ಕೆ ಆರ್ ಪೇಟೆ: ತಾಲ್ಲೂಕು ಶೀಳನೆರೆ ಹೋಬಳಿ ಮುರುಕನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಹೆಮ್ಮನಹಳ್ಳಿ ಜಗದೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯತಿ ಹಿಂದಿನ ಅಧ್ಯಕ್ಷರಾಗಿದ್ದ ಹಿರಳಹಳ್ಳಿ ಶೇಖರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿದ್ದ ಹಿನ್ನಲೆಯಲ್ಲಿ ಅಧ್ಯಕ್ಷಸ್ಥಾನ ಬಯಸಿ ಜಗದೀಶ್ ಅವರನ್ನು ಬಿಟ್ಟರೆ ಉಳಿದ ಯಾವ ಸದಸ್ಯರು ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪಿಡಬ್ಲ್ಯೂಡಿ ಎಇಇ ಮಂಜುನಾಥ್ ಅದ್ಯಕ್ಷ ಗಾದಿಯನ್ನು ಘೋಷಿಸಿದರು.
ಹೆಮ್ಮನಹಳ್ಳಿ ಜಗದೀಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು,ಹಿರಿಯರು,
ಮುಖಂಡರು ಹೂವಿನ ಹಾರಗಳನ್ನು ಹಾಕುವ ಮೂಲಕ ಪಟಾಕಿ ಸಿಡಿಸುವ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಬಳಿಕ ಮಾತನಾಡಿದ ಹೊಸಹೊಳಲು ಸೊಸೈಟಿ ನಿರ್ದೇಶಕ ಕೃಷ್ಣೇಗೌಡ ಪಂಚಾಯತಿ ಎಲ್ಲಾ ಸದಸ್ಯರು ಸೇರಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಬೇಕು.ಏಕೆಂದರೆ ನಮ್ಮ ಪಂಚಾಯತಿಯಲ್ಲಿ ಯಾವಾಗಲೂ ಚುನಾವಣೆ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆಯುತ್ತಿತ್ತು. ಎಲ್ಲಾ ಪಂಚಾಯತಿಗಳಲ್ಲೂ ಇಂತಹ ಪ್ರಕ್ರಿಯೆಗಳು ಅವಶ್ಯಕತೆ ಇದೆ. ಅಧ್ಯಕ್ಷ ಸ್ಥಾನಕ್ಕೆ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿ ಅಭಿವೃದ್ಧಿ ಹಾಗೂ ಪಂಚಾಯತಿ ವ್ಯಾಪ್ತಿಯ ಎಂಟು ಗ್ರಾಮಗಳ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಅವುಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುವಂತೆ ಸಲಹೆ ನೀಡಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೆಮ್ಮನಹಳ್ಳಿ ಜಗದೀಶ್ ಮಾತನಾಡಿ ನನ್ನ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ನನ್ನ ಸಹೋದ್ಯೋಗಿ ಸದಸ್ಯರಿಗೆ,ಪಂಚಾಯತಿ ವ್ಯಾಪ್ತಿಯ ಸರ್ವ ಪಕ್ಷಗಳ ಮುಖಂಡರಿಗೆ ನನಗೆ ಜವಾಬ್ದಾರಿ ನೀಡಿದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ನನ್ನ ಜವಾಬ್ದಾರಿಯ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದಂತೆ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇನೆ.ಅಧಿಕಾರ ಯಾರಿಗೂ ಶಾಶ್ವತವಲ್ಲ.ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೋ ಅಷ್ಟು ದಿನದವರೆಗೂ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ,ಬೀದಿದೀಪಗಳು,ರಸ್ತೆ ಚರಂಡಿ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಿ ಅವುಗಳ ನಿರ್ವಹಣೆಗೆ ಪಂಚಾಯತಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.ತಾಲ್ಲೂಕಿನಲ್ಲಿದೆ ನಮ್ಮ ಪಂಚಾಯತಿಗೆ ತನ್ನದೇ ಆದ ಹೆಸರನ್ನು ಗಳಿಸಿರುವುದರಿಂದ ಅದಕ್ಕೆ ನಾನು ಸಹ ಹೆಚ್ಚು ಒತ್ತು ನೀಡುವ ಮೂಲಕ ಪಂಚಾಯತಿ ಅಭಿವೃದ್ಧಿ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತಿ ಉಪಾಧ್ಯಕ್ಷೆ ನಂದಿನಿ,ಗ್ರಾ. ಪಂ ಮಾಜಿ ಅಧ್ಯಕ್ಷರ ಅಗಸರಹಳ್ಳಿ ದೇವರಾಜು ಎ ಎನ್,ಮುಖಂಡರಾದ ಉಮೇಶ್,ಹೆಚ್ ಜೆ ಶೇಖರ್,ರಮೇಶ್,ಹೆಮ್ಮನಹಳ್ಳಿ ಸತೀಶ್, ಅಗಸರಹಳ್ಳಿ ಸೊಸೈಟಿ ನಿರ್ದೇಶಕ ಬಾಬು, ಬಲರಾಮ್,ಹಿರಳಹಳ್ಳಿ ತಿಮ್ಮೇಗೌಡ, ಹೆಮ್ಮನಹಳ್ಳಿ ಅಣ್ಣೆಗೌಡ, ಪುಟ್ಟಸ್ವಾಮಿ ಗೌಡ, ಪುನೀತ್, ಎ ವಿ ರವಿ,ಪಂಚಾಯತಿ ಸದಸ್ಯರಾದ ಜಗದೀಶ್, ಲಲಿತ, ದೇವರಾಜು, ಹೆಚ್ ಟಿ ಜಗದೀಶ್, ಕುಮಾರಸ್ವಾಮಿ, ಶಿವ ಸಾಗರ್, ಕುಮಾರಸ್ವಾಮಿ, ಬಿ ಎಸ್ ಪುಷ್ಪ, ಪೂರ್ಣಿಮ, ರುಕ್ಮಿಣಿ, ರತ್ನಮ್ಮ, ಕವಿತ, ಲೀಲಾ, ಧನಂಜಯ್, ಪುನೀತ್ ಕುಮಾರ್, ಶೋಭಾ,ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನಿಲ್ ಬಾಬು, ಪಿಡಿ ಓ ಸೈಯದ್ ಮುಜಾಕಿರ್ ಸೇರಿದಂತೆ ಇತರರು ಹಾಜರಿದ್ದರು.
