ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ವತಿಯಿಂದ ನೀಡಲಾಗುವ 2026ನೇ ಸಾಲಿನ ಅಕ್ಕೂರು ಹೊಸಹಳ್ಳಿ ದಿ. ದೇಶಿಗೌಡ–ಶ್ರೀಮತಿ ನಿಂಗಮ್ಮ ರಂಗಭೂಮಿ ದತ್ತಿ ಪ್ರಶಸ್ತಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ನಾಗವಾರದ ಎನ್.ಎಂ. ಶಂಭೂಗೌಡ ಹಾಗೂ ಶಿವಮೊಗ್ಗದ ರಂಗಕರ್ಮಿ ಅಪರಂಜಿ ಶಿವರಾಜ್ ಅವರು ಆಯ್ಕೆಯಾಗಿದ್ದಾರೆ.
ನಾಗವಾರದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿರುವ ಎನ್.ಎಂ. ಶಂಭೂಗೌಡ ಅವರು ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ರಕ್ಷಣಾ ವೇದಿಕೆ, ಸಿಂ.ಲಿಂ. ನಾಗರಾಜು ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ ಕಲಾವಿದರಾಗಿಯೂ ಹಲವು ಪಾತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇನ್ನು ಶಿವಮೊಗ್ಗದ ಅಪರಂಜಿ ಶಿವರಾಜ್ ಅವರು ಹಾಸ್ಯ ಕಲಾವಿದರಾಗಿ, ಹಿರಿತೆರೆ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ. ನಾಡಿನಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ಅವರು ರಂಗಕರ್ಮಿ ಹಾಗೂ ರಂಗ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಈ ಕುರಿತು ಸಂಸ್ಥೆಯ ಅಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ್ (ಸಿಸಿರಾ) ಹಾಗೂ ದತ್ತಿ ದಾನಿಗಳಾದ ಇಂಜಿನಿಯರ್ ದಾಳೇಗೌಡ ಹೊಸಹಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 29ರ ಭಾನುವಾರ ಶಿವಮೊಗ್ಗದ ಭದ್ರಾ ಪ್ರಾಜೆಕ್ಟ್ನ ಕೆಪಿಸಿ ರಂಗಮಂದಿರದಲ್ಲಿ ಪತ್ರ ಸಂಸ್ಕೃತಿ ಸಂಘಟನೆಯ 25ನೇ ವರ್ಷದ ಅಂಗವಾಗಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಿರಿಯ ಸಾಹಿತಿಗಳಾದ ಭೋಜರಾಜ ಸೊಪ್ಪಿಮಠ, ಶಕುಂತಲಾ ನಾ. ದಾಳೇರ್ ಹಾಗೂ ಓಂಕಾರಯ್ಯ ತವನಿಧಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಹೊಸಹಳ್ಳಿ ಡಿ. ಸುಂದರ್ ಅವರ ಕಾಲ್ಗೆಜ್ಜೆ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ನವೆಂಬರ್ 28ರ ಶನಿವಾರ ಸಂಜೆ ಡಾ. ಹೆಚ್.ಎನ್. ಮೀರಾ ಅವರ ಏಕವ್ಯಕ್ತಿ ಅಭಿನಯದ ಪಂಚವರ್ಣೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಪ್ರಶಸ್ತಿಯು ಶಾಲು, ಹಾರ, ಫಲ, ಫಲಕ, ಪ್ರಮಾಣಪತ್ರ ಹಾಗೂ ಗೌರವಧನವನ್ನು ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
