ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಸೂಕ್ತ ಕ್ರಮಕ್ಕೆ ಭಾರತೀಯ ಸೇನೆಗೆ ಸೂಚನೆ

ನವದೆಹಲಿ, ಮೇ 10: ಭಾರತದೊಂದಿಗೆ ಕದನ ವಿರಾಮ (Ceasefire) ಒಪ್ಪಂದ ಮಾಡಿಕೊಂಡ ಕೆಲವೇ ಗಂಟೆಗಳ ನಂತರ ಡ್ರೋನ್ ದಾಳಿ (Pakistan Drone Attack) ನಡೆಸಿ ಇಂದು ರಾತ್ರಿ ಶೆಲ್ ದಾಳಿಯನ್ನು ಪುನರಾರಂಭಿಸಿದೆ. ಗಡಿರಾಜ್ಯಗಳ ಹಲವು ಭಾಗಗಳಲ್ಲಿ ಪಾಕಿಸ್ತಾನ ದಾಳಿ ನಡೆಸಿದೆ. ಆ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಪಾಕಿಸ್ತಾನದ ದಾಳಿಗೆ ಸೂಕ್ತ ಉತ್ತರ ನೀಡಲು ಸೇನೆಗೆ ಸೂಚಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಇಂದು ಸಂಜೆ ಒಪ್ಪಂದ ಮಾಡಿಕೊಳ್ಳಲಾಯಿತು. ಕಳೆದ ಕೆಲವು ಗಂಟೆಗಳಿಂದ ಈ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸುತ್ತಿದೆ. ಭಾರತೀಯ ಸೇನೆಯು ಈ ಗಡಿ ಒಳನುಗ್ಗುವಿಕೆಗೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಮತ್ತು ಅದನ್ನು ನಿಭಾಯಿಸುತ್ತಿದೆ. ಈ ಅತಿಕ್ರಮಣವು ಅತ್ಯಂತ ಖಂಡನೀಯವಾಗಿದೆ. ಪಾಕಿಸ್ತಾನವು ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಈ ಒಳನುಗ್ಗುವಿಕೆಯನ್ನು ತಡೆಯಲು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
***
Sheikh Hasina ಅವಾಮಿ ಲೀಗ್ ಪಕ್ಷ ನಿಷೇಧಿಸಿದ ಬಾಂಗ್ಲಾದೇಶದ Yunus ಸರ್ಕಾರ!

ಢಾಕಾ: ಮಹತ್ವದ ಬೆಳವಣಿಗೆಯಲ್ಲಿ ಮಹಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ದಶಕಗಳ ಹಳೆಯ ಪಕ್ಷ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿದೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಶನಿವಾರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಪಕ್ಷವಾದ ಅವಾಮಿ ಲೀಗ್ ಅನ್ನು ನಿಷೇಧಿಸಿದ್ದು,ಕಳೆದ ವರ್ಷ ಅವರನ್ನು ಪದಚ್ಯುತಗೊಳಿಸಲು ಕಾರಣವಾದ ಸಾಮೂಹಿಕ ಪ್ರತಿಭಟನೆಗಳ ಮೇಲೆ ನಡೆಸಿದ ಕ್ರಮಗಳ ಕುರಿತಾದ ವಿಚಾರಣೆಯ ಫಲಿತಾಂಶ ಬರುವವರೆಗೂ ಆ ಪಕ್ಷವನ್ನು ನಿಷೇಧಿಸಿದೆ ಎನ್ನಲಾಗಿದೆ.
ಈ ಸಂಬಂಧ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು. ಪಕ್ಷವನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರವು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕ ಸಾಧಿಸಿದೆ ಎಂದು ಯೂನಸ್ ಕಚೇರಿ ತಿಳಿಸಿದೆ.
*****
ಜಮ್ಮು: ಪಾಕ್ ಶೆಲ್ ದಾಳಿಯಲ್ಲಿ BSF ಯೋಧ ಹುತಾತ್ಮ, ಏಳು ಮಂದಿಗೆ ಗಾಯ

