ಶ್ಲೋಕ – 43
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ ।
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ॥೪೩॥
ಶೌರ್ಯಂ ತೇಜಃ ಧೃತಿಃ ದಾಕ್ಷ್ಯಮ್ ಯುದ್ಧೇ ಚ ಅಪಿ ಅಪಲಾಯನಮ್ ।
ದಾನಮ್ ಈಶ್ವರ ಭಾವಃ ಚ ಕ್ಷಾತ್ರಮ್ ಕರ್ಮ ಸ್ವಭಾವಜಮ್ –– ಕೆಚ್ಚು, ಕಸುವು, ಗಟ್ಟಿತನ, ಕೌಶಲ, ಕಾಳಗದಲ್ಲಿ ಬೆನ್ನು ತೋರಿಸದಿರುವುದು, ಕೊಡುಗೈತನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ ಸಹಜ ಕರ್ಮಗಳು.
ಕ್ಷತ್ರಿಯನಾದವನ ಸಹಜ ಕರ್ಮಗಳನ್ನು ಇಲ್ಲಿ ಕೃಷ್ಣ ವಿವರಿಸಿದ್ದಾನೆ.
(೧) ಶೌರ್ಯಮ್ : ಎದುರಾಳಿಗಳನ್ನು ಬಗ್ಗುಬಡಿಯುವ ಶಕ್ತಿ.
(೨) ತೇಜಸ್ಸು : ಎದುರಾಳಿಗಳು ನೋಡಿದಾಕ್ಷಣ ತಲೆ ತಗ್ಗಿಸುವ ತೇಜಸ್ಸು.
(೩) ಧೃತಿ : ಪ್ರಾಣಾಪಾಯ ಬಂದಾಗಲೂ ಎದೆಗೆಡದೆ ಮುನ್ನುಗ್ಗುವ ಸಾಹಸ ಪ್ರವೃತ್ತಿ
(೪) ದಕ್ಷತೆ: ಶತ್ರುಗಳನ್ನು ಮಣಿಸುವ ತಂತ್ರಗಾರಿಕೆ-ಚಾತುರ್ಯ.
(೫) ಯುದ್ಧೇ ಚ ಅಪಿ ಅಪಲಾಯನಮ್ : ಯುದ್ಧ ಭೂಮಿಯಲ್ಲಿ ಬೆನ್ನು ಹಾಕದೆ, ಪಲಾಯನ ಮಾಡದೆ ಹೋರಾಡುವ ಧೀರತನ.
(೬) ದಾನಮ್: ದಾನ ಧರ್ಮ ಮಾಡುವುದು.
ಈ ಮೇಲಿನ ಆರು ಗುಣಗಳು ಕ್ಷತ್ರಿಯನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇತರ ವರ್ಣದವರಲ್ಲಿ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದಲ್ಲದೆ ಕ್ಷತ್ರಿಯರಿಗೇ ಮೀಸಲಾದ ಒಂದು ವಿಶೇಷ ಗುಣ
(೭) ಈಶ್ವರ ಭಾವಃ : ಅಪರಾಧಿಗೆ ಸೂಕ್ತ ಶಿಕ್ಷೆ ಕೊಡುವ ಅಧಿಕಾರ. ಬೇರೆ ವರ್ಣದವರಿಗೆ ಈ ಅಧಿಕಾರವಿಲ್ಲ.
