ಬೆಂಗಳೂರು: ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಉಭಯ ರಾಷ್ಟ್ರ ನಾಯಕರ ಹೇಳಿಕೆಗಳು ಯಾವುದೇ ಸಮಯದಲ್ಲೂ ಯುದ್ಧ ಘೋಷಿಸುವ ಭೀತಿಯನ್ನು ಉಂಟುಮಾಡಿವೆ. ಹೀಗಾಗಿ ಯುದ್ಧ ಸಂಭವಿಸಿದರೆ ಭಾರತೀಯ ಸೈನಿಕರಿಗೆ ಯಶಸ್ಸು ಸಿಗಲೆಂದು ಶ್ರೀರಾಮ ಸೇನೆ ಸಂಘಟನೆ ವತಿಯಿಂದ ನಗರದಲ್ಲಿ ಮಹಾಯಾಗ ನಡೆಸಲಾಯಿತು.
ಬೆಂಗಳೂರಿನ ರಾಜಾಜಿನಗರ ರಾಮಮಂದಿರದ ಬಿಬಿಎಂಪಿ ಮೈದಾನದಲ್ಲಿ ಪರಶುರಾಮನ ಬೃಹತ್ ಕೊಡಲಿಯಿಟ್ಟು ರಾಮ ಭದ್ರಕಯಾಗ, ಸಂಕಲ್ಪಯಾಗ, ಪರಶುರಾಮ ಯಾಗ ನೆರವೇರಿಸಲಾಯಿತು. ಒಂದು ವೇಳೆ ಯುದ್ಧ ಸಂಭವಿಸಿದ್ರೆ ಪಾಕಿಸ್ತಾನ ಉಗ್ರರ ಹುಟ್ಟಡಗಿಸಬೇಕೆಂದು ಹಾರೈಸಿ, ಭಾರತೀಯ ಯೋಧರಿಗೆ ಆತ್ಮಸ್ಥೈರ್ಯ, ಶಕ್ತಿ ತುಂಬಲು ಸಂಕಲ್ಪ ಮಾಡಿ ಸತತ 10 ಗಂಟೆ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ , ಹಿಂದೂ ಮುಖಂಡರಾದ ಗಂಗಾಧರ್ ಕುಲಕರ್ಣಿ, ರಾಮಾನಾನಂದ ಶ್ರೀಗಳು ಸೇರಿದಂತೆ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.
