ದೇವನಹಳ್ಳಿ (ಬೆಂಗಳೂರು): ಮಹಿಳಾ ಪಿಜಿಗಳಿಗೆ ನುಗ್ಗಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ಎಸಗುತ್ತಿದ್ದ ಆರೋಪಿಯನ್ನು ಪೊಲೀಸರು ಗುಂಡೇಟು ನೀಡಿ ಬಂಧಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತರಹುಣಸೆ ಸಮೀಪದ ಟೆರ್ರಾಫಾರಂ ಬಳಿ ನಡೆದಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ನಿವಾಸಿ ಬೆಟ್ಟ ನರೇಶ್ ಬಂಧಿತ ಆರೋಪಿ. ಈತನ ವಿರುದ್ಧ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ, ಅತ್ಯಾಚಾರ ಯತ್ನ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
🚨 ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ
ಆರೋಪಿಯನ್ನು ಬಂಧಿಸಲು ದೇವನಹಳ್ಳಿ ಎಸಿಪಿ ಶ್ರೀಹರ್ಷ ನೇತೃತ್ವದ ಪೊಲೀಸ್ ತಂಡ ತೆರಳಿತ್ತು. ಈ ವೇಳೆ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆತ ಹಿಮ್ಮೆಟ್ಟದ ಹಿನ್ನೆಲೆಯಲ್ಲಿ, ಆತ್ಮರಕ್ಷಣೆಗಾಗಿ ಚಿಕ್ಕಜಾಲ ಪೊಲೀಸ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಅವರು ಗುಂಡು ಹಾರಿಸಿದ್ದಾರೆ. ಗುಂಡು ಆರೋಪಿಯ ಕಾಲಿಗೆ ತಗುಲಿದೆ.
🚨 ಮಹಿಳಾ ಪಿಜಿಗಳಿಗೆ ನುಗ್ಗಿ ಕಿರುಕುಳ ಆರೋಪ
ನಿನ್ನೆ ಚಿಕ್ಕಜಾಲ ಮತ್ತು ಯಲಹಂಕದಲ್ಲಿರುವ ಖಾಸಗಿ ಮಹಿಳಾ ಪಿಜಿಗಳಿಗೆ ನುಗ್ಗಿದ್ದ ಆರೋಪಿ, ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಮೊಬೈಲ್ ಕಸಿದುಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಓರ್ವ ಯುವತಿಯ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿ ಬೆಟ್ಟ ನರೇಶ್ ಹಾಗೂ ಗಾಯಗೊಂಡ ಪೊಲೀಸರಿಗೆ ಯಲಹಂಕ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳಾ ಪಿಜಿಗಳಲ್ಲಿ ನಡೆದ ಘಟನೆಗಳಿಂದ ಯುವತಿಯರಲ್ಲಿ ಆತಂಕ ಮನೆಮಾಡಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
