ಲಂಡನ್ / ನವದೆಹಲಿ, ನವೆಂಬರ್ 27, 2026: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ಗೆ ಸಂಬಂಧಿಸಿದ ಐತಿಹಾಸಿಕ ಹೂವಿನ ಕೆತ್ತನೆಯ ಅಮೃತಶಿಲೆಯ ಫಲಕವೊಂದು (Marble slab) ಡಿಸೆಂಬರ್ 9, 2026 ರಂದು ಲಂಡನ್ನಲ್ಲಿ ಹರಾಜಾಗಲು ಸಜ್ಜಾಗಿದೆ. ಪ್ರತಿಷ್ಠಿತ ಹರಾಜು ಸಂಸ್ಥೆಯಾದ ‘ಲಿಯಾನ್ ಅಂಡ್ ಟರ್ನ್ಬುಲ್’ (Lyon & Turnbull) ತನ್ನ ‘ಇಸ್ಲಾಮಿಕ್ ಮತ್ತು ಭಾರತೀಯ ಕಲಾ ಮಾರಾಟ’ (Islamic and Indian Art sale) ವಿಭಾಗದಲ್ಲಿ ಇದನ್ನು ಹರಾಜಿಗಿಟ್ಟಿದ್ದು, ಇದಕ್ಕೆ £20,000 ರಿಂದ £30,000 ಅಂದರೆ ಸುಮಾರು ₹24 ಲಕ್ಷದಿಂದ ₹36 ಲಕ್ಷದವರೆಗೆ ಅಂದಾಜು ಮೌಲ್ಯವನ್ನು ನಿಗದಿಪಡಿಸಲಾಗಿದೆ.
ಅಮೃತಶಿಲೆಯ ಫಲಕದ ವಿಶೇಷತೆ ಮತ್ತು ಇತಿಹಾಸ: ಆಯತಾಕಾರದ ಈ ಅಮೃತಶಿಲೆಯ ಫಲಕವು 55.8 ಸೆಂ.ಮೀ ಉದ್ದ, 45.2 ಸೆಂ.ಮೀ ಅಗಲ ಮತ್ತು 3 ಸೆಂ.ಮೀ ದಪ್ಪವಿದೆ. ಇದರ ಮೇಲೆ ಅಮೂಲ್ಯ ರತ್ನದ ಕಲ್ಲುಗಳನ್ನು ಹುದುಗಿಸಿ (Inlaid) ಆಕರ್ಷಕ ಹೂವಿನ ವಿನ್ಯಾಸಗಳನ್ನು ಕೆತ್ತಲಾಗಿದ್ದು, ಇದರ ಅಂಚಿನ ವಿನ್ಯಾಸವು ತಾಜ್ ಮಹಲ್ ಒಳಗಿರುವ ಷಹಜಹಾನ್ನ ಸಮಾಧಿಯ (Cenotaph) ವಿನ್ಯಾಸವನ್ನು ಹೋಲುತ್ತದೆ.
ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಹಾಗೂ ಆಗ್ರಾ ಮತ್ತು ಸುತ್ತಮುತ್ತಲಿನ ಕಟ್ಟಡಗಳ ದುರಸ್ತಿ ಮೇಲ್ವಿಚಾರಕರಾಗಿದ್ದ ಕರ್ನಲ್ ಪೌನಾಲ್ ಫಿಪ್ಸ್ (Colonel Pownoll Phipps) ಅವರು 1816 ರಲ್ಲಿ ಈ ಫಲಕವನ್ನು ಸಂಗ್ರಹಿಸಿದ್ದರು. ತಾಜ್ ಮಹಲ್ ಸ್ಮಾರಕದ ನೆಲಮಾಳಿಗೆಯ ಪ್ರದೇಶದಲ್ಲಿ (Souterrain) ಇದು ಪತ್ತೆಯಾಗಿತ್ತು ಮತ್ತು ಸ್ಮಾರಕದ ದುರಸ್ತಿ ಕಾರ್ಯಕ್ಕಾಗಿ ಇದನ್ನು ಇರಿಸಲಾಗಿತ್ತು ಎಂದು ಫಿಪ್ಸ್ ಭಾವಿಸಿದ್ದರು ಎಂಬುದಾಗಿ ಅವರ ಪುತ್ರನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ. ಆ ವರ್ಷ ಅವರು ಸಂಗ್ರಹಿಸಿದ ಎರಡು ಫಲಕಗಳಲ್ಲಿ ಇದೂ ಒಂದಾಗಿತ್ತು.
