ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಉಸ್ಕೊ ಪಕಡೋ
ಅನ್ಯಾಯಗಳ ವಿರೋಧೀ ಹೋರಾಟಕ್ಕೆ ಅನ್ಯಾಯದ ಜನಕರುಗಳೇ ಮುಂದಾಗಿ ಬೆರ್ಚಪ್ಪಗಳಂತೆ ವೇಷಕುಣಿಯುವುದು ಅಸಹನೀಯವಾಗಿದೆ. ವೃತ್ತಿಧರ್ಮಕ್ಕೆ ದ್ರೋಹ ಮಾಡಿರುವ ವೃತ್ತಿಪರರು, ಮಾಡುತ್ತಿರುವ ಅನ್ಯಾಯಕ್ಕೆ ಸಮರ್ಥನೆ ನೀಡುತ್ತಿರುವ ಗುತ್ತಿಗೆದಾರರು, ಮೋಸಗಾರರನ್ನೇ ಬಂಧುಬಳಗವೆಂದುಕೊಂಡಿರುವ ಪುಡಿಪುಡಾರಿಗಳು, ಕೂಲಿ ಕಾರ್ಮಿಕರನ್ನು ಶೋಷಿಸುವ ಕೆಲ ಭೂಮಾಲೀಕರುಗಳು, ತಾವು ತೆರಿಗೆ ತಪ್ಪಿಸಿ ಸ್ವಿಸ್ ಬ್ಯಾಂಕ್ನ ಹಣದ ಬಗ್ಗೆ ಕಹಳೆ ಊದುವ ವ್ಯಾಪಾರೀ ದುರುಳರು, ತಮ್ಮ ಕೆಲಸವಾಗಲು ಯರ್ಯಾರಿಗೋ ಲಂಚ ತಿನ್ನಿಸಿ ಅಸಹಾಯ ಸಂತ್ರಸ್ತನಂತೆ ಪೋಜು ಕೊಡುವ ಗೋಸುಂಬೆಗಳು, ಯರ್ಯಾರದೋ ಬೇನಾಮಿ ಹೆಸರಿನಲ್ಲಿ ಸರ್ಕಾರಿ ಸವಲತ್ತುಗಳನ್ನು ನೇರವಾಗಿ ತನ್ನ ಮನೆಗೆ ಸಾಗಹಾಕುವ ಸಮಾಜ ಶೇವಕರು, ಅವ್ಯವಸ್ಥೆ ವಿರುದ್ಧ ದನಿ ಎತ್ತಿದವರನ್ನು ತಲೆ ಸವರಿ, ಬೆನ್ನು ಚಪ್ಪರಿಸಿ, ಆಮಿಷ ಒಡ್ಡಿ, ಹೆದರಿಸಿ-ಬೆದರಿಸಿ, ಮೂಲೆಗುಂಪು ಮಾಡುವ ವ್ಯವಸ್ಥಿತ ಗುಂಪಿನ ನಾಯಿಕರು, ತಮ್ಮವರೇ ಮಾಡುತ್ತಿರುವ ಅನಾಚಾರಗಳನ್ನು ನೋಡಿಯೂ ನೋಡದಂತೆ ನಾಟಕವಾಡುವ ಜನನಾಯಕರು, ಸರ್ಕಾರೀ ಜಮೀನಿಗೆ-ಸಾರ್ವಜನಿಕ ಕೆರೆಗಳಿಗೆ ಬೇಲಿಹಾಕಿ ಭೂ ಒಡೆಯರು ಎಂದು ಮೆರೆಯುತ್ತಿರುವ ಹಿಪೊಕ್ರೆಟಿಕ್ ಜಮೀನುದಾರರು, ಎಂದೂ ಜಮೀನಿಗೆ ಕಾಲಿಡದೆಯೇ ತೆರಿಗೆ ತಪ್ಪಿಸಿಕೊಂಡು ದಾಖಲೆಗಳಲ್ಲಿ ಮಾತ್ರ ರೈತರೆಂದು ನಮೂದಿಸಿರುವ ಇಂಗ್ಲೀಷ್ ಪ್ಲಾಂಟರುಗಳು, ಇವರೆಲ್ಲರಿಗೂ ಪರೋಕ್ಷವಾಗಿ ಸಹಾಯ ಮಾಡಿ ಗಂಟು ಮಾಡಿಕೊಳ್ಳುತ್ತಿರುವ ನರಿಗಳಂಥಾ ನೌಕರರುಗಳು, ಛೇ ಛೇ ವ್ಯಾಖ್… ಇವರೆಲ್ಲಾ ಲಂಚ, ಭ್ರಷ್ಟಾಚಾರ, ಸಾಮಾಜಿಕ ಸಮಾನತೆ, ಸಮಾಜವಾದ, ಸಮಪಾಲು-ಸಮಬಾಳು