
ಹಾಸನ : ಜಿಲ್ಲೆಯಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಸಾಗಾಣಿಕೆ, ಮಾರಾಟ ಹಾಗೂ ಬಳಕೆಯನ್ನು ಪರಿಣಾಮವಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ನಾರ್ಕೋ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾರು ಓಡಾಡದೇ ಇರುವಂತಹ ಪ್ರದೇಶದಲ್ಲಿ ಗಾಂಜಾ ಬೆಳೆಯುವ ಸಾಧ್ಯತೆ ಇರುತ್ತದೆ ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಸ್ತು ಸಮಯದಲ್ಲಿ ಗಮನಹರಿಸಿ ಗಾಂಜಾ ಬೆಳೆಯನ್ನು ಪತ್ತೆಹಚ್ಚಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಅದೇ ರೀತಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ಎಚ್ಚರಿಕೆವಹಿಸಿ ತೋಟಗಾರಿಕೆ ಮತ್ತು ಕೃಷಿ ಜಮೀನುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಗಾಂಜಾ ಬೆಳೆ ಪತ್ತೆಹಚ್ಚಲು ನಿರ್ದೇಶನ ನೀಡಿದರು. ಅಕ್ರಮವಾಗಿ ಔಷಧಿ ಅಂಗಡಿಗಳಲ್ಲಿ ಒಂದೇ ರೀತಿಯಾಗಿರುವ ಹೆಚ್ಚಿನ ಡ್ರಗ್ ಮಾರಾಟವಾಗುತ್ತಿದ್ದರೆ ಅಂತಹ ಅಂಗಡಿಗಳ ಮೇಲೆ ಸೂಕ್ತ ನಿಗಾವಹಿಸಿ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಹಾಯಕ ಔಷಧ ನಿಯಂತ್ರಣಾಧಿಕಾರಿಗೆ ತಿಳಿಸಿದರು.
ಹಾಸನ ಜಿಲ್ಲೆಯ ರೆಸಾರ್ಟ್ ಮತ್ತು ಹೋಂ ಸ್ಟೇ ಗಳಿಗೆ ವಾರಾಂತ್ಯದ ಶುಕ್ರವಾರ ಮತ್ತು ಶನಿವಾರದಂದು ಹೊರಗಡೆಯಿಂದ ಯಾತ್ರಿಕರು ಬಂದು ಹೋಗುತ್ತಿದ್ದು, ಕೆಲವು ರೆಸಾರ್ಟ್ ಮತ್ತು ಹೋಂ ಸ್ಟೇ ಗಳು ಹೆಚ್ಚು ಭರ್ತಿಯಾಗುತ್ತಿವೆ. ಯಾತ್ರಿಕರಿಗೆ ಸೇವನೆ ಮಾಡಲು ಅಕ್ರಮವಾಗಿ ಮಾದಕ ವಸ್ತುಗಳನ್ನು ಪೂರೈಕೆ ಮಾಡುವ ಮಾಹಿತಿ ಇರುವುದರಿಂದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಅನಿರೀಕ್ಷಿತ ಭೇಟಿ ನೀಡಿ ತಕ್ಷಣ ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸುವಂತೆ ಹೇಳಿದರು. ಅಕ್ರಮವಾಗಿ ಮಾದಕ ವಸ್ತುಗಳ ಮಾರಾಟ ಮಾಡುವಂತಹ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಿಂದಿನ ಸಭೆಯಲ್ಲಿ ೫೦ ಪ್ರಕರಣ ದಾಖಲಿಸಲು ಗುರಿ ನಿಗದಿಪಡಿಸಲಾಗಿತ್ತು ೧೩೧ ಪ್ರಕರಣಗಳನ್ನು ದಾಖಲಿಸಿದ್ದಾರೆ ಇನ್ನೂ ಹೆಚ್ಚಿನ ಕಾಳಜಿಯಿಂದ ಪತ್ತೆಹಚ್ಚುವಂತೆ ತಿಳಿಸಿ, ಮಾದಕ ವಸ್ತುಗಳ ಪತ್ತೆಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡ ವಾಹನಗಳ ತಪಾಸಣೆ ಮಾಡಲು ಸೂಚಿಸಿದರು.
ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ತಿಳಿಸಿದರಲ್ಲದೆ, ಶಾಲಾ ಕಾಲೇಜು ಸುತ್ತಮುತ್ತ ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ಪತ್ತೆಹಚ್ಚಲು ಹೆಚ್ಚಿನ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಕಲ್ಯಾಣ, ಬಿ.ಸಿ.ಎಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿಯೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಅವರು ಮಾತನಾಡಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗಿದೆ ಇದನ್ನು ತಡೆಗಟ್ಟಲು ಎಲ್ಲರೂ ಜಾಗೃತರಾಗಿ ಕರ್ತವ್ಯ ನಿರ್ವಹಿಸಬೇಕು. ಮಾದಕ ವಸ್ತುಗಳ ಸಾಗಣೆಕೆ ಪತ್ತೆಗಾಗಿ ಪೊಲೀಸ್ ಇಲಾಖೆಯೊಂದಿಗೆ ರೈಲ್ವೆ ಇಲಾಖೆ ಪೊಲೀಸ್ ಸಿಬ್ಬಂದಿಗಳು ಕೂಡ ಕೈ ಜೋಡಿಸಿ ಎಂದು ಅವರು, ಸಿಂಥೆಟಿಕ್ ಡ್ರಗ್ ಮೇಲೆ ನಿಗಾ ವಹಿಸಬೇಕಿದೆ ಒಮ್ಮೆ ಇದರ ಸೇವನೆಗೆ ಒಳಗಾದರೆ ಆ ವ್ಯಸನದಿಂದ ಹೊರತರುವುದು ಕಷ್ಟವಿದೆ ಎಂದು ತಿಳಿಸಿದರು. ಇದಕ್ಕಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಬಹುಮುಖ್ಯವಾಗಿದೆ. ಸಕಲೇಶಪುರಕ್ಕೆ ತೋಟದ ಕೆಲಸಕ್ಕೆ ಅಸ್ಸಾಂ, ಬಾಂಗ್ಲಾ ದೇಶದಿಂದ ಬಂದಿರುವ ಕಾರ್ಮಿಕರು ಸಂತೆ ನಡೆಯುವ ಸ್ಥಳಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ತಮ್ಮಯ್ಯ, ವೆಂಕಟೇಶ್ ನಾಯ್ಡು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.