ಅ ದಿನ ಅಮಾವಾಸ್ಯೆ ಅಂತ ನನಗೆ ತಿಳಿದಿರಲೇ ಇಲ್ಲ. ನಿನ್ನ ನೋಡಬೇಕು ಅನಿಸುತ್ತಾ ಇದೆ ಅಂತ ಮೆಸೇಜ್ ಮಾಡಿದ್ದೆ ನಾನು , ಅವನೂ ಅಷ್ಟೇ ಪರಿಚಯ ಆಗಿ ಕೆಲವೇ ಕೆಲವು ದಿನ ಆಗಿದ್ದರೂ ಸಹ ತುಂಬಾ ಹಚ್ಚಿಕೊಂಡು ಬಿಟ್ಟಿದ್ದ ನನ್ನ.
ನಾನು ಬಿಎಸ್ಸಿ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ, ಅಪ್ಪ ಪಿ ಡಿ ಜಿ , ಸುತ್ತಾ ಮುತ್ತ ಹಳ್ಳಿಗಳಲ್ಲಿ ಪ್ರಾಮಾಣಿಕ ವ್ಯಕ್ತಿಯಂತ ಒಳ್ಳೆಯ ಹೆಸರು ಮಾಡಿದ್ದರು, ಅಣ್ಣ ಬೆಂಗಳೂರಿನ ಒಂದು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಅಮ್ಮ ಮನೆಯೊಡತಿ .
ನನಗೆ ಮದುವೆ ಮಾಡಬೇಕು ಅಂತ ಅಪ್ಪ ಹಲವಾರು ಕಡೆಗಳಲ್ಲಿ ಹುಡುಗನನ್ನು ನೋಡುತ್ತಿದ್ದರು. ಹಲವಾರು ಹುಡುಗರ ಪ್ರಪೋಸಲ್ ಗಳು ಬರುತ್ತಿದ್ದರೂ ನನಗೆ ಯಾರು ಇಷ್ಟವೇ ಆಗಿರಲಿಲ್ಲ.
ಕೊನೆಗೆ ಆ ಒಂದು ಹುಡುಗನ ಪ್ರೊಫೈಲ್ ಇಷ್ಟವಾಗಿ ಬಿಟ್ಟಿತ್ತು ನನಗೆ. ಯಾಕೋ ಗೊತ್ತಿಲ್ಲ ಕೇವಲ ಒಂದೇ ಒಂದು ಫೋಟೋದಲ್ಲಿ ತುಂಬಾ ಹತ್ತಿರದ ವ್ಯಕ್ತಿ ಅನ್ನಿಸತೊಡಗಿತ್ತು ನನಗೆ.
ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅವನು, ನೋಡೋಕೆ ತುಂಬಾ ಚೆನ್ನಾಗಿಯೂ ಇದ್ದ , ನನ್ನದೇ ದೃಷ್ಟಿ ಬೀಳುವ ಹಾಗೆ ಇತ್ತು ಅವನ ಸೌಂದರ್ಯ.
ನಮ್ಮ ಮನೆಯಲ್ಲಿ ಎಲ್ಲರೂ ಒಪ್ಪಿಕೊಂಡಿದ್ದರು , ನನ್ನ ನೋಡೋಕೆ ಅಂತ ಒಂದು ದಿನ ಅವರ ಅಪ್ಪ ಅಮ್ಮ ನ ಜೊತೆಯಲ್ಲಿ ಬಂದಿದ್ದ, ಅವನಿಗೆ ಕುಡಿಯಲು ನೀರು ಕೊಡಲು ಹೋದಾಗ ನನ್ನ ಕೈ ಮೊದಲ ಬಾರಿ ನಡುಗಿತ್ತು, ಅವನ ಹೊಳಪಾದ ಕಣ್ಣುಗಳು ,ಚಿಗುರಿದ ಮೀಸೆ ,ಅವನ ಸ್ವಚ್ಛಂದವಾದ ಕನ್ನಡ ನನ್ನನ್ನು ಮೈಮರೆಸಿತ್ತು . ಅವನ ಗುಣಗಳು ನನ್ನ ಅಪ್ಪನನ್ನು ಹೊಲುತ್ತಿತ್ತು ,ಯಾಕೋ ತುಂಬಾ ಹತ್ತಿರದವರಂತೆ ಕಾಣತೊಡಗಿದ್ದ ನನಗೆ.