ಎಂದು ಬೂರಿ ಬಿಡುತ್ತಿರುವುದನ್ನು ನೋಡಿ ಎಲ್ಲಿಂದ ನಗುವುದೆಂದು ಗೊಂದಲದಲ್ಲಿ ಬಿದ್ದಿದ್ದಾನೆ ಶ್ರೀ ಸಾಮಾನ್ಯ. ಕಥೆ-ಕಾದಂಬರಿ, ಸಿನೆಮಾ-ಧಾರಾವಾಹಿಗಳಲ್ಲಿ ಯಾವುದಾದರೂ ಪಾತ್ರ ಅನ್ಯಾಯಕ್ಕೆ ಒಳಗಾದರೆ `ಛೇ ಛೇ ತ್ಚು ತು ಎನ್ನುವ ನಾವು, ನಿಜಜೀವನದಲ್ಲಿ ನಮ್ಮ ಕಣ್ಣೆದುರೇ ನಡೆಯುವ ಯಡವಟ್ಟುಗಳನ್ನು ಕಂಡೂ ಕಾಣದಂತೆ ವರ್ತಿಸುವುದು ನಮ್ಮ ಇಬ್ಬಂಧಿತನದ ಸೋಗುಗಾರಿಕೆಯ ಪ್ರತಿಬಿಂಬವಾಗಿದೆ. ಭ್ರಷ್ಠರನ್ನು ಸಾಮಾಜಿಕವಾಗಿ ಬಹಿಷ್ಕರಿಸಿ ಧಿಕ್ಕರಿಸಬೇಕು. ಈ ಭ್ರಷ್ಠಾಚಾರದಿಂದ ಇಡೀ ಸಮಾಜಕ್ಕೆ ದ್ರೋಹವಾಗುತ್ತ್ತಿದೆ. ಈ ಅನ್ಯಾಯಕ್ಕೆ ನಾವು ನೇರವಾಗಿ ಗುರಿಯಾದಾಗ ಮಾತ್ರ ಜಾಗೃತವಾಗುವ ನಮ್ಮ ಪ್ರಜ್ಞೆ ಉಳಿದ ಸಮಯದಲ್ಲಿ ಕಪಟಿಯಾಗಿರುತ್ತದೆ.
ಇಲ್ಲಿ ಒಂದು ಕಥೆ ನೆನಪಾಗುತ್ತೆ. ಒಂದು ಸಂತೆ ನಡೆಯುತ್ತಿರುತ್ತೆ. ಯಾವನೋ ಒಬ್ಬ ಏನೋ ಒಂದು ವಸ್ತುವನ್ನು ಕದ್ದುಕೊಂಡು ಓಡಲು ಶುರು ಮಾಡುತ್ತಾನೆ. ಕಳೆದುಕೊಂಡವ `ಕಳ್ಳಾ! ಕಳ್ಳಾ!’ ಎಂದು ಎಂದು ಕೂಗಿಕೊಳ್ಳುತ್ತಾನೆ. ಸುತ್ತಲಿದ್ದವರನೇಕರು ಕಳ್ಳನನ್ನು ಹಿಡಿಯಲು `ಕಳ್ಳಾ! ಕಳ್ಳಾ!’ ಎನ್ನುತ್ತಾ ಕಳ್ಳನನ್ನು ಹಿಂಬಾಲಿಸುತ್ತಾರೆ. ಬಹಳ ಜನಜಂಗುಳಿ ಇದ್ದುದರಿಂದ ಆ ಅಪಾರವಾದ ಜನಸಾಗರದಲ್ಲಿ ಕಳ್ಳ ಕಳೆದು ಹೋಗುತ್ತಾನೆ. ಹಿಡಿಯುವವರು `ಹಿಡೀರಿ! ಹಿಡೀರಿ! ಕಳ್ಳ ಕಳ್ಳ ಎಂದು ಕೂಗುತ್ತಾ ಯಾರನ್ನೋ ಬೆರೆಸಾಡುತ್ತಾ ಓಡುತ್ತಿದ್ದಾರೆ. ಅವರ ಜೊತೆ ನಿಜವಾಗಿಯೂ ಕದ್ದಿರುವ ಕಳ್ಳನೇ ತಾನೂ ಸಹ ಸೇರಿಕೊಂಡು` ಹಿಡೀರಿ, ಹಿಡೀರಿ’ ಎಂದು ಯಾರಿಗೂ ಕಾಣದ, ಯಾರಿಗೂ ಗೊತ್ತಿಲ್ಲದ ಕಾಲಾತೀತನಾದ ಅಗೋಚರ ಕಳ್ಳನನ್ನು ಹಿಡಿಯಲು ಓಡುತ್ತಲೇ ಇರುತ್ತಾನೆ. ಇದಕ್ಕೆ ಸೂಚ್ಯವಾಗಿ `ಉಸ್ಕೊ ಪಕಡೋ’ ಎನ್ನಬಹುದು.

