ಣಮೂರ್ತಿ ಅವರ ಮುಂದಿನ ರಾಜಕೀಯ ನಡೆ ಏನಾಗಲಿದೆ? ಬಿಜೆಪಿ ದರ್ಶನ್ ಸ್ಥಿತಿ ಗತಿ ಏನು? ಎನ್ಡಿಎ ಒಮ್ಮತದ ಅಭ್ಯರ್ಥಿ ಆಯ್ಕೆಯ ಸೂತ್ರ ಏನಾಗಲಿದೆ? ಎಂಬ ಪ್ರಶ್ನೆಗಳು ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಹೊಳವನಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಅಭ್ಯರ್ಥಿಗಳ ಆಯ್ಕೆ, ಪಕ್ಷಾಂತರ ಹಾಗೂ ಮೈತ್ರಿ ಲೆಕ್ಕಾಚಾರಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವ ಪಡೆದುಕೊಳ್ಳುವ ನಿರೀಕ್ಷೆಯಿದೆ.
ಚಳಿಗಾಲದ ಚಳಿಯ ನಡುವೆಯೂ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ರಾಜಕೀಯ ಅಖಾಡ ಮಾತ್ರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಮುನ್ನವೇ ಕ್ಷೇತ್ರದ ರಾಜಕೀಯ ಚಿತ್ರಣ ಕುತೂಹಲದ ಘಟ್ಟ ತಲುಪಿದೆ.
– ಶ್ರೀನಿವಾಸ್ ಕೊರಟಗೆರೆ.
