ಹಾಸನ- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಟ್ಟಡ ಮೇಲ್ಬಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ ಕೊಠಡಿಗಳು ಹಾಗೂ ಸಭಾಂಗಣದ ಶಂಕುಸ್ಥಾಪನೆಯನ್ನು ಭಾನುವಾರದಂದು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಿ. ಮದನ್ ಗೌಡ ಹಾಗೂ ಜಿಲ್ಲಾಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಗುದ್ದಲಿಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಡಿಯ ಹೆಚ್ಚುವರಿ ಕಟ್ಟಡದ ಗುದ್ದಲಿ ಪೂಜೆ ಮಾಡಲಾಗಿದೆ. ಪತ್ರಕರ್ತರ ಸಂಘ ಎಂದರೇ ಒಂದು ವಿಶೇಷವಾದ ಸ್ಥಾನಮಾನವಿದೆ. ಕ್ರಿಯಾತ್ಮಕವಾಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿರುವುದು ಒಂದು ಕಡೆಯಾದರೇ ವ್ಯವಸ್ಥಿತವಾದ ಕಟ್ಟಡದ ಪತ್ರಕರ್ತರ ಭವನ ಇದ್ದು, ಹೋಗಿ ಬರುವ ವಸತಿ ವ್ಯವಸ್ಥೆ ಸೇರಿದಂತೆ ಎಲ್ಲಾ ಒಳಗೊಂಡ ವಿಶೇಷ ಪತ್ರಕರ್ತರ ಭವನ ಹಾಸನದಲ್ಲಿದೆ ಎಂದರು. ಮುಂದುವರೆದ ಭಾಗವಾಗಿ ಇನ್ನೊಂದು ಕಾಮಗಾರಿಯನ್ನು ಅಧ್ಯಕ್ಷರ ನೇತೃತ್ವದಲ್ಲಿ ಭಾನುವಾರದಂದು ಗುದ್ದಲಿ ಪೂಜೆ ಮಾಡಲಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿ ನಾಲ್ಕು ತಿಂಗಳಲ್ಲೆ ಹಾಲ್ ಉದ್ಘಾಟನೆ ಆಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಮಾತನಾಡಿ, ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಮೂರನೇ ಅಂತಸ್ಥಿನ ಸಭಾಂಗಣದ ಕಾಮಗಾರಿಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಬಿ. ಮದನ್ ಗೌಡ ಅವರ ಸಾರಥ್ಯದಲ್ಲಿ ಚಾಲನೆ ನೀಡಲಾಗಿದೆ.
ಈ ಕಟ್ಟಡ ನಿರ್ಮಾಣಕ್ಕೆ ಹಾಸನ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಮೊದಲ ಅನುಧಾನ ನೀಡಿದ್ದಾರೆ. ಎಲ್ಲಾರ ಸಹಕಾರದೊಂದಿಗೆ ಕಟ್ಟಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ಹಾಸನ ಜಿಲ್ಲಾ ಪತ್ರಕರ್ತರ ಭವನಕ್ಕೆ ಮೊದಲು ಕಟ್ಟಡದ ಶಂಕುಸ್ಥಾಪನೆ, ನಿರ್ಮಾಣ ಮಾಡಿದವರು ನಮ್ಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು. ಹಿಂದೆ ಇದ್ದಂತಹ ಎಲ್ಲಾ ಅಧ್ಯಕ್ಷರು ಕೂಡ ಈ ಸಂಘಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ. ಈ ಕಟ್ಟಡದಲ್ಲೆ ಒಂದು ಸಭಾಂಗಣ ಕಟ್ಟುವ ಸದಾವಕಾಶ ನಮಗೆ ದೊರಕಿದ್ದು, ಒಂದು ಹಾಲ್ ನಲ್ಲಿ ಜಿಮ್ ಮತ್ತು ಗ್ರಂಥಾಲಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಇದೆ ವೇಳೆ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಪಿ.ಎ.ಶ್ರೀನಿವಾಸ್, ಸಿ.ಬಿ. ಸಂತೋಷ್, ಮಾಜಿ ಅಧ್ಯಕ್ಷರಾದ ಬಿ.ಆರ್. ಮಂಜುನಾಥ್, ಬಿ.ಆರ್. ಉದಯಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಪ್ರಕಾಶ್, ಸಕಲೇಶಪುರ ಪತ್ರಕರ್ತರ ಸಂಘದ ಗಣೇಶ್ ಹಾಗೂ ಪದಾಧಿಕಾರಿಗಳು, ಜಿಲ್ಲಾ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.
