ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸುತ್ತಿವೆ. ಹಲವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಉಗ್ರರ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಉಗ್ರ ಆದಿಲ್ ಹುಸೇನ್ ಥೋಕರ್ ಮನೆ ಕೂಡ ಧ್ವಂಸ ಮಾಡಲಾಗಿದೆ.
ಸುಮಾರು 9 ಕ್ಕೂ ಹೆಚ್ಚು ಉಗ್ರರ ಮನೆಗಳನ್ನು ಇಲ್ಲಿಯವರೆಗೂ ನೆಲಸಮ ಮಾಡಲಾಗಿದ್ದು, ಭದ್ರತಾ ಪಡೆಗಳು ಐಇಡಿ ಬಳಸಿ ಮನೆಯನ್ನು ಧ್ವಂಸ ಮಾಡಿವೆ. ಉಗ್ರ ಆದಿಲ್ ಮತ್ತು ಆತನ ಕುಟುಂಬವಿದ್ದ ಮನೆಯನ್ನು ಧ್ವಂಸ ಮಾಡಲಾಗಿದ್ದು, ಅವರ ಕುಟುಂಬವನ್ನೂ ಪಕ್ಕದ ಹಳ್ಳಿಯ ಸಂಬಂಧಿಕರ ಮನೆಗೆ ಶಿಫ್ಟ್ ಮಾಡಲಾಗಿದೆ.
ಒಂದು ಕಾಲದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಆದಿಲ್, ಮಂಗಳವಾರ ಪಹಲ್ಗಾಮ್ನಲ್ಲಿ ನಡೆದ ದಾಳಿ ನಡೆಸಿದ ಶಂಕಿತ ಉಗ್ರರ ಪೈಕಿ ಒಬ್ಬನಾಗಿದ್ದಾನೆ. 2018 ರಿಂದ ಆದಿಲ್ ಕುಟುಂಬದ ಜೊತೆಗೆ ಸಂಪರ್ಕದಲ್ಲಿಲ್ಲ ಎಂದು ಆತನ ತಾಯಿಯೇ ಹೇಳಿದ್ದಾರೆ. ನನ್ನ ಮಗ ಈ ಹತ್ಯೆಗಳಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಭಾಗಿಯಾಗಿದ್ದರೆ, ಅವನಿಗೆ ಸೈನಿಕರು ತಕ್ಕ ಶಿಕ್ಷೆ ಕೊಡಲಿ ಎಂದು ತಾಯಿ ಶಹಜಾದಾ ಬಾನೊ ಕಣ್ಣೀರಿಟ್ಟಿದ್ದಾರೆ.
ಈ ವೇಳೆ ಆದಿಲ್ಗೆ ಆತನ ತಾಯಿ ಮನವಿಯೊಂದನ್ನು ಮಾಡಿಕೊಂಡಿದ್ದು. ‘ನಾವು ನೆಮ್ಮದಿಯಿಂದ ಬದುಕಬೇಕು. ನೀನು ಬಂದು ಶರಣಾಗು’ ಎಂದು ಕೇಳಿಕೊಂಡಿದ್ದಾರೆ. ಆದಿಲ್ ತಂದೆ ವಲೀಮ್, ಸಹೋದರರಾದ ಜಹೀರ್ ಮತ್ತು ಅರ್ಶ್ಲಾಮ್ ಮತ್ತು ಸಹೋದರ ಸಂಬಂಧಿಗಳಾದ ಜುಲಂಕರ್ ಮತ್ತು ಸಜ್ಜದ್ ಎಲ್ಲರೂ ಅರೆಸ್ಟ್ ಆಗಿದ್ದಾರೆ. ಆದಿಲ್ ತಾಯಿಯನ್ನು ಒಂದು ದಿನದ ಮಟ್ಟಿಗೆ ಪೊಲೀಸರು ವಶಕ್ಕೆ ಪಡೆದಿದ್ದರು.
