ಬೆಂಗಳೂರು: ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ರೈತರು ಸೇರಿದಂತೆ ಇತರರಿಂದ ಭೂಮಿ ವಶಪಡಿಸಿಕೊಳ್ಳುವವರಿಗೆ ಪರಿಹಾರ ರೂಪದಲ್ಲಿ ನೀಡುವ ಮೊತ್ತಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿಗಳಾದ ಆರ್.ಆಶಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಈ ಆದೇಶದಿಂದ ರೈತರು ತಾವು ಪಡೆಯುವ ಪರಿಹಾರಕ್ಕೆ ಜಿಎಸ್ಟಿ ತೆರಿಗೆ ಪಾವತಿಸುವ ಅಗತ್ಯ ವಿರುವುದಿಲ್ಲ. ಅಲ್ಲದೆ, ಇಷ್ಟವಿಲ್ಲದಿದ್ದರೂ ಭೂಮಿಯನ್ನು ಕಳೆದುಕೊಂಡಿರುವ ಮತ್ತು ಅದರ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರು ಕಳೆದುಕೊಳ್ಳುವ ಭೂಮಿಗೆ ಪರ್ಯಾಯವಾಗಿ ನಷ್ಟ ತುಂಬಿಕೊಡಲು ಪರಿಹಾರ ಪಡೆಯುತ್ತಾರೆ. ಅದಕ್ಕೆ ಜಿಎಸ್ಟಿ ಅಡಿ ತೆರಿಗೆ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರು ಮತ್ತು ಕೆಐಎಡಿಬಿಇ ನಡುವೆ ಆಗಿರುವ ಒಪ್ಪಂದದಲ್ಲಿ ಹಲವು ಷರತ್ತುಗಳು ಒಳಗೊಂಡಿರಬಹುದು. ಆದರೆ ಅದಕ್ಕೂ ಅರ್ಜಿದಾರರಿಗೆ ನೀಡುವ ಪರಿಹಾರ ಮೊತ್ತಕ್ಕೂ ಸಂಬಂಧವಿಲ್ಲ. ಅದನ್ನು ಸಿಜಿಎಸ್ಟಿ/ಕೆಜಿಎಸ್ಟಿ ಶೆಡ್ಯೂಲ್-2ರಡಿ ಎಂಟ್ರಿ 5(ಇ) ಅಡಿ ಸೇವೆ ಎಂದು ಪರಿಗಣಿಸಲಾಗದು ಎಂದು ತಿಳಿಸಿದೆ.
ಜೊತೆಗೆ, ಒಪ್ಪಂದದ ವಿಚಾರದಲ್ಲಿ ಜಿಎಸ್ಟಿ ಕಾಯಿದೆಯನ್ನು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಸರ್ಕಾರ ಅರ್ಜಿದಾರರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಅದಕ್ಕೆ ಪರ್ಯಾಯವಾಗಿ ಪರಿಹಾರ ನೀಡುತ್ತಿದೆ. ಅದರಲ್ಲಿ ತೆರಿಗೆ ವಿಧಿಸುವ ಅಗತ್ಯವಿಲ್ಲ ತಿಳಿಸಿರುವ ನ್ಯಾಯಪೀಠ, ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಬೇಡಿಕೆ ನೋಟಿಸ್ಗಳನ್ನು ರದ್ದುಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಿಎಂಆರ್ಸಿಎಲ್ಗಾಗಿ ಕೆಎಐಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಆಗುವ ನಷ್ಟಕ್ಕೆ ಪರಿಹಾರವನ್ನು ನೀಡಿತ್ತು. ಆ ಭೂಮಿ ವರ್ಗಾವಣೆ ಮತ್ತು ಮಾರಾಟ ಜಿಸಿಎಸ್ಟಿ/ಕೆಜಿಎಸ್ಟಿ ಅಡಿ ಬಂದರೂ ಸಹ ಅದಕ್ಕೆ ಜಿಎಸ್ಟಿ ವಿಧಿಸಲು ವಿನಾಯ್ತಿ ಇದೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ತನಗೆ ಅಧಿಕಾರ ವಿಲ್ಲದಿದ್ದರೂ ಸಹ ಪರಿಹಾರ ಧನಕ್ಕೆ ಜಿಎಸ್ಟಿ ಪಾವತಿಸುವಂತೆ ನೋಟಿಸ್ ನೀಡಿರುವುದು ಕಾನೂನುಬಾಹಿರವಾಗಿದೆ. ಹಾಗಾಗಿ, ಆ ತೆರಿಗೆ ನೋಟಿಸ್ಗಳನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ಇದಕ್ಕೆ ಆಕ್ಷೇಪಿಸಿದ ಸರಕಾರಿ ವಕೀಲರು, ರೈತರ ಪರಿಹಾರದ ಮೇಲೆ ಜಿಎಸ್ಟಿ ವಿಧಿಸಿರುವುದು ಕಾನೂನು ಬದ್ಧವಾಗಿಯೇ ಇದೆ ಎಂದು ಸಮರ್ಥಿಸಿಕೊಂಡಿದ್ದರು.
ಪ್ರಕರಣದ ಹಿನ್ನೆಲೆ: ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬೆಂಗಳೂರು ನಗರದ ಸುತ್ತಮುತ್ತಲಿನ ಹಲವು ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಮಂಡಳಿ ಪರಿಹಾರಧನವನ್ನು ನಿಗದಿಪಡಿಸಿತ್ತು. ಅದರಂತೆ ಅವರು ಪರಿಹಾರ ಮೊತ್ತವನ್ನೂ ಸಹ ಪಡೆದುಕೊಂಡಿದ್ದರು. ಆದರೆ ವಾಣಿಜ್ಯ ತೆರಿಗೆ ಇಲಾಖೆ ಆ ಪರಿಹಾರ ಧನಕ್ಕೆ ಜಿಎಸ್ಟಿ ಪಾವತಿಸುವಂತೆ ರೈತರಿಗೆ ಶೋಕಾಸ್ ನೋಟಿಸ್ ನೀಡಿತ್ತು.
ರೈತರು ತಮ್ಮ ಪರಿಹಾರ ಧನಕ್ಕೆ ಜಿಎಸ್ಟಿ ಅನ್ವಯ ಸರಿಯಲ್ಲ ಎಂದು ಮನವಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸಿರಲಿಲ್ಲ. ಬದಲಿಗೆ ಮೊದಲು ನೀಡಿದ್ದ ತೆರಿಗೆ ಬೇಡಿಕೆ ನೋಟಿಸ್ ಅನ್ನು ಕಾಯಂಗೊಳಿಸಿದ್ದರು. ಅದನ್ನು ಪ್ರಶ್ನಿಸಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು.