ಅವತ್ತು ಸಂಜೆ ನಾನು ಮೆಸೇಜ್ ಮಾಡಿದ್ದೆ, ನನಗೆ ನೀವು ಇಷ್ಟವಾಗಿದ್ದೀರಾ ನಿಮ್ಮ ಒಪ್ಪಿಗೆ ಸಿಕ್ಕರೆ ನಮ್ಮ ಮನೆಯಲ್ಲಿ ಮುಂದುವರಿಯೋಣ ಅಂತ ಹೇಳಿದ್ದಾರೆ ಎಂದು ತಿಳಿಸಿದೆ.
ನನಗೆ ಗೊತ್ತೇ ಇರಲಿಲ್ಲ ಅವನು ಮಾತಿನ ಮಲ್ಲ ಎಂದು , ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಹೇಳಿಬಿಟ್ಟಿದ್ದ , ಕೇವಲ ಒಂದೇ ಒಂದು ರಾತ್ರಿಯಲ್ಲಿ ನಾವು ಎಷ್ಟು ಕ್ಲೋಸ್ ಆಗಿದ್ದೆವು ಎಂದರೆ ಪ್ರೀತಿಯ ಅಮಲಿನಲ್ಲಿ ತೇಲತೊಡಗಿದ್ದವು.
ಅವನೂ ಅಷ್ಟೇ ನನ್ನನ್ನು ತುಂಬಾ ಇಷ್ಟಪಡಲು ಕಾರಣವನ್ನು ಹೇಳಿದ್ದ ಏನಂದರೆ ಅವರ ಅಮ್ಮನನ್ನು ಹೋಲುತ್ತಿದ್ದೇನೆ ಎಂದು.
ಹೀಗೆ ಒಂದು ವಾರಗಳು ಕಳೆಯಿತು ನಮ್ಮ ಮನೆಯಲ್ಲಿ ಹಾಗೂ ಅವರ ಮನೆಯಲ್ಲಿ ಒಪ್ಪಿಕೊಂಡಿದ್ದರು , ಒಂದು ದಿನ ಹುಡುಗನ ಮನೆ ನೋಡಲು ಹೋಗೋಣ ಅಂತ ನಮ್ಮ ಮನೆಯಲ್ಲಿ ನಿರ್ಧರಿಸಿದ್ದರು, ಅವನೂ ಒಪ್ಪಿಕೊಂಡು ರಜೆ ಹಾಕಿದ್ದ.
ನಮ್ಮ ಊರಿನ ಮೇಲೆಯೇ ಅವರ ಊರಿಗೆ ಹೋಗುವ ರಸ್ತೆ ಇತ್ತು, ಭಾನುವಾರ ಅವರ ಮನೆಗೆ ಹೋಗುವ ಕಾರ್ಯಕ್ರಮ ನಿಶ್ಚಯವಾಗಿತ್ತು. ಶನಿವಾರ ಸಂಜೆ ಮೆಸೇಜ್ ಮಾಡಿದ್ದ , ನಾನು ಊರಿಗೆ ಹೋಗುತ್ತಿದ್ದೇನೆ ನಾಳೆ ನಿಮ್ಮ ಅಪ್ಪ ಅಮ್ಮ ಬರುತ್ತಿದ್ದಾರೆ , ನಾನೇ ಮುಂದೆ ನಿಂತು ಎಲ್ಲಾ ಕೆಲಸ ಮಾಡಬೇಕು ಎಂದಿದ್ದ.
ನನ್ನ ಹಣೆ ಬರಹವೋ ಏನೋ, ಹೋಗುವಾಗ ನನ್ನನ್ನು ಒಂದು ಸಾರಿ ಭೇಟಿ ಮಾಡಿ ಹೋಗು, ನನ್ನ ಮನೆಗೆ ಬಂದ ದಿನ ನಿನ್ನನ್ನು ಸರಿಯಾಗಿ ನೋಡಲು ಆಗಿಲ್ಲ ಎಂದು ಮೆಸೇಜ್ ಮಾಡಿದ್ದೆ ನಾನು.
ಅವನು ಸರಿ ಅಂತ ಹೇಳಿದ್ದ , ರಾತ್ರಿ ಎಂಟು ಗಂಟೆಯ ವೇಳೆಗೆ ನಮ್ಮ ಮನೆಯ ಹತ್ತಿರ ಬಂದು ಕಾಲ್ ಮಾಡಿದ್ದ , ಅಪ್ಪ ಅಮ್ಮನಿಗೆ ಒಂದು ಸುಳ್ಳು ಹೇಳಿ ಅವನ ಕಾರ್ ನಲ್ಲಿ ಮೊದಲ ಬಾರಿ ಬಂದು ಕುಳಿತ್ತಿದ್ದೆ.

