ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಅಮೋಘ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ 100 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಐಪಿಎಲ್ 2025 ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ಆದರೆ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದ ಹಾರ್ದಿಕ್ಗೆ 7 ಹೊಲಿಗೆ ಬಿದ್ದಿತ್ತು. ಹೀಗಿದ್ದರೂ ಮೈದಾನಕ್ಕಿಳಿದು ಧೂಳೆಬ್ಬಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ ಲೋಕಲ್ ಸ್ಪಿನ್ನರ್ ವಿರುದ್ಧ ಸ್ವೀಪ್ ಶಾಟ್ ಆಡಿದ್ದರು. ಆಗ ಚೆಂಡು ಕಣ್ಣಿಗೆ ಬಿದ್ದು ಪೆಟ್ಟಾಗಿದ್ದು, ಏಳು 7 ಹೊಲಿಗೆ ಹಾಕಲಾಗಿದೆ. ತೀವ್ರ ಹೊಡೆತ ಮತ್ತು ನೋವಿದ್ದರೂ ವಿಶೇಷ ಕನ್ನಡಕವನ್ನು ಧರಿಸಿ ಆರ್ಆರ್ ವಿರುದ್ಧ ಕಣಕ್ಕಿಳಿದರು. ಜೊತೆಗೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು. ನಾಯಕನಾಗಿಯೂ ಮಿಂಚಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹಾರ್ದಿಕ್ 23 ಎಸೆತಗಳಲ್ಲಿ 48 ರನ್ ಬಾರಿಸಿದರು. ಅವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ, 1 ಸಿಕ್ಸರ್ ಇತ್ತು.
ಬ್ಯಾಟಿಂಗ್ನಲ್ಲೂ ಸ್ಫೋಟಿಸುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರ ಜೊತೆಗೆ ಬೌಲಿಂಗ್ನಲ್ಲೂ ಧಮಾಕ ಸೃಷ್ಟಿಸಿದ್ದಾರೆ. ಆರ್ಆರ್ ತಂಡದ ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ ಅವರ ವಿಕೆಟ್ ಅನ್ನೂ ಪಡೆದರು. ಶುಭಂ ದುಬೆ ಕೇವಲ 2 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಅವರ ಕಮಾಂಡಿಂಗ್ ಆಲ್ರೌಂಡ್ ಪ್ರದರ್ಶನದ ಹಿನ್ನೆಲೆ ರಾಯಲ್ಸ್ ವಿರುದ್ಧ ಎಂಐ ದೊಡ್ಡ ಗೆಲುವಿಗೆ ಕಾರಣರಾದರು. ಇದರೊಂದಿಗೆ ಆರ್ಆರ್ ತಂಡವನ್ನು ಪ್ಲೇಆಫ್ ರೇಸ್ನಿಂದ ಹೊರದಬ್ಬಿತು. ಆದರೆ ಹಾರ್ದಿಕ್ ಸತತ 6ನೇ ಗೆಲುವು ಸಾಧಿಸಿ ಪ್ಲೇಆಫ್ ಸನಿಹಕ್ಕೆ ಬಂದಿದೆ.
ಹಾರ್ದಿಕ್ ಪಾಂಡ್ಯ ಬದ್ಧತೆಗೆ ಮೆಚ್ಚುಗೆ
ಗಾಯದ ನಡುವೆಯೂ ಮೈದಾನದಲ್ಲಿ ಮಿನುಗಿದ ಹಾರ್ದಿಕ್ ಬದ್ಧತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನದ ಕಾರಣ ಮುಂಬೈ ಲೀಗ್ನಿಂದಲೇ ಹೊರಬಿದ್ದಿತ್ತು. ಆಗ ಹಾರ್ದಿಕ್ ನಾಯಕತ್ವದ ಮುಂಬೈ ಭಾರಿ ಮುಜುಗರಕ್ಕೆ ಒಳಗಾಗಿತ್ತು. ಇದೀಗ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದು, ಕಳೆದ ವರ್ಷದ ಅವಮಾನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಆರಂಭಿಕ ಐದು ಪಂದ್ಯಗಳಲ್ಲಿ 4 ಸೋಲು ಕಂಡಿದ್ದ ಎಂಐ, ಈಗ ಸತತ 6 ಗೆಲುವು ದಾಖಲಿಸಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ರೋಹಿತ್ ಶರ್ಮಾ (53) ಮತ್ತು ರಿಯಾನ್ ರಿಕಲ್ಟನ್ (61) ಅವರ ಅರ್ಧಶತಕ ಹಾಗೂ ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಆಟದ ಬಲದಿಂದ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 217 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ 16.1 ಓವರ್ಗಳಲ್ಲಿ 117 ರನ್ಗೆ ಆಲೌಟ್ ಆಯಿತು. ಟ್ರೆಂಟ್ ಬೋಲ್ಟ್, ಕರಣ್ ಶರ್ಮಾ ತಲಾ 3 ವಿಕೆಟ್, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಉರುಳಿಸಿ ಮಿಂಚಿದರು.
