ಊಟಿ :-ಹಿರಿಯ ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸನ್ ಮಂಗಳವಾರ(ಮೇ20) ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಅವರಿಗೆ 95 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ
ಶ್ರೀನಿವಾಸನ್ ಅವರು ದೇಶದ ಸ್ಥಳೀಯ ಪರಮಾಣು ವಿದ್ಯುತ್ ಕಾರ್ಯಕ್ರಮಗಳಲ್ಲಿ ಭಾರತದ ಪರಮಾಣು ಯೋಜನೆಗಳ ಪಿತಾಮಹ ಡಾ.ಹೋಮಿ ಜಹಂಗೀರ್ ಭಾಭಾ ಅವರೊಂದಿಗೆ ಕೆಲಸ ಮಾಡಿದ್ದರು. ಪ್ರತಿಷ್ಠಿತ ನಾಗರಿಕ ಗೌರವ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
ಬೆಂಗಳೂರು ಮೂಲದ ಡಾ. ಮಾಲೂರು ರಾಮಸ್ವಾಮಿ ಶ್ರೀನಿವಾಸನ್ ಅವರು ಪರಮಾಣು ಶಕ್ತಿ ಆಯೋಗದ (ARC) ಅಧ್ಯಕ್ಷರಾಗಿದ್ದರು. ಪರಮಾಣು ಶಕ್ತಿ ಇಲಾಖೆಯ (DAE) ಕಾರ್ಯದರ್ಶಿ ಮತ್ತು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನ ಸ್ಥಾಪಕ-ಅಧ್ಯಕ್ಷರಾಗಿದ್ದರು.
ಜಿಲ್ಲಾಧಿಕಾರಿ ಲಕ್ಷ್ಮಿ ಭವ್ಯ ತನ್ನೀರು ಅವರು ಶ್ರೀನಿವಾಸನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