ಕಳೆದ 200 ವರ್ಷಗಳಿಗೂ ಹೆಚ್ಚು ಕಾಲ ಫಿಪ್ಸ್ ಕುಟುಂಬದ ಬಳಿಯೇ ಇದ್ದ ಈ ಫಲಕದೊಂದಿಗೆ ತಾಜ್ ಮಹಲ್ನ ಒಂದು ಹಳೆಯ ಛಾಯಾಚಿತ್ರ (Vintage photograph) ಮತ್ತು ಎರಡು ಪತ್ರಗಳಿವೆ (ಒಂದು ಫಿಪ್ಸ್ ಅವರ ಮೊಮ್ಮಗ ಮುದ್ರಿಸಿದ ಪತ್ರ ಮತ್ತು ಇನ್ನೊಂದು ಮಾರ್ಕ್ವೆಸ್ ಆಫ್ ಬಾತ್ ಕೈಬರಹದ ಪತ್ರ).
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಮುಖ ಮಾಹಿತಿ:
-
ಪರ್ಚಿನ್ ಕಾರಿ (Parchin kari): ಮೊಘಲ್ ಭಾರತದಲ್ಲಿ, ಅಮೃತಶಿಲೆಯಲ್ಲಿ ರತ್ನದ ಕಲ್ಲುಗಳನ್ನು ಹುದುಗಿಸುವ ‘ಪಿಯೆಟ್ರಾ ಡ್ಯುರಾ’ (Pietra dura) ಕಲಾ ಸಂಪ್ರದಾಯವನ್ನು ‘ಪರ್ಚಿನ್ ಕಾರಿ’ ಎಂದು ಕರೆಯಲಾಗುತ್ತಿತ್ತು.
-
ಸಮಾಧಿಗಳ ಕೆಳಗಿನ ನೆಲಮಾಳಿಗೆ (Crypt): ತಾಜ್ ಮಹಲ್ನ ಮುಖ್ಯ ಕೋಣೆಯಲ್ಲಿರುವ ಸಮಾಧಿಗಳು ಕೇವಲ ಸ್ಮಾರಕ ಚಿಹ್ನೆಗಳಾಗಿವೆ; ಷಹಜಹಾನ್ ಮತ್ತು ಮುಮ್ತಾಜ್ ಮಹಲ್ ಅವರ ನಿಜವಾದ ಸಮಾಧಿಗಳು ಅದರ ಕೆಳಗಿನ ನೆಲಮಾಳಿಗೆಯಲ್ಲಿವೆ.
-
ನದಿ ತೀರದ ಉದ್ಯಾನ ಯೋಜನೆ: ತಾಜ್ ಮಹಲ್ ಮುಖ್ಯ ಕಟ್ಟಡವು ಯಮುನಾ ನದಿಯ ಪಕ್ಕದಲ್ಲಿರುವ ‘ಚಾರ್ಬಾಗ್’ (Charbagh) ಉದ್ಯಾನದ ಮಧ್ಯಭಾಗದಲ್ಲಿರುವ ಬದಲು, ಅದರ ಉತ್ತರದ ತುದಿಯಲ್ಲಿದೆ.
-
ಶಾಸನಗಳಲ್ಲಿ ದೃಷ್ಟಿ ಹೊಂದಾಣಿಕೆ (Optical adjustment): ತಾಜ್ ಮಹಲ್ನ ಪ್ರವೇಶದ್ವಾರದ ಮೇಲೆ ಕೆತ್ತಲಾದ ಕುರಾನ್ ಶಾಸನಗಳ ಅಕ್ಷರಗಳ ಗಾತ್ರವು ಮೇಲಕ್ಕೆ ಹೋದಂತೆ ದೊಡ್ಡದಾಗುತ್ತಾ ಹೋಗುತ್ತದೆ; ಕೆಳಗಿನಿಂದ ನೋಡುವವರಿಗೆ ಎಲ್ಲಾ ಅಕ್ಷರಗಳು ಒಂದೇ ಗಾತ್ರದಲ್ಲಿ ಕಾಣಿಸುವಂತೆ ದೃಷ್ಟಿಕೋನವನ್ನು ಸರಿದೂಗಿಸಲು ಈ ತಂತ್ರ ಬಳಸಲಾಗಿದೆ.