ಕಾಲವನ್ನು ವಿರೋದಿಸಿ ನಿಲ್ಲಬಲ್ಲ ಶಕ್ತಿಯಿರುವುದು ಸಂಸ್ಕೃತಿಗೆ ಮಾತ್ರ. ಮನುಷ್ಯ ಸತ್ತರೂ ಮಾನವೀಯತೆಗೆ ಸಾವಿಲ್ಲ. ಮಾನವೀಯತೆ ಜೀವಂತವಾಗಿರುವವರೆಗೂ ಸಂಸ್ಕೃತಿ ಉಸಿರಾಡುತ್ತಿರುತ್ತದೆ. ಲೇಖಕನೊಬ್ಬನ ಸಂವೇದನಾಶೀಲತೆ ಆಯಾ ಸಮಾಜದ ಆಯಾ ಸನ್ನಿವೇಶದ ಆಗುಹೋಗುಗಳಿಗೆ ಅವನು ತೆರೆದುಕೊಳ್ಳುವ ಮತ್ತು ಪ್ರತಿಕ್ರಿಯಿಸುವ ವ್ಯಾಪ್ತಿಯನ್ನು ಆಧರಿಸಿರುತ್ತದೆ. ಸಾಹಿತಿ, ರಾಜಕಾರಣಿ ಮತ್ತು ವಿಜ್ಞಾನಿ ತಮ್ಮ ತಮ್ಮ ಸಂವೇದನಾಶೀಲತೆಯನ್ನು ಕಳೆದುಕೊಂಡು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡರೆ ಅದು ಸಮಾಜದ ದೊಡ್ಡ ದುರಂತವೊಂದರ ಸಂಕೇತ. ಲೇಖಕನಾಗಿರುವವನು, ರಾಜಕಾರಣಿಯಾದವನು, ವಿಜ್ಞಾನಿಯಾದವನು ತನ್ನ ಆತ್ಮವಂಚನೆ ಮಾಡಿಕೊಳ್ಳದೇ ಸತ್ಯವನ್ನು ನಿಷ್ಠುರವಾಗಿ ಮತ್ತು ಧೀಮಂತಿಕೆಯಿಂದ ನಿರ್ವಹಿಸಬೇಕಾಗಿರುವುದು ಅವಶ್ಯ.
ತನಗೆ ಏನನಿಸ್ತಿಲ್ಲವೋ ಅದು ಅನಿಸ್ತಾ ಇದೆ ಎಂದು ಒಪ್ಪಿಕೊಳ್ಳುವುದು ಅಥವಾ ಬೇರೆಯವರು ಹಾಗೆ ಒಪ್ಪಿಕೊಳ್ಳುವಂಥಾ ಪರಿಸ್ಥಿತಿ ಸೃಷ್ಠಿಸುವುದು ಆತ್ಮ ವಂಚನೆ. ನೀವು ಹೇಗೆ ಬದುಕುತಿದ್ದೀರಿ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತಾ ಹೋಗುತ್ತದೆ. ನೀವು ನಿಜವಾಗಿಯೂ ಸೆಕ್ಯುಲರ್ ಆಗಿದ್ರೆ ನಿಮ್ಮ ಸಾಹಿತ್ಯ ಅಪ್ರಯತ್ನವಾಗಿ ನಿಮ್ಮರಿವಿಗೆ ಬಾರದಂತೆ ಆ ಪ್ರಭುದ್ಧತೆಯನ್ನು ಒಳಗೊಂಡಿರುತ್ತದೆ. ಒಳ್ಳೆಯ ಬರಹಗಾರ ಅಂದರೆ ತನ್ನ ವಿರುದ್ಧ ತಾನೇ ಯೋಚನೆ ಮಾಡುವ ಶಕ್ತಿ ಪಡೆದಿರಬೇಕು. ಒನ್ ಮಸ್ಟ್ ಬೆ ಹಿಸ್ ಓವ್ನ್ ಬಿಟ್ಟರೆಸ್ಟ್ ಕ್ರ್ರಿಟಿಕ್. ಆಗಲೇ ಆತ್ಮಾವಲೋಕನ ಸಾಧ್ಯವಾಗುವುದು.
