ತುಮಕೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನದ ಆಶಯದಂತೆ ಬದುಕಬೇಕು. ಹಕ್ಕುಗಳನ್ನು ಚಲಾಯಿಸುವಷ್ಟೇ ಜವಾಬ್ದಾರಿಯಿಂದ ಕರ್ತವ್ಯಗಳನ್ನೂ ನಿರ್ವಹಿಸಬೇಕು. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ತಪ್ಪುಗಳು ನಡೆದಾಗ ಅವುಗಳನ್ನು ಎತ್ತಿ ತೋರಿಸುವ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.
ನಗರದ ಕನ್ನಡ ಭವನದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿಯ ತುಮಕೂರು ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಕಾನೂನು ಅನ್ವಯವಾಗುತ್ತದೆ. ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳು ಎಲ್ಲರಿಗೂ ದೊರೆತಾಗ ಮಾತ್ರ ಗೌರವಯುತ ಜೀವನ ನಡೆಸಲು ಸಾಧ್ಯ. ಸಮಾಜದಲ್ಲಿ ಎಲ್ಲರಿಗೂ ಸಮಬಾಳು, ಸಮಪಾಲು ದೊರೆಯಬೇಕು. ಕಾರ್ಯಾಂಗದಲ್ಲಿ ದುರಾಡಳಿತ ಹೆಚ್ಚುತ್ತಿರುವುದು ವಿಷಾದನೀಯ. ಭ್ರಷ್ಟಾಚಾರ ಕ್ಯಾನ್ಸರ್ನಂತೆ ಸಮಾಜವನ್ನು ಕಾಡುತ್ತಿದೆ. ಕರ್ನಾಟಕ ಭ್ರಷ್ಟಾಚಾರದಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬ ಅಂಕಿ-ಅಂಶಗಳಿದ್ದು, ಜಾಗತಿಕ ಮಟ್ಟದಲ್ಲಿ ಭಾರತ 90ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಸರ್ಕಾರಿ ಇಲಾಖೆಗಳು ಅಥವಾ ಅಧಿಕಾರಿಗಳ ವಿರುದ್ಧ ಯಾವುದೇ ಸಮಸ್ಯೆಗಳಿದ್ದರೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು. ನಾಗರಿಕರು ಸಾಮಾಜಿಕ ಕಳಕಳಿ ಬೆಳೆಸಿಕೊಂಡು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಂಚವನ್ನು ಗೌರವಧನ ಎಂದು ಕರೆಯುವ ರಾಜಕಾರಣಿಗಳು ಇರುವುದು ದುರದೃಷ್ಟಕರ. ನಾಗರಿಕರು ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಸಂವಿಧಾನವು ಹಕ್ಕು ಮತ್ತು ಕರ್ತವ್ಯಗಳ ಕೂಡಲಸಂಗಮವಾಗಿದೆ. ಎಲ್ಲರ ಸಹಭಾಗಿತ್ವದಲ್ಲಿ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜು ಐನಾಪುರ ಮಾತನಾಡಿ, ನಮ್ಮ ಸಂಸ್ಥೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಮಾಣಿಕರಿಗೆ ನೆರವಾಗುವುದರ ಜತೆಗೆ ನೊಂದವರಿಗೆ ಹಾಗೂ ಧ್ವನಿಯಿಲ್ಲದವರಿಗೆ ಸಹಾಯ ಮಾಡಲು ಸದಾ ಸಿದ್ಧವಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಲೋಕೇಶ್ ಧನಪಾಲ ಹವಲೆ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಜನರಿಂದ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಡುತ್ತಿರುವುದು ದೇಶದ ದುರಂತ. ಬಡವರು ಮತ್ತು ಸಾಮಾನ್ಯ ಜನರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ದೊರೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಕಾನೂನನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಭದ್ರಶೆಟ್ಟಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಟಿ. ಮಲ್ಲೇಶ್, ಎಸ್. ಗುರುಸ್ವಾಮಿ, ಡಾ. ದಯಾನಂದ್, ಡಾ. ಹೆಚ್.ಬಿ.ಎಂ. ಹಿರೇಮಠ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್. ಯೋಗೀಶ್, ಆರ್.ಎಸ್. ವೀರಪ್ಪದೇವರು, ಕೆ.ಆರ್. ಮಂಜುಳಾ, ಪ್ರೇಮಾರಾಧ್ಯ, ಜಯಕುಮಾರ್, ಬಿ.ವಿ. ದ್ವಾರಕಾನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾಗರತ್ನ ಹಿರೇಮಠ್ ಪ್ರಾರ್ಥಿಸಿದರು. ಆರ್.ಎಸ್. ವೀರಪ್ಪದೇವರು ಸ್ವಾಗತಿಸಿದರು. ಡಾ. ದಯಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಕುಮಾರ್ ನಿರೂಪಿಸಿದರು. ಸಿ. ನರಸಿಂಹರಾಜು ವಂದಿಸಿದರು.
– ಚಂದ್ರಚೂಡ ಕೆ.ಬಿ.