ಸ್ವಲ್ಪ ಹೊತ್ತು ಅಲ್ಲಿಯೇ ರಸ್ತೆಯ ಬಳಿ ಕಾರ್ ನಿಲ್ಲಿಸಿ ಮಾತನಾಡಿದ್ದೆವು, ಸರಿ ಸಮಯ ಆಯಿತು ನಿನ್ನನ್ನು ಮನೆಯ ಹತ್ತಿರ ಬಿಟ್ಟು ನಂತರ ಹೊರಡುತ್ತೇನೆ ಎಂದು ಹೇಳಿ ಕಾರ್ ನಲ್ಲಿ ಕುಳಿತು ಸ್ವಲ್ಪ ಮುಂದೆ ಸಾಗಿದ್ದೆವು ಅಷ್ಟೇ..!!
ಎಲ್ಲಿತ್ತು ನನ್ನ ಹಣೆಬರಹ, ಒಂದು ದೊಡ್ಡ ಲಾರಿ ಬಂದು ಕಾರ್ ಗೆ ಜೋರಾಗಿ ಗುದ್ದಿತ್ತು , ಮುಂದೆ ಏನಾಯಿತು ಎಂದು ನನಗೆ ತಿಳಿಯಲೇ ಇಲ್ಲ.
ಒಂದು ವಾರಗಳ ನಂತರ ಎಚ್ಚರಗೊಂಡಿದ್ದೆ ನಾನು , ನೋಡಿದರೆ ಒಬ್ಬಳೇ ಬೆಡ್ ಮೇಲೆ ಮಲಗಿದ್ದೆ , ಅಪ್ಪ ಅಮ್ಮ ಎಲ್ಲರೂ ಖುಷಿ ಪಡತೊಡಗಿದ್ದರು, ಕೊನೆಗೂ ಮಗಳು ಬದುಕಿದಳು ಎಂದು.
ಆದರೆ ನಾನು..
ಮೊದಲ ಬಾರಿ ಒಬ್ಬನಿಗೆ ನನ್ನ ಮನಸ್ಸು ಕೊಟ್ಟಿದ್ದೆ , ಕಷ್ಟ ಸುಖದಲ್ಲಿ ಜೊತೆಗಿರುತ್ತೇನೆ ಎಂದು ಮಾತು ಕೊಟ್ಟಿದ್ದೆ , ಪರಿಚಯ ಕೆಲವೇ ದಿನಗಳದ್ದು ಆದರೂ ಕೈಹಿಡಿದು ಕೊನೆಯವರೆಗೂ ನಡೆಯುತ್ತೇನೆ ಎಂದಿದ್ದೆ , ಆದರೆ ಅವನು ಏನನ್ನೂ ಹೇಳದೆ ವಿದಾಯ ಹೇಳಿದ್ದ ನನಗೆ.
ಅವನು ಕಾರಿನಲ್ಲಿ ತನ್ನ ಮೈ ಸೋಕಿಸದಂತೆ ನನ್ನ ಹಣೆಗೆ ಮುತ್ತು ನೀಡಿದ್ದ , ಭರವಸೆ ಕೊಡುವೆ ಗೆಳತಿ ನಿನ್ನ ಅಪ್ಪನ ಪ್ರೀತಿಯನ್ನು ಮೀರಿಸಲು ಸಾಧ್ಯವಿಲ್ಲ ನನಗೆ , ಆದರೆ ಪ್ರಯತ್ನಿಸುತ್ತೇನೆ ಎಂದಿದ್ದ.
ನನ್ನ ಮುಂದೆ ನಿಂತಿದ್ದ ಅಪ್ಪನ ಮುಖವನ್ನೊಮ್ಮೆ ನೋಡಿದೆ , ಅವನ ಕಣ್ಣಿನಲ್ಲಿ ನನ್ನ ಕಣ್ಣೀರು ಸೇರಿತ್ತು..
ಓ ವಿಧಿಯೇ ಮತ್ತೊಮ್ಮೆ ನೀಡಬಾರದೆ..
ಅವನನ್ನೊಮ್ಮೆ ಬದುಕಿಸಿ ಕೊಡಬಾರದೇ..!!
– ಅಪರಿಚಿತ ಮೌನಿ