ಯು ಮಸ್ಟ್ ಬಿ ಏಬಲ್ ಟು ಕೋಪ್ಅಪ್ ವಿತ್ ಯುವರ್ ಎವರ್ ಇಂಪರ್ಫೆಕ್ಟ್ ರಿಯಾಲಿಟಿ. ವಾಸ್ತವದ ನೆಲೆಯಲ್ಲಿ ನಿಂತು ಯೋಚಿಸಿದರೆ ಪ್ರತೀ ಮನುಷ್ಯ ವೈದ್ಯ, ಪರಸರಾಸಕ್ತ, ವಿಜ್ಞಾನಿ, ಶಿಕ್ಷಕ, ಇಂಜಿನಿಯರ್, ಅಡುಗೆಯವ, ಸಾಹಿತಿ, ವಕೀಲ, ಕಲಾವಿದ, ವಿಧ್ಯಾರ್ಥಿ, ಸೈನಿಕ, ರೈತ, ಸಂಶೋಧಕ, ಸಾಹಿತಿ, ನಾಯಕ, ವ್ಯಾಪಾರಿ, ಸೇವಕ, ನ್ಯಾಯಾಧೀಶ, ಮಾಲೀಕ, ಅಧಿಕಾರಿ ಈ ಎಲ್ಲಾ ಗುಣಗಳನ್ನು ಅನುಷಂಗಿಕವಾಗಿ ಹೊಂದಿಯೇ ಇರುತ್ತಾನೆ. ಆದರೆ ಅವುಗಳ ಪ್ರಮಾಣ ಮಾತ್ರ ಅವರವರ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಅವರುಗಳು ಇರುವ ವಾತಾವರಣಕ್ಕೆ ಅನುಗುಣವಾಗಿ ಹೆಚ್ಚು ಕಡಿಮೆಯಾಗಿರುತ್ತದೆ. ಯಾವೆಡೆಗೆ ನಮ್ಮ ಸಾಧ್ಯತೆ ಮತ್ತು ಸಾಮರ್ಥ್ಯವನ್ನು ಚಾನಲೈಸ್ ಮಾಡ್ತೇವೋ ಅಲ್ಲಿ ಪರಿಣಿತರಾಗಿ, ಅನುಭವಸ್ತರಾಗಿ ನಮ್ಮದೇ ಆದ ಒರಿಜಿನಲ್ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತೇವೆ. ಮನುಷ್ಯ ಇರಬೇಕಾದ್ದೇ ಹಾಗಲ್ವೇ ಅದು ಸಹಜವೂ ಅಲ್ವೇ? ಎಂದು ಎಚ್ಚರಿಕೆಯ ಕಿವಿಮಾತು ಹೇಳುತ್ತಾರೆ ತೇಜಸ್ವಿ.
