ವಕೀಲೆ, ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು, ಹೈಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ, ನಿಶಾ ಜೇಮ್ಸ್ ನೇತೃತ್ವದ ಎಸ್ಐಟಿ 2,300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಗೊತ್ತಾಗಿದೆ.
ಜೀವಾ ಅವರಿಗೆ ಸಿಐಡಿ ಡಿವೈಎಸ್ಪಿಯಾಗಿದ್ದ ಕನಕಲಕ್ಷ್ಮಿ ಅವರು ಕಿರುಕುಳ ಹಾಗೂ ಚಿತ್ರಹಿಂಸೆ ನೀಡಿರುವುದು’ ಸಾಬೀತಾಗಿದೆ’ ಎಂದು ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರರ ಹೇಳಿಕೆ, ವಿಡಿಯೊ ಸಾಕ್ಷ್ಯಗಳನ್ನು ವರದಿಯ ಜತೆಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬನಶಂಕರಿ ಠಾಣಾ ವ್ಯಾಪ್ತಿಯ ರಾಘವೇಂದ್ರ ಲೇಔಟ್ನ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು ಕಳೆದ ನವೆಂಬರ್ 22ರಂದು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಕನಕಲಕ್ಷ್ಮಿ ಅವರು ನೀಡಿದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದರು. ಅವರ ಸಹೋದರಿ ಸಂಗೀತಾ ನೀಡಿದ ದೂರು ಆಧರಿಸಿ, ಬನಶಂಕರಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಆನಂತರ, ಸಿಬಿಐ ಅಧಿಕಾರಿಗಳನ್ನೂ ಒಳಗೊಂಡ ಎಸ್ಐಟಿಯನ್ನು ಹೈಕೋರ್ಟ್ ರಚಿಸಿತ್ತು.
‘ನಕಲಿ ದಾಖಲೆ ಸೃಷ್ಟಿ, ಮಾನಸಿಕ ಹಿಂಸೆ ನೀಡುವುದರ ಜತೆಗೆ ತನಿಖಾಧಿಕಾರಿ, ಈ ಪ್ರಕರಣದ ತನಿಖೆಯನ್ನು ವೈಯಕ್ತಿಕವಾಗಿ ಪರಿಗಣಿಸಿದ್ದರು ಎಂಬುದು ತನಿಖೆಯಿಂದ ಸಾಬೀತಾಗಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

ವಿಡಿಯೊ ಡಿಲಿಟ್: ‘ಪ್ರಕರಣ ದಾಖಲಾದ ಮೇಲೆ ಜೀವಾ ಅವರ ವಿಚಾರಣೆ ವೇಳೆ ಚಿತ್ರೀಕರಿಸಲಾಗಿದ್ದ ವಿಡಿಯೊದ ಕೆಲವೊಂದು ತುಣುಕುಗಳನ್ನು ತನಿಖಾಧಿಕಾರಿ ಡಿಲಿಟ್ ಮಾಡಿಸಿದ್ದರು. ಜೀವಾ ಅವರನ್ನು ವಿವಸ್ತ್ರಗೊಳಿಸಿರುವುದು ಹಾಗೂ ಇತರೆ ಕೆಲವೊಂದು ತುಣುಕುಗಳು ಇರಲಿಲ್ಲ. ಎಫ್ಎಸ್ಎಲ್ ತಜ್ಞರ ಮೂಲಕ ಮರು ಸಂಗ್ರಹಿಸಿದ ಬಳಿಕ ಆ ವಿಡಿಯೊಗಳು ಪತ್ತೆಯಾದವು’ ಎಂದು ಮೂಲಗಳು ತಿಳಿಸಿವೆ.
‘ಜೀವಾ ಅವರು ಆತ್ಮಹತ್ಯೆಗೂ ಮುನ್ನ ಕನಕಲಕ್ಷ್ಮಿ ಮೇಲೆ ಹಲವು ಆರೋಪ ಮಾಡಿದ್ದರು. ಅದರಲ್ಲಿ ಬಹುತೇಕ ಆರೋಪಗಳು ಸಾಬೀತಾಗಿವೆ. ಜೀವಾ ಅವರ ವಿಚಾರಣೆ ಸಂದರ್ಭದಲ್ಲಿ ಕನಕಲಕ್ಷ್ಮಿ ಅವರು ₹25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂಬುದು ತನಿಖೆಯ ವೇಳೆ ಸಾಬೀತಾಗಿದೆ.
‘ಜೀವಾ ಅವರ ದೇಹವನ್ನು ಪರಿಶೀಲಿಸಿದ್ದು ಮತ್ತು ಹಲ್ಲೆ ನಡೆಸಿರುವುದು ನಿಜ ಎಂಬುದಾಗಿ ಕನಕಲಕ್ಷ್ಮಿ ತನಿಖೆ ವೇಳೆ ಹೇಳಿಕೆ ನೀಡಿದ್ದರು. ಈ ಎಲ್ಲ ಅಂಶಗಳನ್ನೂ ಉಲ್ಲೇಖಿಸಿ ವರದಿ ಸಲ್ಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
