
ಬೆಂಗಳೂರು: ಪಾಲಿಕೆಯ ಎಲ್ಲ 8 ವಲಯಗಳಲ್ಲಿ 608 ಆಸ್ತಿಗಳಿಂದ ದೀರ್ಕಾಲದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಫೆ.10ರಿಂದ ಸ್ಥಿರ ಆಸ್ತಿಗಳ ಹರಾಜು ಮಾಡಲು ಬಿಬಿಎಂಪಿ ಮುಂದಾಗಿದೆ.
ಆಸ್ತಿ ತೆರಿಗೆ ಸಂಗ್ರಹ ವಿಚಾರವಾಗಿ ಕಾರಣ ಕೇಳಿ ನೋಟಿಸ್, ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟುಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿ ಇತರ ಕ್ರಮವನ್ನು ಪಾಲಿಕೆ ತೆಗೆದುಕೊಳ್ಳುತ್ತಿದೆ.
ಆದರೂ, ಸಾಕಷ್ಟು ಆಸ್ತಿ ಮಾಲೀಕರು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಹಾಗಾಗಿ ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜು ಪ್ರಕ್ರಿಯೆ ಶುರುವಾಗಿದೆ.
ರಾಜಧಾನಿಯಲ್ಲಿ 2 ಲಕ್ಷಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಇದರಿಂದಾಗಿ ಬಿಬಿಎಂಪಿಗೆ ಅಂದಾಜು 390 ಕೋಟಿ ರೂ. ಬಾಕಿ ಬರಬೇಕಿದೆ. ಬಲವಂತದ ವಸೂಲಾತಿ ಕ್ರಮ ತಪ್ಪಿಸುವ ಸಲುವಾಗಿ ಎಲ್ಲ ಆಸ್ತಿ ತೆರಿಗೆದಾರರು ತಣವೇ ಬಾಕಿ ಪಾವತಿಸಬೇಕೆಂದು ಬಿಬಿಎಂಪಿ ಕೋರಿದೆ. ಸ್ವತ್ತುಗಳಿಗೆ ಕಂದಾಯ ಪರಿಷ್ಕರಣೆ, ಬಾಕಿ ಉಳಿಸಿಕೊಂಡಿರುವ ಅಥವಾ ಇದುವರೆಗೂ ಆಸ್ತಿ ತೆರಿಗೆ ಪಾವತಿಸದಿರುವ ಸ್ವತ್ತುಗಳನ್ನು ಗುರುತಿಸಿ ಬಿಬಿಎಂಪಿ ಕಾಯ್ದೆ ಅನ್ವಯ ಹರಾಜು ಪ್ರಕ್ರಿಯೆ ಮಾಡಲಾಗುತ್ತದೆ. ಹರಾಜಿನಲ್ಲಿ ಸ್ವೀಕರಿಸಿದ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
ವಲಯವಾರು ಆಸ್ತಿಗಳ ವಿವರ
ಪೂರ್ವ: ಜೆ.ಸಿ.ನಗರ, ಮಾರುತಿ ಸೇವಾನಗರ, ಎಚ್ಬಿಆರ್ ಲೇಔಟ್, ಜೀವನ್ ಬೀಮಾನಗರ, ಸಿ.ವಿ. ರಾಮನ್ನಗರ, ಶಾಂತಿನಗರ, ವಸಂತನಗರ ಉಪ ವಿಭಾಗಗಳಲ್ಲಿ ತಲಾ 10, ಹೆಬ್ಬಾಳ, ಕೆ.ಜಿ. ಹಳ್ಳಿ ಉಪ ವಿಭಾಗಗಳಲ್ಲಿ ತಲಾ 11, ಪುಲಿಕೇಶಿನಗರ, ದೊಮ್ಮಲೂರು ಉಪ ವಿಭಾಗಗಳಲ್ಲಿ ತಲಾ 9 ಹಾಗೂ ಶಿವಾಜಿನಗರ ಉಪ ವಿಭಾಗದಲ್ಲಿ 8 ಸೇರಿ ಒಟ್ಟು 118 ಆಸ್ತಿಗಳು.
