ಅಧ್ಯಾಯ-1
ಶ್ಲೋಕ – 46
ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್ ಶಸ್ತ್ರಪಾಣಯಃ ।
ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ ॥೪೬॥
ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ ॥೪೬॥
ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್ ಶಸ್ತ್ರಪಾಣಯಃ ಧಾರ್ತರಾಷ್ಟ್ರಾಃ ರಣೇ ಹನ್ಯುಃ ತತ್ ಮೇ ಕ್ಷೇಮ ತರಮ್ ಭವೇತ್– ಒಂದೊಮ್ಮೆ ಎದುರು ನಿಂತು ಹೋರಾಡದ, ಆಯುಧ ಹಿಡಿಯದ ನನ್ನನ್ನು ಧಾರ್ತರಾಷ್ಟ್ರರು ಆಯುಧ ಹಿಡಿದು ಕೊಲ್ಲುವುದಾದರೆ ಅದು ನನ್ನ ಭಾಗ್ಯವಾದೀತು.
ನಾನು ಪ್ರತಿಕಾರ ಮಾಡುವುದೇ ಇಲ್ಲ. ಒಂದು ವೇಳೆ ಅವರು ನನ್ನನ್ನು ಹೊಡೆಯಲು ಬಂದರೆ ನಾನು ಪ್ರತಿಯಾಗಿ ಹೊಡೆಯುವುದೂ ಇಲ್ಲ. ಕತ್ತಿ ಹಿಡಿದು ನನ್ನನ್ನು ಕೊಂದರೆ ಅದು ನನ್ನ ಭಾಗ್ಯವೆಂದು ನಾನು ಸಾಯುತ್ತೇನೆ. ಏಕೆ ಇಂತಹ ದುರಂತ ನೋಡಿ ಬದುಕಬೇಕು? ಏನಾದರೂ ಸರಿ, ನನಗೆ ಯುದ್ಧ ಬೇಡ. ಎಂದು ಅರ್ಜುನ ಕೈಚಲ್ಲುತ್ತಾನೆ.
ಯುದ್ಧ ಪ್ರಾರಂಭದಲ್ಲಿ “ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ” ಎಂದು ದರ್ಪದಿಂದ ಹೇಳಿದ ಅರ್ಜುನ- ಕ್ಷಣ ಮಾತ್ರದಲ್ಲಿ ಕರಗಿ ಹೋದ. ಇದು ಆತನ ಸುಪ್ತಪ್ರಜ್ಞೆಯಲ್ಲಿ ಅವನಿಗೆ ತಿಳಿಯದಂತೆ ಅಡಗಿ ಕುಳಿತಿದ್ದ ಭಾವನೆ. ಕೃಷ್ಣ ತನ್ನ ಮನಃಶಾಸ್ತ್ರೀಯ ಚಿಕಿತ್ಸೆ(Psychotherapy)ಯಿಂದ ಅದನ್ನು ಸಂಪೂರ್ಣ ಹೊರ ಬೀಳುವಂತೆ ಮಾಡಿದ. ಇದು ಮಾನಸಿಕ ಸಂಘರ್ಷಕ್ಕೊಳಗಾದವನಿಗೆ ಮೊದಲು ಮಾಡುವ ಚಿಕಿತ್ಸೆ. ಮನುಷ್ಯನ ಮನೋರೋಗವನ್ನು ಹೇಗೆ ಗುಣಪಡಿಸಬಹುದು ಎಂದು ಜಗತ್ತಿಗೆ ತೋರಿಸಿದ ಮೊದಲ ಮಹಾ ಮನೋವಿಜ್ಞಾನಿ ಕೃಷ್ಣ. ಒಂದು ವೇಳೆ ಕೃಷ್ಣ ಅರ್ಜುನನ ಆತ್ಮೀಯರ ಮುಂದೆ ರಥವನ್ನು ನಿಲ್ಲಿಸದೇ ಇದ್ದಿದ್ದರೆ, ಈ ಎಲ್ಲಾ ವಿಚಾರಗಳು ಆತನ ಮನಸ್ಸಿನಿಂದ ಹೊರ ಬರುತ್ತಿರಲಿಲ್ಲ. ಶ್ರೀಕೃಷ್ಣನ ಈ ಮಾನಸಿಕ ಚಿಕೆತ್ಸೆ, ತತ್ವಶಾಸ್ತ್ರದೊಂದಿಗೆ ಮನಃಶಾಸ್ತ್ರವನ್ನು ಅರಿತು ವಿಶ್ಲೇಷಿಸಿದಾಗ ಮಾತ್ರ ನಮಗೆ ಅರ್ಥವಾಗುತ್ತದೆ.
