ನವದೆಹಲಿ: ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ದ ರೀತಿಯ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮುಚ್ಚಲಾಗಿದ್ದ 32 ಏರ್ಪೋರ್ಟ್ಗಳನ್ನು ಈಗ ಪುನಾರಂಭಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಇಂದು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ತತ್ಕ್ಷಣದಿಂದಲೇ ಈ 32 ಏರ್ಪೋರ್ಟ್ಗಳು ವಿಮಾನ ಸೇವೆಗೆ ಲಭ್ಯ ಇರುತ್ತವೆ ಎಂದು ತಿಳಿಸಿದೆ.
2025ರ ಮೇ 15ರ ಬೆಳಗ್ಗೆ 5:29ರವರೆಗೂ ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ 32 ಏರ್ಪೋರ್ಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈಗ ಈ ಏರ್ಪೋರ್ಟ್ಗಳು ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ ತತ್ಕ್ಷಣದಿಂದ ಲಭ್ಯ ಇರುತ್ತದೆ. ಪ್ರಯಾಣಿಕರು ತಮ್ಮ ಫ್ಲೈಟ್ ಸ್ಥಿತಿಗತಿಯನ್ನು ನೇರವಾಗಿ ಏರ್ಲೈನ್ಸ್ ಸಂಸ್ಥೆಯೊಂದಿಗೆ ಪರಿಶೀಲಿಸುವಂತೆ ಶಿಫಾರಸು ಮಾಡುತ್ತೇವೆ’ ಎಂದು ಏರ್ಪೋರ್ಟ್ಸ್ ಅಥಾರಿಟಿ ತಿಳಿಸಿದೆ.
ಮೇ 9ರಂದು ವಿಮಾನ ನಿಲ್ದಾಣಗಳ ಪ್ರಾಧಿಕಾರವು 32 ಏರ್ಪೋರ್ಟ್ಗಳಲ್ಲಿ ನಾಗರಿಕ ವಿಮಾನ ಹಾರಾಟವನ್ನು ನಿಲ್ಲಿಸಲು ಆದೇಶಿಸಿತ್ತು. ಬೆಂಗಳೂರು, ಚೆನ್ನೈ, ಮುಂಬೈ ಇತ್ಯಾದಿ ನಗರಗಳ ಏರ್ಪೋರ್ಟ್ಗಳು ಸ್ಥಗಿತಗೊಂಡಿರಲಿಲ್ಲ. ಅಮೃತಸರ, ಚಂಡೀಗಡ, ಜೈಸಲ್ಮೇರ್, ಲೇಹ್, ಪಠಾಣಕೋಟ್, ಪೋರಬಂದರ್, ಶ್ರೀನಗರ, ಶಿಮ್ಲಾ ಮೊದಲಾದ ಭಾರತ-ಪಾಕ್ ಗಡಿಭಾಗದ ಪ್ರದೇಶಗಳಲ್ಲಿರುವ ಸ್ಥಳಗಳಲ್ಲಿನ ಏರ್ಪೋರ್ಟ್ಗಳನ್ನು ಮಾತ್ರವೇ ನಾಗರಿಕ ವಿಮಾನ ಸೇವೆಗೆ ನಿರ್ಬಂಧಿಸಲಾಗಿತ್ತು.