ಪಶ್ಚಿಮ: ಚಿಕ್ಕಪೇಟೆ, ಚಂದ್ರಲೇಔಟ್, ಚಾಮರಾಜಪೇಟೆ, ಗೋವಿಂದರಾಜಪುರ, ಗಾಂಧಿನಗರ, ಜೆ.ಜೆ.ಆರ್. ನಗರ, ಮಲ್ಲೆಶ್ವರ, ಮಹಾಲಕ್ಷಿ$್ಮಪುರ, ಮತ್ತಿಕೆರೆ, ನಾಗಪುರ, ರಾಜಾಜಿನಗರ ಹಾಗೂ ಶ್ರೀರಾಮಮಂದಿರ ಉಪವಿಭಾಗಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 120 ಆಸ್ತಿಗಳು.
ದಕ್ಷಿಣ: ಬಿಟಿಎಂ ಲೇಔಟ್, ಕೋರಮಂಗಲ, ಬನಶಂಕರಿ, ಪದ್ಮನಾಭನಗರ, ಜಯನಗರ, ಜೆ.ಪಿ.ನಗರ, ಗಾಳಿ ಆಂಜನೇಯ ದೇವಸ್ಥಾನ, ವಿಜಯನಗರ, ಹೊಂಬೇಗೌಡ ನಗರ ಉಪವಿಭಾಗಗಳಲ್ಲಿ ತಲಾ 10, ಗಿರಿನಗರ ಉಪ ವಿಭಾಗದಲ್ಲಿ 8, ಬಸವನಗುಡಿ ಉಪ ವಿಭಾಗದಲ್ಲಿ 6 ಹಾಗೂ ಕೆಂಪೇಗೌಡನಗರ ಉಪ ವಿಭಾಗದಲ್ಲಿ 5 ಸೇರಿ ಒಟ್ಟು 109 ಆಸ್ತಿಗಳು.
ಮಹದೇವಪುರ: ಮಹದೇವಪುರ ವಲಯದ ಹೊರಮಾವು, ಎಚ್ಎಎಲ್, ಕೆ.ಆರ್.ಪುರ, ಮಾರತ್ತಹಳ್ಳಿ, ಹೂಡಿ ಹಾಗೂ ವೈಟ್ಫೀಲ್ಡ್ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 60 ಆಸ್ತಿಗಳು. ಬೊಮ್ಮನಹಳ್ಳಿ ವಲಯದ ಬೇಗೂರು, ಉತ್ತರಹಳ್ಳಿ, ಯಲಚೇನಹಳ್ಳಿ, ಬೊಮ್ಮನಹಳ್ಳಿ, ಅರಕೆರೆ, ಎಚ್ಎಸ್ಆರ್ ಲೇಔಟ್, ಅಂಜನಾಪುರ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 70 ಆಸ್ತಿಗಳು
ಯಲಹಂಕ: ಯಲಹಂಕ, ಯಲಹಂಕ ಸ್ಯಾಟಲೈಟ್ ಟೌನ್, ಬ್ಯಾಟರಾಯನಪುರ, ವಿದ್ಯಾರಣ್ಯಪುರ ಉಪ ವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 40 ಆಸ್ತಿಗಳು.
ಆರ್.ಆರ್.ನಗರ: ಲಗ್ಗೆರೆ, ಆರ್.ಆರ್.ನಗರ, ಲಕ್ಷ್ಮೀದೇವಿನಗರ, ಯಶವಂತಪುರ ಉಪವಿಭಾಗಳಲ್ಲಿ ತಲಾ 10, ಕೆಂಗೇರಿ, ಹೇರೋಹಳ್ಳಿ ಉಪ ವಿಭಾಗಗಳಲ್ಲಿ ತಲಾ 5 ಸೇರಿ ಒಟ್ಟು 50 ಆಸ್ತಿಗಳು.
ದಾಸರಹಳ್ಳಿ: ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯ ಉಪವಿಭಾಗಳಲ್ಲಿ ತಲಾ 10, ಹೆಗ್ಗನಹಳ್ಳಿ ಉಪ ವಿಭಾಗದಲ್ಲಿ 11 ಸೇರಿ ಒಟ್ಟು 41 ಆಸ್ತಿಗಳು.