ಪ್ರಮೋಷನ್, ಡಾಕ್ಟರ್ಗಿರಿಗೆ ಬಿಟ್ಟರೆ ಮತ್ತೆ ಅಧ್ಯಯನವನ್ನು ಮುಂದುವರೆಸಿ ತಮ್ಮ ಜ್ಞಾನದ ಉಪಯೋಗವನ್ನು ಸಮಾಜದ ಒಳಿತಿಗೆ ಪ್ರಸರಿಸುವವರು ತೀರಾ ದುರ್ಲಭವಾಗಿದ್ದಾರೆ. ತಮ್ಮ ಅದ್ಯಯನದ ವಿಷಯದಲ್ಲಿ ಮುಂದುವರೆದು ಹೆಚ್ಚಿನ ಕೆಲಸವನ್ನು ಮಾಡಲು ಆಯಾ ಕ್ಷೇತ್ರದ ಪರಿಣಿತರು ಮುಂದೆ ಬಾರದಿರುವುದಕ್ಕೆ ತೇಜಸ್ವಿ ವಿಷಾದಿಸಿದ್ದರು. ಮಿಸ್ಸಿಂಗ್ ಲಿಂಕ್ನಂಥಾ ಮಾನವಶಾಸ್ತ್ರ ವಸ್ತುವಿನ ಪುಸ್ತಕ ಹಾಗೂ ವಿಸ್ಮಯದಂಥಾ ಪರಿಸರ ಸಂವೇದಿ ಪುಸ್ತಕವನ್ನು ಸಾಹಿತ್ಯದ ವಿದ್ಯಾರ್ಥಿಯಾದ ನಾನು ಬರೆಯಬೇಕಾಗಿ ಬಂದದ್ದು ಕನ್ನಡ ಸಾಹಿತ್ಯಲೋಕದ ದಿವಾಳಿತನದ ಸಂಕೇತ ಎಂದು ತೇಜಸ್ವಿ ವಿಷಾದಿಸುತ್ತಾರೆ.
ಆಯಾ ಕ್ಷೇತ್ರದಲ್ಲಿ ಪದವಿ ಪಡೆದು ಹೆಚ್ಚಿನ ಸಂಶೋದನೆ ಮಾಡಿದವರು, ಆಲೋಚನೆ ಹೊಂದಿರುವವರು, ಉನ್ನತ ವ್ಯಾಸಾಂಗ ಮಾಡಿದವರು ಸರ್ಕಾರೀ ಕೆಲಸದ ರೂಪದಲ್ಲಿ ದುಡಿಮೆಗೆ ಒಂದು ಉದ್ಯೋಗ, ಬದುಕಲು ಒಂದು ದಾರಿಯಾದೊಡನೆ ತಾವು ಪರಿಣಿತರಾಗಿದ್ದ ಕ್ಷೇತ್ರದ ಕಾರ್ಯವ್ಯಾಪ್ತಿಯೆಡೆಗೆ, ಅಭ್ಯಸಿಸಿದ ವಿಷಯವನ್ನು ತಿರುಗಿ ಸಹ ನೋಡದ್ದನ್ನು ಕಂಡು ತೇಜಸ್ವಿ ಮರುಕ ಪಡುತ್ತಾರೆ.
ಆಯಾ ಕ್ಷೇತ್ರದಲ್ಲಿ ಉನ್ನತ ಅಭ್ಯಾಸ ಮಾಡಿ ಜ್ಞಾನ ಪಡೆದಿದ್ದೇನೆಂದು ಹೆಸರಿನ ಮುಂದೆ ಪೇಪರ್ ಡಿಗ್ರಿಗಳ ಮಣಿಸರ ಪೋಣಿಸಿಕೊಳ್ಳುವ ಅನೇಕರಿಗೆ ತಮ್ಮ ಅಭ್ಯಾಸದ ಕ್ಷೇತ್ರದ ಬಗ್ಗೆಯೇ ಪ್ರಾಮಾಣಿಕ ಆಸಕ್ತಿರುವುದಿಲ್ಲ ಅವರ ಗಮನವೆಲ್ಲ ಹೇಗಾದರೂ ವೀಸಾ ಗಿಟ್ಟಿಸಿ ವಿದೇಶಕ್ಕೆ ಹಾರುವುದು ಅಥವಾ ಹೆಚ್ಚು ಸಂಬಳ, ಸವಲತ್ತುಗಳಿರುವ ಚಾಕರಿಗೆ ಸೇರಿ ಸಂಪತ್ತು ಕ್ರೋಢೀಕರಿಸುವುದಾಗಿದೆ. ತಾವು ಅಭ್ಯಸಿಸಿದ ವಿಷಯದ ಕುರಿತು ಹೆಚ್ಚಿನ ಹಾಗೂ ಸಂಬಂಧಿತ ಅಬ್ಯಾಸ, ಸಂಶೋಧನೆ, ಹೊಸ ಪ್ರಯೋಗಗಳನ್ನು ಕೇಳಲೇಬೇಡಿ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