ಜಮ್ಮು: ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಶನಿವಾರ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್ ಎಸ್ ಪುರ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದೆ. ಸಬ್ ಇನ್ಸ್ಪೆಕ್ಟರ್ ಮೊಹಮ್ಮದ್ ಇಮ್ತೇಯಾಜ್ ಅವರು ಹುತಾತ್ಮರಾಗಿರುವುದಾಗಿ ಹಿರಿಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನವು ಆರಂಭಿಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಇಮ್ತೇಯಾಜ್ ಗಾಯಗೊಂಡು ಹುತಾತ್ಮರಾದರೆ, ಇತರ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
*****
India-Pakistan war: ಕದನ ವಿರಾಮ ಘೋಷಣೆ; ಸಿಂಧೂ ಜಲ ಒಪ್ಪಂದ ಕುರಿತು ಭಾರತದ ನಿಲುವು ಅಚಲ

ನವದೆಹಲಿ: ಒಂದು ವಾರದಿಂದ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಕೊನೆಗೂ ಕದನ ವಿರಾಮ ಘೋಷಣೆಯೊಂದಿಗೆ ಅಂತ್ಯವಾಗಿದೆ.
ಇಂದು ಸಂಜೆ 5 ಗಂಟೆಯಿಂದ ಅನ್ವಯವಾಗುವಂತೆ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನಗಳು ಒಪ್ಪಿರುವುದಾಗಿ ವಿದೇಶಾಂಗ ಸಚಿವಾಲಯ ಘೋಷಿಸಿದ್ದು, ಭೂ, ವಾಯು ಮತ್ತು ನೌಕಾ ಪಡೆಯ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದರನ್ವಯ ಎರಡು ಕಡೆಗೆ ಸೂಚನೆಗಳನ್ನು ನೀಡಲಾಗಿದೆ. ಉಭಯ ದೇಶಗಳ ಡಿಜಿಎಂಒಗಳು ಮೇ 12ರಂದು ಮಧ್ಯಾಹ್ನ 12 ಗಂಟಗೆ ಮತ್ತೆ ಮಾತುಕತೆ ನಡೆಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
****
ನಾವು ಭಾರತದ ವಿರುದ್ಧ ಗೆದ್ದಿದ್ದೇವೆ: ಮತ್ತೆ ಸುಳ್ಳಿನ ಕತೆ ಹೇಳಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್

ಇಸ್ಲಾಮಾಬಾದ್ : ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ (India) ಮೇಲೆ ಮತ್ತೆ ದಾಳಿ ಮಾಡಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ನಡುವೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸುದ್ದಿಗೋಷ್ಠಿ ನಡೆಸಿ, “ನಮ್ಮ ದಾಳಿಯು ಶತ್ರುಗಳ (ಭಾರತ) ವಾಯುನೆಲೆ ಮತ್ತು ಮದ್ದುಗುಂಡುಗಳನ್ನು ನಾಶಪಡಿಸಿತು. ಅವರ ರಫೇಲ್ ಅನ್ನು ನಾವು ಹೊಡೆದುರುಳಿಸಿದ್ದೇವೆ. ನಾವು ಭಾರತದ ವಿರುದ್ಧ ಗೆದ್ದಿದ್ದೇವೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಕದನ ವಿರಾಮ ಉಲ್ಲಂಘನೆ ಬಗ್ಗೆ ಮಾತನಾಡದೆ, ತಮ್ಮ ಉದ್ದಟತನವನ್ನು ಮುಂದುವರೆಸಿದ್ದಾರೆ.
ಇದಕ್ಕೂ ಮೊದಲು ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಶೆಹಬಾಜ್ ಶರೀಫ್, “ಕದನ ವಿರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಚೀನಾ ಅಧ್ಯಕ್ಷ, ಚೀನಾದ ಜನರಿಗೆ ಧನ್ಯವಾದ ಹೇಳುತ್ತೇನೆ. ಸೌದಿ ಅರೇಬಿಯಾ, ಯುಎಇ, ಟರ್ಕಿ, ಕತಾರ್ ಮತ್ತು ಬ್ರಿಟನ್ ನಾಯಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದಿದ್ದಾರೆ.
